ADVERTISEMENT

ವಿರಾಜಪೇಟೆ: ಹುಲಿ ವಿರುದ್ಧ ಕಾರ್ಯಾಚರಣೆಗಿಳಿದ 70 ಮಂದಿಯ ತಂಡ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 5:10 IST
Last Updated 13 ನವೆಂಬರ್ 2024, 5:10 IST
ವಿರಾಜ‍ಪೇಟೆ ತಾಲ್ಲೂಕಿನಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ತಂಡ
ವಿರಾಜ‍ಪೇಟೆ ತಾಲ್ಲೂಕಿನಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ತಂಡ   

ವಿರಾಜಪೇಟೆ: ಇಲ್ಲಿಗೆ ಮಗ್ಗುಲ, ಐಮಂಗಲ, ಚಂಬೆ ಬೆಳ್ಳೂರು, ಪುದುಕೋಟೆ, ಕುಕ್ಲೂರು ಭಾಗದಲ್ಲಿ ಕಳೆದೊಂದು ವಾರದಿಂದ ಜನರ ನಿದ್ದೆಗೆಡಿಸಿರುವ ಹುಲಿಯ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಒಟ್ಟು 70 ಅರಣ್ಯ ಸಿಬ್ಬಂದಿಯ 7 ತಂಡಗಳನ್ನು ರಚನೆ ಮಾಡಿ ಮಗ್ಗುಲ, ಐಮಂಗಲ, ಪುದುಕೋಟೆ, ಚಂಬೆಬೆಳ್ಳೂರು, ಕುಕ್ಲೂರು, ಬಿಟ್ಟಂಗಾಲ ಗ್ರಾಮದಲ್ಲಿ ಹುಲಿ ಪತ್ತೆ ಕಾರ್ಯಾಚರಣೆ ಶುರುವಾಗಿದೆ. ಪಟಾಕಿ ಸಿಡಿಸುತ್ತಾ, ಪಿಪೀ ಸದ್ದು ಮಾಡುತ್ತಾ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಒಂದು ವಾರದಿಂದೀಚೆಗೆ ಹುಲಿ ಅಲ್ಲಲ್ಲೆ ಕಾಣಿಸಿಕೊಳ್ಳುತ್ತಿತ್ತು. ರಸ್ತೆ ಬದಿ ರಾತ್ರಿ ವೇಳೆ ವಾಹನ ಸವಾರರಿಗೆ ಗೋಚರವಾಗುತ್ತಿದ್ದು ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಅಲ್ಲದೇ, ಮಗ್ಗುಲ ಮತ್ತು ಐಮಂಗಲ, ಪುದುಕೋಟೆ ಗ್ರಾಮದ ಹಲವರ ಕಾಫಿತೋಟ ಮತ್ತು ಗದ್ದೆಗಳಲ್ಲಿ ಹುಲಿಹೆಜ್ಜೆಗಳು ನಿತ್ಯವೂ ಗೋಚರವಾಗುತ್ತಿದ್ದು ತೋಟಕ್ಕೆ ಹೋಗಿ ಕೆಲಸ ಮಾಡಲು ಕೂಲಿಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಇದನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಡಿಸಿಎಫ್ ಜಗನ್ನಾಥ್ ಅವರ ನೇತೃತ್ವದಲ್ಲಿ ಮಗ್ಗುಲ, ಐಮಂಗಲ ಗ್ರಾಮದಲ್ಲಿ ಹುಲಿ ಪತ್ತೆ ಕಾರ್ಯಾಚರಣೆಯನ್ನು ನವೆಂಬರ್ 8ರಂದೇ ಆರಂಭ ಮಾಡಲಾಗಿತ್ತು. ಆ ಬಳಿಕ ಹುಲಿ ಹೆಜ್ಜೆಗಳು ಮತ್ತು ಘರ್ಜಿಸುವುದು ಪುದುಕೋಟೆ ಗ್ರಾಮದಲ್ಲಿ ಕಂಡು ಬಂತು.

ಹೀಗಾಗಿ, ಚಂಬೆ ಬೆಳ್ಳೂರು ಗ್ರಾಮದ ಭದ್ರಕಾಳಿ ದೇವಾಲಯದ ಬಳಿ ಸಭೆ ಸೇರಿದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಡಿಸಿಎಫ್ ಜಗನ್ನಾಥ್ ಮತ್ತು ಗ್ರಾಮಸ್ಥರು ಹುಲಿ ಕಾರ್ಯಚರಣೆ ಬಗ್ಗೆಗೆ ಕೆಲಹೊತ್ತು ಚರ್ಚಿಸಿದರು. ಬಳಿಕ ಭದ್ರಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿ ಬಳಿಕ ಹುಲಿ ಪತ್ತೆ ಕಾರ್ಯಾಚರಣೆ ಆರಂಭ ಮಾಡಲಾಯಿತು.

ಈಗ ಭದ್ರಕಾಳಿ ದೇವಾಲಯದ ಪಕ್ಕದ ತೋಟದಲ್ಲಿ ರಸ್ತೆಯಂಚಿನ್ನಲ್ಲಿಯೇ ಹುಲಿ ಹೆಜ್ಜೆಗಳು ಪತ್ತೆಯಾದವು.

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಸಿಎಫ್ ಜಗನ್ನಾಥ್, ‘ಈ ಭಾಗದಲ್ಲಿ ಹಲವು ದಿನಗಳಿಂದ ಕಾಡುಪ್ರಾಣಿಗಳ ಉಪಟಳ  ಹೆಚ್ಚಾಗಿದೆ. ಕಳೆದ ವಾರ ಮಗ್ಗುಲ ಗ್ರಾಮದಲ್ಲಿ ಹುಲಿ ಇರುವುದು ಖಚಿತವಾಗಿದೆ. ನಾವೂ ಅಲ್ಲಿ ಅಡ್ಡಿಪಡಿಸಿದ್ದರಿಂದ ಅದೇ ಹುಲಿ ಇಲ್ಲಿಗೆ ಬಂದಿರಬಹುದು. ನಾವು ಈಗ 70 ಸಿಬ್ಬಂದಿಯಿಂದ ಕಾರ್ಯಚರಣೆ ಆರಂಭ ಮಾಡಿದ್ದೇವೆ. ಹೆಚ್ಚುವರಿ ಆಗಿ ಬೇಕಾದರೆ ಸಿಬ್ಬಂದಿಗಳನ್ನು ಕರೆಸಿಕೊಳ್ಳುತ್ತೇವೆ. ಈ ಹುಲಿ ಕ್ಯಾಮೆರಾದಲ್ಲಿ ಟ್ರಾಪ್‌ ಆದ ಕೂಡಲೇ ಸೆರೆ ಹಿಡಿಯಲು ಅನುಮತಿ ಪಡೆಯುತ್ತೇವೆ’ ಎಂದು ಹೇಳಿದರು.

ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮಾತನಾಡು, ‘ಈ ಭಾಗದಲ್ಲಿ ಹುಲಿ ಸಂಚಾರ ಇರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೇ ಈ ಭಾಗದಲ್ಲಿ ಕಾಡಾನೆ ಹಾವಳಿ ಕೂಡಾ ಹೆಚ್ಚಿದೆ. ಶಾಸಕ ಎ.ಎಸ್.ಪೊನ್ನಣ್ಣ ಅವರ ನಿರ್ದೇಶನದ ಮೇರೆಗೆ ಹುಲಿ ಕಾರ್ಯಚರಣೆ ಮಾಡಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ಜಗನ್ನಾಥ್ ಅವರು ಕಾರ್ಯಾಚರಣೆ ನೇತೃತ್ವ ವಹಿಸುವುದಕ್ಕೆ ಬಂದಿದ್ದಾರೆ. ಯಶಸ್ವಿ ಕಾರ್ಯಾಚರಣೆಗೆ ಗ್ರಾಮಸ್ಥರು ಸಹಕರಿಸಿ’ ಎಂದು ಮನವಿ ಮಾಡಿದರು.

ಈ ವೇಳೆ ಚಂಬೆಬೆಳ್ಳೂರು ಗ್ರಾಮದ ಕೋಳೇರ ರನ್ನ, ಊರಿನ ಮುಖ್ಯಸ್ಥ ಚಾರಿಮಂಡ ಪ್ರಕಾಶ್, ಕೊಳುವಂಡ ಹರೀಶ್, ಉಳಿಯಡ ಜೀವನ್, ಮುತ್ತಪ್ಪ, ನಾಮನಿರ್ದೇಶನ ಪುರಸಭಾ ಸದಸ್ಯ ಶಬರೀಶ್ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಆನೆ ಕಾರ್ಯಪಡೆ ಪ್ರಶಾಂತ್, ಅರಣ್ಯ ರಕ್ಷಕ ನಾಗರಾಜ್ ರಡರಟ್ಟಿ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.