ಮಡಿಕೇರಿ: ವಾಣಿಜ್ಯ ಪರವಾನಗಿ ಹೊಂದಿರದ ಜೀಪ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಜಿಲ್ಲಾ ಪೊಲೀಸರು ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದಂಡ ವಿಧಿಸಲು ಆರಂಭಿಸಿದ್ದಾರೆ.
ಮಡಿಕೇರಿ ನಗರ ಸೇರಿದಂತೆ ಮಾಂದಲ್‌ಪಟ್ಟಿ, ಅಬ್ಬಿಫಾಲ್ಸ್ ಹಾಗೂ ಇತರೆಡೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್‌ಗಳ ಮೇಲೆ ನಿಗಾ ಇರಿಸಿದ್ದಾರೆ. ಅಲ್ಲಲ್ಲಿ ತಡೆದು ತಪಾಸಣೆ ನಡೆಸುತ್ತಿದ್ದಾರೆ. ಕೇವಲ ವಾಣಿಜ್ಯ ಪರವಾನಗಿ ಮಾತ್ರವಲ್ಲ ವಿಮೆ, ಚಾಲನಾ ಪರವಾನಗಿ, ವಾಹನದ ಸ್ಥಿತಿಗತಿ ಸೇರಿದಂತೆ ಎಲ್ಲವನ್ನೂ ದಂಡ ವಿಧಿಸುವಾಗ ಪರಿಗಣಿಸುತ್ತಿದ್ದಾರೆ. ಇದರಿಂದ ದಂಡ ದುಬಾರಿಯಾಗುತ್ತಿದ್ದು, ಹಲವು ಚಾಲಕರು ಜೀಪ್ ಚಾಲನೆಯನ್ನೇ ನಿಲ್ಲಿಸಿದ್ದಾರೆ. ಮಂಗಳವಾರ ಒಂದೇ ದಿನ ಪೊಲೀಸರು ಸುಮಾರು 15 ಜೀಪ್ ಚಾಲಕರಿಗೆ ದಂಡ ವಿಧಿಸಿದ್ದಾರೆ.
ಇದರಿಂದ ಮಾಂದಲ್‌ಪಟ್ಟಿಗೆ ಹೋಗುವ ಜೀಪ್‌ಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರವಾಸಿಗರು ಜೀಪ್‌ಗಳು ಸಿಗದೇ, ತಮ್ಮ ಸ್ವಂತ ವಾಹನದಲ್ಲೂ ಹೋಗಲಾಗದೇ ನಿರಾಸೆಯಿಂದ ವಾಪಸ್ ತೆರಳುತ್ತಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರಾ, ‘ಕಾರ್ಯಾಚರಣೆ ಒಂದೆರಡು ದಿನಗಳಿಂದ ಆರಂಭವಾಗಿಲ್ಲ. ಕಳೆದೊಂದು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ವಾಣಿಜ್ಯ ಪರವಾನಗಿ ಹೊಂದಿರುವ ನಿಯಮ ಪಾಲಿಸುವ ಚಾಲಕರು ಪ್ರವಾಸಿಗರನ್ನು ಕರೆದೊಯ್ಯಲು ಅವಕಾಶ ಇದೆ. ನಿಯಮ ಮೀರುವವರ ವಿರುದ್ಧವಷ್ಟೇ ನಮ್ಮ ಕಾರ್ಯಾರಣೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.