ಸುಂಟಿಕೊಪ್ಪ: ಇಲ್ಲಿಯ ಗ್ರೇಡ್ 1 ಗ್ರಾಮ ಪಂಚಾಯಿತಿಯಲ್ಲಿ ಕಸದ ವಿಲೇವಾರಿಗೆ ವಾಹನದ ಸಮಸ್ಯೆ ಎದುರಾಗಿದ್ದು, ಜನ ಕಸ ಎಸೆಯಲು ಸಾಧ್ಯವಾಗದೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಹಲವು ದಿನಗಳಿಂದ ಕಸ ವಿಲೇವಾರಿಗೆ ಕೇವಲ ಒಂದು ಟ್ರ್ಯಾಕ್ಟರ್ ಮಾತ್ರ ಬಳಕೆಯಾಗುತ್ತಿದೆ. ಇದರಿಂದ ಹಲವು ಬಡಾವಣೆಗಳಲ್ಲಿ ಕಸ ವಿಲೇವಾರಿಯಾಗದೆ ಹಾಗೆಯೇ ಉಳಿದಿದೆ. ಕಳೆದ ಒಂದು ವರ್ಷಗಳ ಹಿಂದೆ ಬಡಾವಣೆಗಳಿಗೆ ಕಸ ವಿಲೇವಾರಿಗಾಗಿ ಬಳಕೆ ಮಾಡುತ್ತಿದ್ದ ಆಟೊ ರಿಪೇರಿಗೆ ಬಂದಿದ್ದು, ಅದೂ ಮೂಲೆ ಸೇರಿದೆ. ಇದೀಗ ಇರುವ ಒಂದು ಟ್ರ್ಯಾಕ್ಟರ್‌ನಲ್ಲಿ ಎಲ್ಲ ಬಡಾವಣೆಗಳಿಗೆ ತೆರಳಲು ಸಾಧ್ಯವಾಗದೆ ಮನೆ ಮುಂದೆ ಕಸದ ರಾಶಿಯು ಬಿದ್ದು ವಾತಾವರಣವೇ ವಾಸನೆಯಿಂದ ಕೂಡಿದೆ.
ಇಲ್ಲಿರುವ ಕಸ ವಿಲೇವಾರಿ ಟ್ರ್ಯಾಕ್ಟರ್ ವಾರಕ್ಕೊಮ್ಮೆ ಬಡಾವಣೆಗಳಿಗೆ ಬರುತ್ತಿದೆ. ಹಾಗಾಗಿ, ಕಸ ಮತ್ತು ತ್ಯಾಜ್ಯ ವಸ್ತುಗಳ ಬಕೆಟ್‌ಗಳನ್ನು ಜನರು ಮನೆಯ ಮುಂದಿನ ರಸ್ತೆಯಲ್ಲಿ ಇಡುತ್ತಿದ್ದಾರೆ. ಇದರಿಂದ ಹಸು, ನಾಯಿ, ಬೆಕ್ಕು, ಇಲಿಗಳು ಎಳೆದು ಹಾಕಿ ಇಡೀ ರಸ್ತೆಯು ಕಸದಿಂದ ಆವೃತವಾಗಿವೆ. ಕೆಲವು ಕಡೆಗಳಲ್ಲಿ ಕಸ ವಿಲೇವಾರಿಯಾಗದ ಹಿನ್ನೆಲೆಯಲ್ಲಿ ಜನ ರಸ್ತೆ ಬದಿಯ ಚರಂಡಿಗಳಲ್ಲಿ, ತಡೆಗೋಡೆಯ ಪಕ್ಕದಲ್ಲಿ ಹಾಕುತ್ತಿರುವುದರಿಂದ ಈ ಭಾಗ ಗಬ್ಬು ನಾರುತ್ತಿದೆ.
ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಈಗಾಗಲೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಈ ಹಿಂದಿನ ಪಿಡಿಒ ನೇತೃತ್ವದ ನಿಯೋಗ ತೆರಳಿ ಕಸ ವಿಲೇವಾರಿಗೆ ವಾಹನ ನೀಡುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಸ್ಪಂದಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.