ADVERTISEMENT

ಸೋಮವಾರಪೇಟೆ: ನೈಸರ್ಗಿಕ ಪದ್ಧತಿಯಲ್ಲಿ ಕಾಫಿ ಬೆಳೆದ ಕೃಷಿಕ

ಸಾವಯವ ಕಾಫಿಗಿದೆ ಉತ್ತಮ ಬೇಡಿಕೆ, ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾವಯವ ಕಾಫಿ ಬೆಳೆಗಾರರು

ಡಿ.ಪಿ.ಲೋಕೇಶ್
Published 8 ನವೆಂಬರ್ 2024, 5:34 IST
Last Updated 8 ನವೆಂಬರ್ 2024, 5:34 IST
<div class="paragraphs"><p>ಸೋಮವಾರಪೇಟೆ ಸಮೀಪದ&nbsp;ಹಾರಳ್ಳಿ ಗ್ರಾಮದಲ್ಲಿನ ಪ್ರಗತಿಪತ ಕೃಷಿಕ ಖಾಲಿಸ್ಥ ಎಂಬುವವರ ಕಾಫಿ ತೋಟದಲ್ಲಿ ಕಾಳು ಮೆಣಸಿನ ಬಳ್ಳಿ ಫಸಲಿನೊಂದಿಗೆ ಹಸಿರಾಗಿರುವುದು.</p></div>

ಸೋಮವಾರಪೇಟೆ ಸಮೀಪದ ಹಾರಳ್ಳಿ ಗ್ರಾಮದಲ್ಲಿನ ಪ್ರಗತಿಪತ ಕೃಷಿಕ ಖಾಲಿಸ್ಥ ಎಂಬುವವರ ಕಾಫಿ ತೋಟದಲ್ಲಿ ಕಾಳು ಮೆಣಸಿನ ಬಳ್ಳಿ ಫಸಲಿನೊಂದಿಗೆ ಹಸಿರಾಗಿರುವುದು.

   

ಸೋಮವಾರಪೇಟೆ: ಕಾಫಿ ಎಂದರೆ ರಾಸಾಯನಿಕ ಗೊಬ್ಬರ ಹಾಕಲೇಬೇಕು, ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬೇಕು ಎನ್ನುವ ಮಾತನ್ನು ಸುಳ್ಳಾಗಿಸಿದ ಕೊಡಗು ಜಿಲ್ಲೆಯ ಅತಿ ವಿರಳ ಪ್ರಗತಿಪರ ಕಾಫಿ ಬೆಳೆಗಾರರಲ್ಲಿ ತಾಲ್ಲೂಕಿನ ಅಬ್ಬೂರುಕಟ್ಟೆ ಗ್ರಾಮದ ಖಾಲಿಸ್ಥ ಡಿಸಿಲ್ವ ಒಬ್ಬರು.

ಇವರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸುತ್ತಿದ್ದು, ಇತರ ಬೆಳೆಗಾರರ ಗಮನ ಸೆಳೆದಿದ್ದಾರೆ.

ADVERTISEMENT

ಇವರು ತಮ್ಮ ಹಾರಳ್ಳಿ ಗ್ರಾಮದಲ್ಲಿನ 12 ಎಕರೆ ಪ್ರದೇಶದಲ್ಲಿ ರೊಬೊಷ್ಟ ಕಾಫಿಯನ್ನು ನೈಸರ್ಗಿಕ ಕೃಷಿಯ ವಿಧಾನದಲ್ಲಿ ಬೆಳೆಯುತ್ತಿದ್ದಾರೆ. ಇವರು ಯಾವುದೇ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸದೆ, ಬೆಳೆಯುತ್ತಿದ್ದು, ದುಪ್ಪಟ್ಟು ಲಾಭ ಪಡೆಯುತ್ತಿದ್ದಾರೆ. ಕಳೆಕೀಳುವುದು, ಗೊಬ್ಬರ ಹಾಕುವುದು ಸೇರಿದಂತೆ ಯಾವುದೇ ಕೆಲಸ ಈ ಪದ್ಧತಿಯಲ್ಲಿ ಇಲ್ಲದೇ ಇರುವುದರಿಂದ ಇವರಿಗೆ ಕೇವಲ ಕಳೆ ಕೊಚ್ಚುವುದು ಮತ್ತು ಕಾಂಪೋಷ್ಟನ್ನು ಮಣ್ಣಿಗೆ ಸಿಂಪಡಿಸುವುದು ಹಾಗೂ ಇತರೆ ಕೆಲಸಗಳಿಗೆ ಕೆಲವೇ ಕೆಲವು ಕಾರ್ಮಿಕರ ಅವಶ್ಯಕತೆ ಇದ್ದು, ಕಾಫಿ ಕೊಯ್ಲಿಗೆ ಮಾತ್ರ ಹೆಚ್ಚಿನ ಕಾರ್ಮಿಕರು ಬೇಕಾಗುತ್ತದೆ. ಇದರಿಂದಾಗಿ ಇಲ್ಲಿನ ಖರ್ಚು ಕಡಿಮೆಯಾಗಿದೆ.

ಕಾಫಿ ಬೆಳೆಗಾರರನ್ನು ಕಾಡುವ ಕಾರ್ಮಿಕರು, ಕೃಷಿ ಪರಿಕರದ ಬೆಲೆ ದುಪ್ಪಾಟ್ಟಾಗಿರುವುದರ ಪರಿಣಾಮ ಇಲ್ಲಿಲ್ಲ. ಬದಲಿಗೆ ಇಲ್ಲಿನ ನಾಲ್ಕು ಅಡಿಗೆ ಒಂದು ಗಿಡವನ್ನು ನೆಟ್ಟು, ಸಾಲಿನಿಂದ ಸಾಲಿಗೆ 11 ಅಡಿ ಸ್ಥಳದಲ್ಲಿ ಗಿಡಗಳನ್ನು ನೆಡಲಾಗಿದೆ. ಇದರಿಂದ ಒಂದು ಬದಿಯಿಂದ ಕಾಫಿ ಗಿಡಗಳ ಬುಡಕ್ಕೆ ಬಿಸಿಲು ತಾಗುವುದರಿಂದ ಹೆಚ್ಚಿನ ಬೆಳೆ ನಿರೀಕ್ಷಿಸಬಹುದು. ಅಲ್ಲದೆ, ಒಂದು ಗಿಡದಲ್ಲಿ ಮುರು ಕಂಬ ಚಿಗುರನ್ನು ಅದು ಬೆಳೆಯುವ ಎತ್ತರಕ್ಕೆ ಬಿಟ್ಟು, ಅದರಲ್ಲಿನ ಫಸಲನ್ನು ಕೊಯ್ಲು ಮಾಡಲಾಗುತ್ತಿದೆ. ಕಾಫಿ ಫಸಲು ಇಲ್ಲದ ಹಳೆಯ ರೆಕ್ಕೆಗಳನ್ನು ಮತ್ತೊಂದು ಗಿಡಕ್ಕೆ ಎಳೆದು ಕಟ್ಟಿ ಅದರಲ್ಲಿ ಬರುವ ಹೊಸ ಚಿಗುರನ್ನು ಮುಂದಿನ ಸಾಲಿನ ಫಸಲಿಗೆ ಬಿಡಲಾಗುತ್ತದೆ. ಒಂದು ಗಿಡದಲ್ಲಿ ಮೂರು ಗಿಡದಿಂದ ಸಿಗುವಷ್ಟು ಕಾಫಿ ಫಸಲನ್ನು ಪಡೆಯಬಹುದಾಗಿದೆ ಎಂದು ಖಾಲಿಸ್ಥ ತಿಳಿಸಿದರು.

‘ರಾಸಾಯನಿಕ ಗೊಬ್ಬರ ಕೇವಲ ಒಂದು ಅಥವಾ ಎರಡು ವರ್ಷಗಳು ಮಾತ್ರ ಫಸಲು ಸಿಗಲು ಅವಕಾಶ ಮಾಡಿಕೊಡುತ್ತದೆ. ಬದಲಿಗೆ ಮಣ್ಣಿನ ಫಲವತ್ತತೆ ಹೆಚ್ಚು ಮಾಡುವ ಕೆಲಸ ರೈತರು ಮಾಡಿದಲ್ಲಿ ರಾಸಾಯನಿಕ ಗೊಬ್ಬರದ ಅವಶ್ಯಕತೆಯೇ ಇರುವುದಿಲ್ಲ. ನಮ್ಮ ಕಾಫಿ ತೋಟದಲ್ಲಿ ಕಳೆದ 6 ವರ್ಷಗಳಿಂದ ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟು, ಜಾನ್ಸನ್ ಯುವಿ ಕಾಂಪೋಸ್ಟನ್ನು ನಾವೇ ತಯಾರು ಮಾಡಿಕೊಂಡು ಮಣ್ಣಿಗೆ ಸಿಂಪಡಣೆ ಮಾಡುತ್ತಿದ್ದೇವೆ. ಇದರಿಂದ ಮಣ್ಣಿನಲ್ಲಿ ಸತ್ವ ಮತ್ತು
ಫಲವತ್ತತೆಗೆ ಹೆಚ್ಚಿನ ಸಹಕಾರಿಯಾಗಲಿದೆ. ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟಲ್ಲಿ ಎರೆ ಹುಳುಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ ಮಣ್ಣಿಗೆ ನೈಸರ್ಗಿಕವಾಗಿ ಗೊಬ್ಬರ ಸಿಗಲು ಸಾಧ್ಯವಾಗುತ್ತದೆ’ ಎಂದು ತಮ್ಮ ತೋಟದಲ್ಲಿನ ಎರೆಹುಳು ಹೆಚ್ಚಾಗಿರುವ ಬಗ್ಗೆ ಮಾಹಿತಿ ನೀಡಿದರು.

ಜಾನ್ಸನ್ ಯುವಿ ಕಾಂಪೋಷ್ಟನ್ನು ರೈತರೇ ಮನೆಯಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಒಂದು ಡ್ರಂನಲ್ಲಿ ವಿವಿಧ ಸ್ಥಳದ ಕಾಡು ಮಣ್ಣನ್ನು ಹಾಕಿ ಅದಕ್ಕೆ ಸಗಣಿಯನ್ನು ಸೇರಿಸಿ ನೆನೆಹಾಕಬೇಕು. ಅದರಲ್ಲಿ ಮರದ ಸಣ್ಣ ಸಣ್ಣ ಚಕ್ಕೆಗಳನ್ನು ಸೇರಿಸಿ ಅದರ ಮೇಲೆ ಹುಲ್ಲಿನ ಪದರ ಹಾಸಿದ ನಂತರ ಶೀತ ಕಡಿಮೆಯಾಗದಂತೆ ನೀರನ್ನು ಹಾಕಿಕೊಂಡು ಬಂದಲ್ಲಿ ಒಂದು ವರ್ಷದಲ್ಲಿ ಅದು ಕರಗಿ ಸಂಪೂರ್ಣ ಪೌಡರ್ ರೀತಿಯಲ್ಲಾಗುತ್ತದೆ. ಅದನ್ನು ಒಂದು ಎಕರೆಗೆ 300 ಗ್ರಾಂನಂತೆ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಮಣ್ಣಿಗೆ ವರ್ಷಕ್ಕೆ ಎರಡು ಬಾರಿ ಸಿಂಪಡಿಸಿದಲ್ಲಿ ಮಣ್ಣಿನಲ್ಲಿ ಶಿಲೀಂದ್ರಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ ಫಲವತ್ತತ್ತೆಯ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ.

ಸಾವಯವ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ರೊಬೊಸ್ಟ ಕಾಫಿ ಬೆಳೆಗಾರರು ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು
-ಚಂದ್ರಶೇಖರ್, ಕಾಫಿ ಮಂಡಳಿ ಉಪನಿರ್ದೇಶಕ.
ಸೋಮವಾರಪೇಟೆ ಸಮೀಪದ ಹಾರಳ್ಳಿ ಗ್ರಾಮದಲ್ಲಿನ ಪ್ರಗತಿಪತ ಕೃಷಿಕ ಖಾಲಿಸ್ಥ ಎಂಬುವವರು ತಮ್ಮ ತೋಟದಲ್ಲಿ ಕಾಫಿ ಗಿಡಗಳೊಂದಿಗೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.