ಸಿದ್ದಾಪುರ: ಮಳೆಗಾಲ ಆರಂಭವಾದ ಬೆನ್ನಲ್ಲೇ ಚೆಟ್ಟಳ್ಳಿ ರಸ್ತೆಯ ಅಭ್ಯಾಲ ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕಲು ಆರಂಭಿಸಿದ್ದು, ಇದೀಗ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಮಡಿಕೇರಿಯಿಂದ ಚೆಟ್ಟಳ್ಳಿಗೆ ಹೋಗುವ ದಾರಿಗುಂಟ ಇರುವ ಬೆಟ್ಟ, ಗುಡ್ಡಗಳಿಂದ ಹಲವು ಝರಿಗಳು ಹರಿಯಲು ಶುರು ಮಾಡಿವೆ. ಅವುಗಳಲ್ಲಿ ಅಭ್ಯಾಲ ಜಲಪಾತ ಅಪ್ಯಾಯಮಾನವಾಗಿ ಕಾಣುತ್ತಿದೆ. ಇದರ ಸುತ್ತಮುತ್ತಲ ಜಲಧಾರೆಗಳೂ ನೋಡುಗರ ಕಣ್ಮನ ಸೆಳೆಯುತ್ತಿವೆ.
ಹಾಲಿನ ನೊರೆಯ ಬಣ್ಣದಲ್ಲಿ ಹರಿಯುವ ಈ ಜಲಪಾತದ ಮುಂದೆ ನಿಂತು ಅದರ ಅಂದವನ್ನು ನೋಡುವುದೇ ಒಂದು ರೀತಿಯ ವಿಶಿಷ್ಟ ಅನುಭವ. ಚೆಟ್ಟಳ್ಳಿಯಿಂದ ಸುಮಾರು 4 ಕಿ.ಮೀ. ಹಾಗೂ ಮಡಿಕೇರಿಯಿಂದ ಅಂದಾಜು 12 ಕಿ.ಮೀ. ದೂರದಲ್ಲಿರುವ ಅಭ್ಯಾಲ ಜಲಪಾತ ರಸ್ತೆ ಬದಿಯಲ್ಲೇ ಇದ್ದು, ಇದಕ್ಕಾಗಿ ಸಾಹಸದ ಚಾರಣವನ್ನೇನೂ ಕೈಗೊಳ್ಳಬೇಕಿಲ್ಲ. ಈ ರಸ್ತೆಯಲ್ಲಿ ಒಮ್ಮೆ ಹೋಗಿ ಬಂದರೆ ಸಾಕು ಈ ಶ್ವೇತವರ್ಣಿಯರು ಕಣ್ಮನ ಸೆಳೆಯುತ್ತಾರೆ.
ಇತ್ತೀಚೆಗೆ ಒಂದಿಷ್ಟು ಬಿರುಸಿನ ಮಳೆ ಸುರಿದಿದ್ದರಿಂದ ಈ ಜಲಪಾತದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಮಳೆಗಾಲ ಹೊರತುಪಡಿಸಿದ ಸಮಯದಲ್ಲಿ ಇಲ್ಲಿ ನೀರು ಬತ್ತುತ್ತದೆ. ಮಳೆಗಾಲ ಆರಂಭವಾಗುತ್ತಲೇ ಜಲಪಾತದಲ್ಲಿ ನೀರು ಹಾಲ್ನೊರೆಯಂತೆ ಹರಿಯಲಾರಂಭಿಸುತ್ತದೆ. ಚೆಟ್ಟಳ್ಳಿ ಭಾಗದಲ್ಲಿ ಹೆಚ್ಚು ಮಳೆಯಾದರೇ, ಈ ಜಲಪಾತವು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತದೆ.
ಅಭ್ಯಾಲ ಜಲಪಾತದ ಸಮೀಪದಲ್ಲೇ ಮತ್ತಷ್ಟು ಪುಟ್ಟ ಪುಟ್ಟ ಜಲಪಾತಗಳಿದ್ದು, ಇವೆಲ್ಲವೂ ಅಲ್ಪಾಯುಷಿಗಳು. ಮಳೆಗಾಲ ಆರಂಭವಾದಾಗ ಬೆಟ್ಟಗಳಿಂದ ಜಲ ಉಕ್ಕಲಾರಂಭಿಸಿ, ರಸ್ತೆ ಬದಿಯಲ್ಲಿ ಮೇಲಿನಿಂದ ಧುಮುಕ್ಕಿ ಜಲಪಾತವಾಗುತ್ತದೆ. ಕೆಲವು ಕಾಫಿ ತೋಟಗಳಿಂದ ಬರುವ ನೀರು ತೋಡುಗಳಾಗಿ ರೂಪುಗೊಂಡರೂ, ರಸ್ತೆ ಬದಿಯಲ್ಲಿ ಅಂಕುಡೊಂಕಿನ ಬಂಡೆಗಳ ಮೇಲೆ ಬಿದ್ದು, ಜಲಪಾತದಂತೆ ರೂಪುಗೊಳ್ಳುತ್ತದೆ. ಇವೆಲ್ಲವೂ ಮಳೆಗಾಲದ ಬೆಡಗಿಯರು ಎನ್ನಬಹುದು. ಏಕೆಂದರೆ, ಮಳೆಗಾಲ ಕಳೆಯುತ್ತಿದ್ದಂತೆ ಇವುಗಳು ಮಾಯವಾಗುತ್ತವೆ.
ಸ್ವಚ್ಛ ನೀರು: ಚೆಟ್ಟಳ್ಳಿಯ ಅಬ್ಯಾಲ ಬಳಿಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಜಲಪಾತಗಳ ನೀರು ಯಾವುದೇ ಮಾಲಿನ್ಯವಿಲ್ಲದೇ ಹರಿಯುತ್ತಿದೆ ಏನೋ ಎಂದು ಅನ್ನಿಸುತ್ತದೆ. ಏಕೆಂದರೆ, ಇಲ್ಲಿ ಹರಿಯುವ ನೀರು ನೋಡುವುದಕ್ಕೆ ಅತೀವ ಸ್ವಚ್ಛವಾಗಿ ಕಾಣುತ್ತದೆ. ಇಲ್ಲಿನ ಬೆಟ್ಟಗಳಲ್ಲಿ ಹೆಚ್ಚಾಗಿ ಮನೆಗಳಿಲ್ಲ. ಹಾಗಾಗಿ, ಯಾವುದೇ ಗಲೀಜು ನೀರು ಜಲಪಾತಕ್ಕೆ ಸೇರುತ್ತಿಲ್ಲ. ಬೆಟ್ಟದಲ್ಲಿ ಮಳೆಯಿಂದ ಹಾಗೂ ಭೂಮಿಯಿಂದ ಜಲವಾಗಿ ಹರಿಯುವ ನೀರು ರಸ್ತೆ ಬದಿಯಲ್ಲಿ ಜಲಪಾತಗಳಾಗುತ್ತಿವೆ. ಮುಂದೆ ಇವು ಚಿಕ್ಲಿಹೊಳೆ ಸೇರುತ್ತವೆ.
ವಾಹನಗಳಿಂದ ಕಿರಿಕಿರಿ: ಈ ಜಲಪಾತದ ಬಳಿ ಯಾವುದೇ ಪಾರ್ಕಿಂಗ್ ಸೌಲಭ್ಯವಿಲ್ಲ. ರಸ್ತೆ ಬದಿ ಕಿರಿದಾಗಿದ್ದು, ಜಲಪಾತವನ್ನು ನೋಡಲು ರಸ್ತೆ ಬದಿಯಲ್ಲೇ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದ್ದು, ರಸ್ತೆ ಬದಿಯಲ್ಲೇ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಬ್ಯಾಲ ಜಲಪಾತ ವೀಕ್ಷಣೆಗೆ ಸಂಬಂಧಪಟ್ಟವರು ರಸ್ತೆ ಬದಿಯ ಕಾಡುಗಳನ್ನು ಕಡಿದು ಕನಿಷ್ಠ 10 ವಾಹನಗಳನ್ನು ನಿಲ್ಲಿಸಲು ಸೌಕರ್ಯ ಮಾಡಿಕೊಡಬೇಕು.ತೇಜಸ್, ಸ್ಥಳೀಯರು
ಮಡಿಕೇರಿಯಿಂದ ಸಿದ್ದಾಪುರದ ಕಡೆಗೆ ಹೋಗುತ್ತಿದ್ದೆವು. ಈ ಜಲಪಾತವಿರುವುದು ನಮಗೆ ಗೊತ್ತಿರಲಿಲ್ಲ. ಜಲಪಾತವನ್ನು ನೋಡಲು ಅದ್ಭುತವಾಗಿದೆ. ಸ್ವಚ್ಛಂದವಾಗಿ ಹರಿಯುವ ಜಲಪಾತವನ್ನು ಕಣ್ತುಂಬಿಕೊಂಡಿರುವುದೇ ಸಂತೋಷ.ಶ್ಯಾಂ ಪ್ರಸಾದ್, ಪ್ರವಾಸಿಗ ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.