ADVERTISEMENT

ಕೊಡಗಿನಲ್ಲೂ ಆಫ್ರಿಕನ್‌ ಹಂದಿ ಜ್ವರ ಪತ್ತೆ

ಚರ್ಮಗಂಟು ರೋಗ: ಮುನ್ನಚ್ಚರಿಕಾ ಕ್ರಮವಾಗಿ ಜಾನುವಾರು ಸಂತೆ, ಜಾತ್ರೆ ನಿಷೇಧಿಸಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 8:30 IST
Last Updated 27 ಅಕ್ಟೋಬರ್ 2022, 8:30 IST
   

ಮಡಿಕೇರಿ: ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಜ್ವರ ಪತ್ತೆಯಾಗಿರುವ ಫಾರಂನಲ್ಲಿದ್ದ ಎಲ್ಲ 10 ಹಂದಿಗಳೂ ಮೃತಪಟ್ಟಿವೆ. ಈಗಾಗಲೇ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಒಂದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಘೋಷಿಸಿದ್ದಾರೆ. ಇಲ್ಲೆಲ್ಲ ತಪಾಸಣೆ ನಡೆಸಿದ್ದು, ಎಲ್ಲೂ ಹಂದಿಗಳು ಕಂಡು ಬಂದಿಲ್ಲ.

ಇಲ್ಲಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿದ್ದು, ಹಂದಿಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

ಇಲ್ಲಿನ ಹಂದಿ ಸಾಕಾಣಿಕೆದಾರರು ಹೊಸದಾಗಿ ಹಂದಿಗಳನ್ನು ಖರೀದಿಸಬಾರದು, ಇಲ್ಲಿ ಕೆಲಸ ಮಾಡುವವರು ಬೇರೆ ಫಾರಂಗಳಿಗೆ ಹೋಗಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸುರೇಶ್ ಭಟ್, ‘ಆಫ್ರಿಕನ್ ಹಂದಿ ಜ್ವರ ಅ. 3ರಂದು ಪತ್ತೆಯಾದ ಫಾರಂನಲ್ಲಿರುವ ಎಲ್ಲ ಹಂದಿಗಳೂ ಸತ್ತಿವೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೂ ಫಾರಂಗಳು ಇಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಅತೀವ ನಿಗಾ ವಹಿಸಲಾಗಿದೆ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿಂದರೆ ಮನುಷ್ಯರಿಗೆ ಈ ರೋಗ ಬರುವ ಸಾಧ್ಯತೆ ಇಲ್ಲ’ ಎಂದು ತಿಳಿಸಿದರು.

ಜಾನುವಾರು ಜಾತ್ರೆ, ಸಂತೆ ನಿಷೇಧ

ಕೊಡಗು ಜಿಲ್ಲೆಯ ಗಡಿ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ ಹಾಗೂ ಹಾಸನಗಳಲ್ಲಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗವು ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲೂ ಮುನ್ನಚ್ಚರಿಕೆ ವಹಿಸಲಾಗಿದೆ. ನ. 21ರವರೆಗೂ ಜಿಲ್ಲೆಯಲ್ಲಿ ಜಾನುವಾರು ಸಂತೆ ಹಾಗೂ ಜಾನುವಾರು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಯಾವುದೇ ಜಾನುವಾರಿನಲ್ಲೂ ಚರ್ಮಗಂಟು ರೋಗ ಪತ್ತೆಯಾಗಿಲ್ಲದೇ ಇದ್ದರೂ ಮುನ್ನಚ್ಚರಿಕೆ ಕ್ರಮವಾಗಿ 10 ಸಾವಿರ ಡೋಸೆಜ್ ಆಡು ಸಿಡುಬಿನ ಲಸಿಕೆಯನ್ನು ತರಿಸಲಾಗಿದೆ. ಇವುಗಳನ್ನು ಗಡಿಭಾಗಗಳಾದ ಕುಶಾಲನಗರ, ಸೋಮವಾರಪೇಟೆ ತಾಲ್ಲೂಕುಗಳಿಗೆ ಹಂಚಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.