ADVERTISEMENT

ದೇಸಿ ಸಾಧಕರು | ಕೊಡಗು: ಹಳ್ಳಿ ಮಕ್ಕಳಿಗೆ ನೃತ್ಯ ಕಲಿಸುವ ಅಪರೂಪದ ಸಾಧಕಿ

ಕೊಡಗಿನ ಕಾಡಂಚಿನ ಗ್ರಾಮವಾದ ತಿತಿಮತಿಯಲ್ಲಿದ್ದಾರೆ ನೃತ್ಯ ಕಲಾವಿದೆ ಎಂ.ಕೆ.ಶ್ವೇತಾ

ಕೆ.ಎಸ್.ಗಿರೀಶ್
Published 28 ಆಗಸ್ಟ್ 2024, 6:06 IST
Last Updated 28 ಆಗಸ್ಟ್ 2024, 6:06 IST
ಮಂತ್ರಾಲಯದಲ್ಲಿ ಭಾನುವಾರ ನಡೆದ ‘ನಾಮ ರಾಮಾಯಣ’ದಲ್ಲಿ ಭಾಗಿಯಾಗಿದ್ದ ಕೊಡಗಿನ ತಿತಿಮತಿಯ ನಾಟ್ಯಾಂಜಲಿ ಸಂಗೀತ ಮತ್ತು ನೃತ್ಯ ಶಾಲೆಯ ನೃತ್ಯಪಟುಗಳು
ಮಂತ್ರಾಲಯದಲ್ಲಿ ಭಾನುವಾರ ನಡೆದ ‘ನಾಮ ರಾಮಾಯಣ’ದಲ್ಲಿ ಭಾಗಿಯಾಗಿದ್ದ ಕೊಡಗಿನ ತಿತಿಮತಿಯ ನಾಟ್ಯಾಂಜಲಿ ಸಂಗೀತ ಮತ್ತು ನೃತ್ಯ ಶಾಲೆಯ ನೃತ್ಯಪಟುಗಳು   

ಮಡಿಕೇರಿ: ಗ್ರಾಮೀಣ ಭಾಗದ ಮಕ್ಕಳಿಗೆ ಭರತನಾಟ್ಯ ಕಲಿಸಬೇಕು ಎಂಬ ಧ್ಯೇಯ ಇಟ್ಟುಕೊಂಡು ಅದಕ್ಕಾಗಿ ಅವಿರತ ಶ್ರಮಿಸುವ ಅಪರೂಪದ ಕಲಾವಿದೆ ಎಂ.ಕೆ.ಶ್ವೇತಾ.

ಕಾಡಂಚಿನ ಗ್ರಾಮವಾದ ತಿತಿಮತಿಯಲ್ಲಿರುವ ಇವರು ಭರತನಾಟ್ಯ, ಸೆಮಿ ಕ್ಲಾಸಿಕಲ್, ಜಾನಪದ ಹಾಗೂ ಪಾಶ್ವಾತ್ಯ ನೃತ್ಯ ಪ್ರಕಾರಗಳಲ್ಲಿ ಸಿದ್ಧಹಸ್ತರು. ಗ್ರಾಮೀಣ ಭಾಗದ ಹಾಗೂ ಕಾಡಂಚಿನ ಮಕ್ಕಳಿಗೆ ಭರತನಾಟ್ಯ ಕಲಿಯುವುದು ಕಬ್ಬಿಣದ ಕಡಲೆ ಎಂಬಂತಹ ವಾತಾವರಣವನ್ನು ಬದಲಿಸಲು ಇದೀಗ ಅವರು ಹೊರಟಿದ್ದು, ಅದರಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ.

ಇವರು ಅಲ್ಲಿ ಶುರು ಮಾಡಿರುವ ನೃತ್ಯ ತರಬೇತಿ ಶಾಲೆಗಳಲ್ಲಿ ಒಟ್ಟು 78 ವಿದ್ಯಾರ್ಥಿಗಳು ನೃತ್ಯ ಕಲಿಯುತ್ತಿದ್ದಾರೆ. ಇವರಿಗೆಲ್ಲ ಅತ್ಯಂತ ಕಡಿಮೆ ಶುಲ್ಕದಲ್ಲಿ ಹಾಗೂ ಶುಲ್ಕ ಪಾವತಿಸಲು ಸಾಧ್ಯವಾಗದವರಿಗೆ ಉಚಿತವಾಗಿ ನೃತ್ಯವನ್ನು ಹೇಳಿ ಕೊಡುತ್ತಿರುವುದು ಇವರ ಹೆಗ್ಗಳಿಕೆ.

ADVERTISEMENT

ಇವರ ತಾಯಿ ಹೇಮಾವತಿ ಅವರೂ ಪ್ರಸಿದ್ಧ ನೃತ್ಯ ಕಲಾವಿದರು. ಅವರು ವಿರಾಜಪೇಟೆ ಹಾಗೂ ಅಮ್ಮತ್ತಿಯಲ್ಲಿ ಆರಂಭಿಸಿದ್ದ ನಾಟ್ಯಾಂಜಲಿ ಸಂಗೀತ ಮತ್ತು ನೃತ್ಯ ಶಾಲೆಯ ಶಾಖೆಯನ್ನು ಶ್ವೇತಾ ತಿತಿಮತಿಯಲ್ಲಿ ತೆರೆದರು. ಮಾತ್ರವಲ್ಲ, ತಮ್ಮದೇ ಯಾಹವಿ ಡ್ಯಾನ್ಸ್ ಅಕಾಡೆಮಿಯನ್ನೂ ತೆರೆದು ಮಕ್ಕಳಿಗೆ ನೃತ್ಯದ ಪಾಠ ಹೇಳುತ್ತಿದ್ದಾರೆ.

ಇವರಲ್ಲಿಗೆ ನೃತ್ಯ ಕಲಿಯಲು ಬರುವ ಬಹಳಷ್ಟು ಮಂದಿ ಸೊಗಸಾಗಿ ನೃತ್ಯ ಮಾಡಿದರೂ ಅವರು ನೃತ್ಯದ ವಸ್ತ್ರವಿನ್ಯಾಸಗಳನ್ನು ಖರೀದಿಸಲು ಶಕ್ತರಾಗಿಲ್ಲ. ಇದನ್ನು ಮನಗಂಡ ಶ್ವೇತಾ ಯಾಹವಿ ಡ್ಯಾನ್ಸ್ ಕಲೆಕ್ಷನ್ಸ್ ಆರಂಭಿಸಿ ಕಡಿಮೆ ಬೆಲೆಗೆ ಬಾಡಿಗೆಗೆ ಕೊಡುವುದು, ತೀರಾ ಬಡವರಿಗೆ ಉಚಿತವಾಗಿ ನೀಡುವ ಮೂಲಕ ಗ್ರಾಮೀಣ ಬಡ ಜನರ ಮಕ್ಕಳಿಗೆ ತಮ್ಮ ಪ್ರತಿಭೆ ‍ಪ್ರದರ್ಶಿಸಲು ಅನುವು ಮಾಡಿಕೊಟ್ಟಿದ್ದಾರೆ.

ಕಾಂತರಾಜ್ ಮತ್ತು ಹೇಮಾವತಿ ಅವರ ಪುತ್ರಿಯಾದ ಇವರು ಎಂಎಸ್ಸಿ ಬಿಇಡಿ ವ್ಯಾಸಂಗ ಮಾಡಿದ್ದು, ಸದ್ಯ ಗೋಣಿಕೊಪ್ಪಲು ಸಮೀಪದ ಕಲತ್ಮಾಡು ಗ್ರಾಮದ ಲಯನ್ಸ್ ಪ್ರೌಢಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಹೇಮಾವತಿ ಅವರೇ ಇವರ ಗುರು, ವಿ.ಕೆ.ಶ್ರೀನಿವಾಸ್ ಅವರ ಬಳಿ ಇವರು ಸಂಗೀತ ಕಲಿತಿದ್ದಾರೆ.

‌ಈಗಾಗಲೇ ಇವರು 4 ಯುವಜನೋತ್ಸವಗಳಲ್ಲಿ, ಗೋಣಿಕೊಪ್ಪಲು ದಸರೆ ಹಾಗೂ ವಿವಿಧ ಗಣೇಶೋತ್ಸವಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್‌ ಅವರು ಆಯೋಜಿಸುವ ಚಾಂಪಿಯನ್‌ಶಿಪ್‌ ಕಾರ್ಯಕ್ರಮಗಳಲ್ಲಿ ರಾಷ್ಟ್ರಮಟ್ಟದವರೆಗೂ ಇವರ ತಮ್ಮ ನೃತ್ಯ ಪ್ರದರ್ಶಿಸಿರುವುದು ವಿಶೇಷ.

ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯು ಇವರಿಗೆ 2019ರಲ್ಲಿ ನಾಟ್ಯಪ್ರಿಯ ರಾಷ್ಟ್ರೀಯ ‍ಪುರಸ್ಕಾರ ಹಾಗೂ ‌2023ರಲ್ಲಿ ನಾಟ್ಯ ರತ್ನ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಿದೆ. 2021ರಲ್ಲಿ ಬೆಂಗಳೂರಿನಲ್ಲಿ ಶ್ರೀನೃತ್ಯಂಜಲಿ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ಇವರು ನೃತ್ಯ ನಿರಂತರ ರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಶ್ವೇತಾ ಅವರನ್ನು ಸಂಪರ್ಕಿಸಿದಾಗ ಅವರು, ‘ಭರತನಾಟ್ಯ ಕಲೆಯು ಕೇವಲ ಪಟ್ಟಣ, ನಗರ ಪ್ರದೇಶದ ಮಕ್ಕಳಿಗಷ್ಟೇ ಸೀಮಿತವಾಗಿರಬಾರದು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಈ ಕಲೆ ತಲುಪಬೇಕು ಎಂಬ ಧ್ಯೇಯ ಇಟ್ಟುಕೊಂಡು ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದೇನೆ. ಇದಕ್ಕೆ ನನ್ನ ತಂದೆ, ತಾಯಿ, ತಂಗಿ ಹಾಗೂ ಪತಿ ಬೆನ್ನುಲುಬಾಗಿ ನಿಂತಿದ್ದಾರೆ’ ಎಂದು ಹೇಳಿದರು.

ನೃತ್ಯ ಕಲಾವಿದೆ ಎಂ.ಕೆ.ಶ್ವೇತಾ

ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಕಲಾವಿದೆ ಅನೇಕ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದ ಸಾಧಕಿ ಇವರ ಬಳಿ ಕಲಿಯುತ್ತಿದ್ದಾರೆ 78 ಮಕ್ಕಳು

ಮಂತ್ರಾಲಯದ ‘ನಾಮ ರಾಮಾಯಣ’ದಲ್ಲಿ ಪ್ರದರ್ಶನ

ಮಂತ್ರಾಲಯದಲ್ಲಿ ಭಾನುವಾರ ನಡೆದ ‘ನಾಮ ರಾಮಾಯಣ’ ಎಂಬ ಕಾರ್ಯಕ್ರಮದಲ್ಲಿ ಶ್ವೇತಾ ಹಾಗೂ ಇವರ ತಿತಿಮತಿಯ ನಾಟ್ಯಂಜಲಿ ನೃತ್ಯ ಶಾಲೆಯ 14 ಮಕ್ಕಳು ಭಾಗವಹಿಸಿ ಇಂಟರ್‌ನ್ಯಾಷನಲ್ ಬುಕ್‌ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದರು. ಗಾನ್ಯ ಗಂಗಮ್ಮ ಧೀಷ್ಮಾ ಯಶ್ಮಿತಾ ಹಂಶಿಕಾ ಮಾನಸಾ ಮೋನಿಕಾ ಸ್ಪಂದನಾ ಮೋಕ್ಷಿತ್ ರುತಿಕಾ ರಚಿತಾ ಕವಿತಾ ರೇಷ್ಮಾ ಚಂದ್ರಾವತಿ ಭುವನೇಶ್ವರಿ ಅಮೋಘ ನೃತ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.