ADVERTISEMENT

ಕೊಡಗು | ತಗ್ಗಿದ ಮಳೆಯ ಬಿರುಸು; ತುಂಬಿದ ಚಿಕ್ಲಿಹೊಳೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:37 IST
Last Updated 2 ಜುಲೈ 2024, 14:37 IST
<div class="paragraphs"><p>ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಬಳಿ ಭರ್ತಿಯಾಗಿರುವ ಚಿಕ್ಲಿಹೊಳೆ ಜಲಾಶಯದ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ನೀರು ಧುಮ್ಮಿಕ್ಕುತ್ತಿರುವ ನಯನ ಮನೋಹರ ದೃಶ್ಯ ಮಂಗಳವಾರ ಕಂಡು ಬಂತು. </p></div>

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಬಳಿ ಭರ್ತಿಯಾಗಿರುವ ಚಿಕ್ಲಿಹೊಳೆ ಜಲಾಶಯದ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ನೀರು ಧುಮ್ಮಿಕ್ಕುತ್ತಿರುವ ನಯನ ಮನೋಹರ ದೃಶ್ಯ ಮಂಗಳವಾರ ಕಂಡು ಬಂತು.

   

ಪ್ರಜಾವಾಣಿ ಚಿತ್ರ/ರಘು ಹೆಬ್ಬಾಲೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮಂಗಳವಾರ ಸಂಪೂರ್ಣ ತಗ್ಗಿದೆ. ಆದರೆ, ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಇನ್ನೂ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದ ಒಳ ಹರಿವು ಮಂಗಳವಾರ 3,441 ಕ್ಯುಸೆಕ್‌ಗೆ ಹೆಚ್ಚಿದೆ. ಸೋಮವಾರ 1,673 ಕ್ಯುಸೆಕ್‌ ಒಳ ಹರಿವಿತ್ತು.

ADVERTISEMENT

ಕುಶಾಲನಗರ ತಾಲ್ಲೂಕಿನಲ್ಲಿರುವ ಚಿಕ್ಲಿಹೊಳೆ ಜಲಾಶಯ ಸಂಪೂರ್ಣ ತುಂಬಿದ್ದು, ಅರ್ಧ ಚಂದ್ರಾಕೃತಿಯ ತಡೆಗೋಡೆ ಮೇಲಿಂದ ಹಾಲು ನೊರೆಯಂತೆ ಹರಿಯುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತಿದೆ.

ಗೋಣಿಕೊಪ್ಪಲು ಸಮೀಪದ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ಕುದನೆಕೊಡಿರ ಮಣಿ ಬೆಳ್ಳಿಯಪ್ಪ ಅವರ ಮನೆ ಗೋಡೆ ಮಳೆಯಿಂದ ಕುಸಿದಿದೆ.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ 5 ಸೆಂ.ಮೀ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಹೋಬಳಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.

ಕುಶಾಲನಗರ ಸಮೀಪದ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದೆ. ಪ್ರಜಾವಾಣಿ ಚಿತ್ರ/ರಘು ಹೆಬ್ಬಾಲೆ

ಹುಲಿಕಲ್‌ನಲ್ಲಿ 13.8 ಸೆಂ.ಮೀ ಮಳೆ

ಶಿವಮೊಗ್ಗ: ಮಲೆನಾಡಿನಲ್ಲಿ ಆರಿದ್ರಾ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿದೆ. ಇದರಿಂದ ಜಲಾಶಯದ ಒಳಹರಿವಿನ ಪ್ರಮಾಣ 8,000 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಸೋಮವಾರ ಜಲಾಶಯಕ್ಕೆ 13,704 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಮಂಗಳವಾರ ಬೆಳಿಗ್ಗೆ 8 ಗಂಟೆಯ ವೇಳೆ ಒಳಹರಿವಿನ ಪ್ರಮಾಣ 20,951 ಕ್ಯುಸೆಕ್‌ಗೆ ಹೆಚ್ಚಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲ್ಲೂಕಿನ ಹುಲಿಕಲ್‌ನಲ್ಲಿ ಅತಿಹೆಚ್ಚು 13.8 ಸೆಂ.ಮೀ, ಮಾಸ್ತಿಕಟ್ಟೆಯಲ್ಲಿ 13.3 ಸೆಂ.ಮೀ, ಮಾಣಿಯಲ್ಲಿ 11.4 ಸೆಂ.ಮೀ, ಯಡೂರು 10.8, ಹೊಸನಗರ 6.85, ಹುಂಚ 3.94, ಅರಸಾಳು 2.16 ಸೆಂ.ಮೀ ಹಾಗೂ ಸಾಗರ ತಾಲ್ಲೂಕಿನ ಕಾರ್ಗಲ್‌ನಲ್ಲಿ 6.45 ಸೆಂ.ಮೀ. ಮಳೆ ಸುರಿದಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನಮಟ್ಟ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, 13 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.

ಭದ್ರಾ ಒಳಹರಿವು ಹೆಚ್ಚಳ: ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯಕ್ಕೂ ಒಳಹರಿವು ಹೆಚ್ಚಿದೆ. ಸೋಮವಾರ ಜಲಾಶಯಕ್ಕೆ 4,665 ಕ್ಯುಸೆಕ್‌ ಒಳಹರಿವು ಇತ್ತು. 24 ಗಂಟೆಗಳಲ್ಲಿ ಅದು 5,243 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಒಂದು ವಾರ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಕರಾವಳಿಯ ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಬುಧವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ. 

ಕರಾವಳಿಯಲ್ಲಿ ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದ್ದು, ಗಂಟೆಗೆ 35 ಕಿ.ಮೀ.ಯಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಎಚ್ಚರಿಕೆ ವಹಿಸಬೇಕು.

ಸಮುದ್ರದಲ್ಲಿ ಎತ್ತರದ ಅಲೆಗಳು ಏಳುವ ಮುನ್ಸೂಚನೆ ಇರುವುದರಿಂದ ದಡದಲ್ಲಿ ಮನೋರಂಜನೆ ಚಟುವಟಿಕೆ ನಡೆಸುವಾಗ ಜಾಗರೂಕವಾಗಿ ಇರಬೇಕು ಎಂದು ಇಲಾಖೆ ತಿಳಿಸಿದೆ.

ಕರಾವಳಿಯ ಬಹುತೇಕ ಕಡೆ ಮಳೆ

ರಾಜ್ಯದಲ್ಲಿ ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಹಲವು ಕಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ ಸಿದ್ದಾಪುರ ಹಾಗೂ

ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 9 ಸೆಂ.ಮೀ. ಮಳೆಯಾಗಿದೆ.

ಉಡುಪಿಯ ಕೋಟ, ಶಿವಮೊಗ್ಗದ ಆಗುಂಬೆಯಲ್ಲಿ ತಲಾ 8 ಸೆಂ.ಮೀ., ದಕ್ಷಿಣ ಕನ್ನಡದ ಧರ್ಮಸ್ಥಳ, ಉಡುಪಿ ಹಾಗೂ ಶಿವಮೊಗ್ಗದ ಲಿಂಗನಮಕ್ಕಿಯಲ್ಲಿ ತಲಾ 7 ಸೆಂ.ಮೀ. ಮಳೆ ಸುರಿದಿದೆ. ಉಳಿದೆಡೆ ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ.

ಕಲಬುರಗಿ, ಬೀದರ್‌ನಲ್ಲಿ ಮಳೆ

ಕಲಬುರಗಿ: ಕಲಬುರಗಿ ಹಾಗೂ ಬೀದರ್‌ ಜಿಲ್ಲೆಯಲ್ಲಿ ಮಂಗಳ ವಾರ ಉತ್ತಮವಾಗಿ ಮಳೆಯಾಗಿದೆ.

ಕಲಬುರಗಿ ನಗರದಲ್ಲಿ ಸಂಜೆ ಕೆಲ ಕಾಲ ತುಂತುರು ಮಳೆಯಾಗಿತ್ತು. ರಾತ್ರಿ ಸುಮಾರು ಒಂದು ಗಂಟೆ ಕಾಲ ಉತ್ತಮವಾಗಿ ಮಳೆ ಸುರಿಯಿತು. ಚಿಂಚೋಳಿ ತಾಲ್ಲೂಕಿನಲ್ಲೂ ಕೆಲ ಕಾಲ ಮಳೆ ಅಬ್ಬರಿಸಿತು.

ಬೀದರ್‌, ಬಸವಕಲ್ಯಾಣ, ಹುಮನಾಬಾದ್‌, ಭಾಲ್ಕಿ, ಹುಲಸೂರ, ಕಮಲನಗರ ಹಾಗೂ ಔರಾದ್‌ ತಾಲ್ಲೂಕುಗಳಲ್ಲೂ ಸಂಜೆ ಉತ್ತಮ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.