ಶನಿವಾರಸಂತೆ: ಸ್ಥಳೀಯ ಏಕದಂತ ಟ್ರಾಕ್ಟರ್ ಮಾಲೀಕರ ಸಂಘದ ವತಿಯಿಂದ ಕಳೆದ 62 ದಿನಗಳ ಹಿಂದೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದ ಚಂಗಡಹಳ್ಳಿ ರಸ್ತೆ ಬಳಿ ಪ್ರತಿಷ್ಠಾಪಿಸಿದ್ದ ಗೌರಿ-ಗಣಪತಿ ಮೂರ್ತಿಯನ್ನು ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.
ಏಕದಂತ ಟ್ರಾಕ್ಟರ್ ಮಾಲೀಕರ ಸಂಘದ ವತಿಯಿಂದ ಗೌರಿ, ಗಣೇಶ ಹಬ್ಬದ ಪ್ರಯುಕ್ತ ಬೃಹತ್ ವೇದಿಕೆಯಲ್ಲಿ 12 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇಲ್ಲಿ ಪ್ರತಿದಿನ ಪೂಜಾ ಕಾರ್ಯಗಳು ಹಾಗೂ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿತ್ತು.
ಗೌರಿ, ಗಣಪತಿ ಮೂರ್ತಿಗೆ ವಿಶೇಷ ಪೂಜೆ ಹೋಮ ಕಾರ್ಯವನ್ನು ನೆರವೇರಿಸಲಾಯಿತು. ಸಂಜೆ ವಿಸರ್ಜನೆ ಮೆರವಣಿಗೆಯ ಸಲುವಾಗಿ ವಾಹನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಬೃಹತ್ ಮಂಟಪದಲ್ಲಿ ಕ್ರೇನ್ ಮೂಲಕ 12 ಅಡಿಯ ಗಣಪತಿ ಮೂರ್ತಿಯನ್ನು ಕೂರಿಸಲಾಯಿತು. ಸಂಜೆ 5ರಿಂದ ಗೌರಿ, ಗಣಪತಿ ವಿಸರ್ಜನಾ ಮೆರವಣಿಗೆಯು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮುಖ್ಯ ರಸ್ತೆ ಮೂಲಕ ಗುಡುಗಳಲೆ ಜಂಕ್ಷನ್‌ವರೆಗೆ ತೆರಳಿತು. ನಂತರ, ಇದೆ ರಸ್ತೆ ಮೂಲಕ ಶೋಭಯಾತ್ರೆಯು ಚಂಗಡಹಳ್ಳಿ-ಸುಬ್ರಮಣ್ಯ ರಸ್ತೆ ಮೂಲಕವಾಗಿ ಸಾಗಿತು ತದನಂತರ ರಾತ್ರಿ ಕಾಜೂರು ನದಿಯಲ್ಲಿ ಗೌರಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ವಾದ್ಯಗೋಷ್ಠಿ, ಕೀಲು ಕುದುರೆ, ಬಾಳುಪೇಟೆಯ ಹಿಂದೂ ಟೈಗರ್ಸ್ ತಂಡವರಿಂದ ನಾಸಿಕ್ ಬ್ಯಾಂಡ್, ಹೊದ್ದೂರಿನ ಕಲಾತಂಡದವರಿಂದ ವೀರಗಾಸೆ ಕುಣಿತ, ದುದ್ಲಾಪುರದ ಮಂಜುಶ್ರೀ ಜಾನಪದ ಕಲಾತಂಡದವರಿಂದ ಜಾನಪದ ನೃತ್ಯ, ಪುರುಷಕೋಡಿಯ ಕಾಳಿಕಾಂಭ ಗೊಂಬೆ ಬಳಗದವರಿಂದ ಗೊಂಬೆ ನೃತ್ಯ ಪ್ರದರ್ಶನದೊಂದಿಗೆ ಮೆರವಣಿಗೆ ಸಾಗಿತು.
ಮೆರವಣಿಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಪಟ್ಟಣದಲ್ಲಿ ಬಿಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.