ಗೋಣಿಕೊಪ್ಪಲು: ಸಾವಯವ ಕೃಷಿ ಮೂಲಕ ಆದಾಯ ಹೆಚ್ಚಿಸಿಕೊಂಡು ಗುಣಮಟ್ಟದ ಕಾಫಿ, ಮೆಣಸು, ಅಡಿಕೆ ಹಾಗೂ ವಿವಿಧ ಹಣ್ಣುಗಳನ್ನು ಬೆಳೆಯುವುದರಲ್ಲಿ ತೊಡಗಿಸಿಕೊಂಡಿರುವವರು ಮಡಿಕೇರಿ ತಾಲ್ಲೂಕಿನ ಮರಗೋಡು ಹೊಸ್ಕೇರಿಯ ಪ್ರಗತಿಪರ ಕೃಷಿಕ ಮಹಿಳೆ ಕೊಂಪುಳೀರ ಇಂದಿರಾ ರಮೇಶ್.
ಈ ಕಾರಣಕ್ಕೆ ಇವರಿಗೆ 2023-24ನೇ ಸಾಲಿನ ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಗತಿಪರ ಕೃಷಿಕ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
ಇಂದಿರಾ ಅವರು ಸರ್ಕಾರದ ಸಾವಯವ ಭಾಗ್ಯಯೋಜನೆ, ಸಾವಯವ ಕೃಷಿ ವಿಕಾಸ ಯೋಜನೆಗಳನ್ನು ಉತ್ತಮವಾಗಿ ಬಳಸಿಕೊಂಡು ಸಾವಯವ ಗೊಬ್ಬರದಿಂದಲೇ ಗುಣಮಟ್ಟದ ಆಹಾರ ಬೆಳೆ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಸಾವಯವ ಗೊಬ್ಬರಕ್ಕಾಗಿಯೇ ತಮ್ಮ ತೋಟದ ಸುತ್ತ ಇವರು ಗ್ಲೀರಿಸೀಡಿಯಾ, ಹೊಂಗೆ, ಸಿಲ್ವರ್ ಓಕ್ ಮರಗಳನ್ನು ಬಹಳಷ್ಟು ಪ್ರಮಾಣದಲ್ಲಿ ಬೆಳೆಸಿದ್ದಾರೆ. ಇವುಗಳ ಜತೆಗೆ, ಫಲಕೊಡುವ ನೆಲ್ಲಿ, ಬಾಳೆ ಮೊದಲಾದವುಗಳನ್ನು ಬೆಳೆದಿದ್ದಾರೆ. ಮಳೆಗಾಲದಲ್ಲಿ ಕೃಷಿ ಮಾಡುವುದ್ಕೂ ಮುನ್ನ ಈ ಮರಗಳ ಎಲೆ, ಬಾಳೆದಿಂಡು ಕತ್ತರಿಸಿ ಮಣ್ಣಿನಲ್ಲಿ ಸೇರಿಸಿ ಚೆನ್ನಾಗಿ ಕರಗಿಸುತ್ತಿದ್ದಾರೆ. ಈ ಮೂಲಕ ಗುಣಮಟ್ಟದ ಸಾಯವಗೊಬ್ಬರ ತಯಾರಿಸುತ್ತಾರೆ. ಜತೆಗೆ, ತಾವೇ ಸಾಕಿರುವ ಜಾನುವಾರುಗಳ ಸಗಣಿ ಮತ್ತು ಗೋಮೂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ.
ಕೊಟ್ಟಿಗೆ ಗೊಬ್ಬರದೊಂದಿಗೆ ತಮ್ಮ ತೋಟದಲ್ಲಿ ಬೆಳೆದಿರುವ ತೆಂಗಿನ ಮಟ್ಟೆ, ಚಿಪ್ಪು, ನಾರು ಮೊದಲಾದವುಗಳನ್ನು ಕರಗಿಸಿ ಅದರಲ್ಲಿಯೂ ಉತೃಷ್ಟ ಮಟ್ಟದ ಗೊಬ್ಬರ ಪಡೆದುಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ, ಎರೆಹುಳು ಗೊಬ್ಬರ ತಯಾರಿಕೆ ತೊಟ್ಟಿಗಳನ್ನು ನಿರ್ಮಿಸಿಕೊಂಡು ಆ ಮೂಲಕವೂ ಗೊಬ್ಬರ ಪಡೆಯುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಅವರು ತಮ್ಮ ತೋಟದ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ರೋಗಬಾಧೆ ಮತ್ತು ಕೀಟಬಾಧೆ ರಹಿತ ಬೆಳೆ ಬೆಳೆಯಲು ಸಹಕಾರಿಯಾಗಿದೆ.
ಕಾಫಿ ತೋಟದ ಜತೆಗೆ ಅಡಿಕೆ, ತೆಂಗು, ಬಾಳೆ, ಸಪೋಟ, ಮಾವು, ಸೀಬೆ, ಬಾಳೆ ಮೊದಲಾದ ತೋಟಗಾರಿಕೆ ಬೆಳೆಗಳನ್ನು ಕೈಗೊಳ್ಳುವುದರ ಜತೆಗೆ ಹಳ್ಳದ ಗದ್ದೆಗಳಲ್ಲಿ ಗುಣಮಟ್ಟದ ಭತ್ತವನ್ನೂ ಬೆಳೆಯುತ್ತಿದ್ದಾರೆ. ಭತ್ತ ಬೆಳೆಯನ್ನು ಕಾಡುವ ಕೀಟ ಮತ್ತು ಮತ್ತು ರೋಗ ನಿಯಂತ್ರಿಸಲು ಹೆಚ್ಚಿನದಾಗಿ ಇವರು ಜಾನುವಾರುಗಳ ಗೋಮೂತ್ರ ಬಳಸಿಕೊಳ್ಳುತ್ತಿದ್ದಾರೆ.
ತಾವು ಸಾಕಿರುವ ಜಾನುವಾರುಗಳಿಂದ ಹಾಲು, ಬೆಣ್ಣೆ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅವುಗಳ ಕರುಗಳನ್ನು ಮಾರಾಟ ಮಾಡಿ ಅದರ ಮೂಲಕ ಆರ್ಥಿಕ ಲಾಭ ಗಳಿಸುತ್ತಿದ್ದಾರೆ. ಕೃಷಿ ಇಲಾಖೆಯ ಆತ್ಮ ಯೋಜನೆ ಅಡಿಯಲ್ಲಿ ಉತ್ತಮ ಕೃಷಿಕ ಮಹಿಳೆ, ಸಾವಯವ ಕೃಷಿ ಯೋಜನೆಯಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಇವರಿಗೆ ಲಭಿಸಿದೆ.
ಕೃಷಿಯನ್ನು ಒಂದು ತಪಸ್ಸಿನಂತೆ ಸ್ವೀಕಾರ ಮಾಡಿರುವ ಇಂದಿರಾ ಅದನ್ನೇ ಉಸಿರುಗಟ್ಟುವ ರೀತಿಯಲ್ಲಿ ಮಾಡುತ್ತಿಲ್ಲ. ತಮ್ಮ ದೈನಂದಿನ ಇತರ ಚಟುವಟಿಕೆಗಳ ಜತೆಗೆ ಲಭ್ಯ ಇರುವ ಆಳುಕಾಳುಗಳೊಂದಿಗೆ ತಾವೂ ಸೇರಿಕೊಂಡು ಕೆಲಸ ಮಾಡುತ್ತಾರೆ. ಈ ಮೂಲಕ ಬದುಕಿನಲ್ಲಿ ಸಂತಸದ ಕ್ಷಣಗಳನ್ನೂ ಕಾಣುತ್ತಿದ್ದಾರೆ.
ಕೃಷಿಯಲ್ಲಿ ಹೆಚ್ಚಿನ ಆನಂದ
‘ಕೃಷಿ ನನಗೆ ಕಷ್ಟ ಮತ್ತು ನಷ್ಟ ಎಂದೆನಿಸುವುದಿಲ್ಲ. ಅದನ್ನ ಸರಿಯಾದ ಕ್ರಮದಲ್ಲಿ ಮಾಡಿದರೆ ಉತ್ತಮ ಫಲ ಲಭಿಸುತ್ತದೆ. ಜತೆಗೆ ಎಲ್ಲವನ್ನೂ ಕೂಲಿಯಿಂದಲೇ ನಿರೀಕ್ಷಿಸಲಾಗದು. ನಾವೂ ಕೈ ಜೋಡಿಸಬೇಕಾಗುತ್ತದೆ. ನನ್ನ ಶ್ರಮ ಮತ್ತು ಕೃಷಿ ಬಗೆಗಿನ ಸಂಬಂಧ ಗುರುತಿಸಿ ಕೃಷಿ ವಿಶ್ವವಿದ್ಯಾಲಯ ನೀಡಿರುವ ಪ್ರಶಸ್ತಿ ನನಗೆ ಹೆಚ್ಚಿನ ಅನಂದ ಉಂಟು ಮಾಡಿದೆ’ ಎಂದು ಇಂದಿರಾ ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.