ADVERTISEMENT

ಕುಶಾಲನಗರ |ಪಿಗ್ಮಿ ಹಣ ಹಿಂತಿರುಗಿಸದ ಆರೋಪ; ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:30 IST
Last Updated 21 ಅಕ್ಟೋಬರ್ 2024, 16:30 IST
ಕುಶಾಲನಗರದಲ್ಲಿರುವ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಬಂದ್ ಆಗಿದೆ
ಕುಶಾಲನಗರದಲ್ಲಿರುವ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಬಂದ್ ಆಗಿದೆ   

ಕುಶಾಲನಗರ: ಇಲ್ಲಿನ ‘ಮಲಬಾರ್ ಮಲ್ಟಿಸ್ಟೇಟ್ ಆಗ್ರೊ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್’ ಗ್ರಾಹಕರ ಪಿಗ್ಮಿ ಹಣವನ್ನು ಹಿಂತಿರುಗಿಸದೆ ವಂಚಿಸಿದೆ ಎಂಬ ದೂರು ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪಟ್ಟಣದ ದಂಡಿನಪೇಟೆಯಲ್ಲಿರುವ ಮಲಬಾರ್ ಮಲ್ಟಿಸ್ಟೇಟ್ ಆಗ್ರೊ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಬೈಲುಕುಪ್ಪೆ ನಿವಾಸಿ ಕೆ.ಟಿ.ಚಂದ್ರಹಾಸ ಎಂಬುವವರು 2023 ಜೂನ್ 1ರಿಂದ ಸೊಸೈಟಿಯಲ್ಲಿ ಪಿಗ್ಮಿ ಕಟ್ಟಲು ಆರಂಭಿಸಿ 2024ನೇ ಸಾಲಿನ ಫೆಬ್ರುವರಿ ತಿಂಗಳವರೆಗೆ ₹ 99,500 ಹಣವನ್ನು ಪಿಗ್ಮಿ ಕಟ್ಟಿದ್ದಾರೆ. ಆದರೆ, ಸಂಸ್ಥೆಯು ಹಣವನ್ನು ಹಿಂತಿರುಗಿಸದೆ 2024 ಮಾರ್ಚ್‌ನಿಂದ ಕಚೇರಿಯನ್ನು ಮುಚ್ಚಿದ್ದಾರೆ. ಸಂಸ್ಥೆಯ ಮುಖ್ಯಸ್ಥ ರಾಹುಲ್ ಚಕ್ರಪಾಣಿ ಹಾಗೂ ಸಿಇಒ ಸನ್ನಿ ಅಬ್ರಹಾಂ ಮತ್ತು ಇತರರು ಸೇರಿ ವಂಚನೆ ಮಾಡಿದ್ದಾರೆ ಎಂದು ಕೆ.ಟಿ.ಚಂದ್ರಹಾಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ಈ ಸಂಸ್ಥೆ ಕಚೇರಿ ತೆರೆದು ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ಮಿ ಸಂಗ್ರಹ, ಆರ್.ಡಿ. ಹಾಗೂ ಬಾಂಡ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹಣ ಹಿಂತಿರುಗಿಸದೆ ಕಚೇರಿಯನ್ನು ಬಂದ್ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಕುರಿತು ಗೋಣಿಕೊಪ್ಪಲು, ವಿರಾಜಪೇಟೆ ನಗರ ಹಾಗೂ ಕುಶಾಲನಗರ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಸಾರ್ವಜನಿಕರು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಲ್ಲಿ ದಾಖಲಾತಿಗಳೊಂದಿಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.