ADVERTISEMENT

ನಾಪೋಕ್ಲು: ಎಲ್ಲೆಡೆ ಕೃಷಿ ಚಟುವಟಿಕೆ ಬಿರುಸು

ಸಿ.ಎಸ್.ಸುರೇಶ್
Published 9 ಜುಲೈ 2024, 7:29 IST
Last Updated 9 ಜುಲೈ 2024, 7:29 IST
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಗದ್ದೆ ಉಳುಮೆ ಮಾಡುತ್ತಿರುವ ರೈತ
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಗದ್ದೆ ಉಳುಮೆ ಮಾಡುತ್ತಿರುವ ರೈತ   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಬಿಡುವು ಕೊಟ್ಟು ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಕಾಫಿ, ಕಾಳು ಮೆಣಸು, ಕೃಷಿಯ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೃಷಿಕರು ಅಲ್ಲಲ್ಲಿ ಗದ್ದೆ ಹದ ಮಾಡುವ ಕಾಯಕದಲ್ಲಿ ತೊಡಗಿರುವ ದೃಶ್ಯಗಳು ಕಂಡು ಬರುತ್ತಿವೆ. ಬಹುತೇಕ ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭತ್ತದ ಕೃಷಿಯನ್ನು ರೈತರು ಕಡೆಗಣಿಸಿದ್ದರು. ಅಲ್ಲಲ್ಲಿ ಗದ್ದೆಗಳನ್ನು ಪಾಳು ಬಿಟ್ಟಿದ್ದರು. ಒಂದೆಡೆ ಪಾಳು ಬಿದ್ದ ಗದ್ದೆಗಳಲ್ಲಿ ಅಡಿಕೆ, ಬಾಳೆ ಕೃಷಿ ತಲೆಯೆತ್ತಿದ್ದರೆ ಮತ್ತೆ ಕೆಲವರು ಭತ್ತದ ಕೃಷಿಯನ್ನು ಕಡೆಗಣಿಸಿ ಉಳುಮೆ ಮಾಡದೇ ಬಿಟ್ಟಿದ್ದರು. ಇದೀಗ ವಾಣಿಜ್ಯ ಬೆಳೆಗಳಿಗೆ ಉತ್ತಮ ಧಾರಣೆ ಸಿಗುತ್ತಿರುವುದರಿಂದ ಕಾಫಿ, ಕಾಳು ಮೆಣಸು ಕೃಷಿಯ ಜೊತೆ ಜೊತೆಗೆ ಭತ್ತದ ಕೃಷಿಯತ್ತಲೂ ರೈತರು ಚಿತ್ತ ಹರಿಸಿದ್ದಾರೆ.

ADVERTISEMENT

ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಕೆರೆತೋಡುಗಳಲ್ಲಿ ನೀರು ಹರಿಯುತ್ತಿದೆ. ಬಲಮುರಿಯಲ್ಲಿ ಕಿರುಸೇತುವೆಯ ಮಟ್ಟಕ್ಕೆ ಕಾವೇರಿ ನದಿ ನೀರು ಹರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಅಲ್ಲಲ್ಲಿ ಭತ್ತದ ಬಿತ್ತನೆ ಮಾಡುವ ಮೂಲಕ ಕೃಷಿ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದಾರೆ. ಇಲ್ಲಿಗೆ ಸಮೀಪದ ಬೇತು, ಕೈಕಾಡು, ಪಾರಾಣೆ ನೆಲಜಿ, ಹೊದ್ದೂರು, ಬಲಮಾವಟಿ ಗ್ರಾಮಗಳಲ್ಲಿ ಭತ್ತದ ಕೃಷಿಗಾಗಿ ಗದ್ದೆ ಉಳುಮೆ ಮಾಡುವ ದೃಶ್ಯಗಳು ಕಂಡುಬರುತ್ತಿವೆ.

‘ಬಿಡುವು ಕೊಟ್ಟು ಸುರಿಯುತ್ತಿರುವ ಮಳೆ ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಗದ್ದೆಯನ್ನು ಹಸನುಗೊಳಿಸಿ ಬಿತ್ತನೆ ಕಾರ್ಯವನ್ನು ಪೂರೈಸಿದ್ದೇವೆ. ಒಂದು ತಿಂಗಳ ಬಳಿಕ ಸಸಿ ಬಂದ ಮೇಲೆ ನಾಟಿ ಕಾರ್ಯ ಆರಂಭವಾಗಲಿದೆ’ ಎಂದು ಭೇತು ಗ್ರಾಮದ ಮಕ್ಕಿ ಸುಬ್ರಹ್ಮಣ್ಯ ಹೇಳಿದರು.

ಸದ್ಯ ಭತ್ತದ ಕೃಷಿಗೆ ಕಾರ್ಮಿಕರ ಕೊರತೆ ಇಲ್ಲ ಕೊಯ್ಲು ಮಾಡುವ ಅವಧಿಯಲ್ಲಿ ಕಾರ್ಮಿಕರ ಕೊರತೆ ಸಮಸ್ಯೆ ಕಾಡಲಿದೆ. ರೈತರು ಆ ಅವಧಿಯಲ್ಲಿ ಕಾಳಜಿ ವಹಿಸಿದರೆ ಭತ್ತದ ಕೃಷಿ ಲಾಭದಾಯಕ ಎಂದರು.

ಬಲ್ಲಮಾವಟಿ ಗ್ರಾಮದಲ್ಲಿ ಟಿಲ್ಲರ್ ಮೂಲಕ ಗದ್ದೆಗಳನ್ನು ಹಸನು ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಲ್ಲೊಂದಡೆ ಇಲ್ಲೊಂದೆಡೆ ಎತ್ತುಗಳ ಮೂಲಕ ಉಳುಮೆ ಮಾಡುವ ದೃಶ್ಯಗಳೂ ಕಂಡು ಬಂದವು.

ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಭತ್ತದ ಉಳುಮೆ ಕಾರ್ಯದಲ್ಲಿ ತೊಡಗಿರುವ ಕೃಷಿಕರು

ಕಾಫಿ ತೋಟಗಳಲ್ಲಿ ಕಾಫಿ ಗಿಡಗಳನ್ನು ನೆಡುವ, ಕಳೆ ನಿರ್ಮೂಲನೆ ಮಾಡುವ ಕೆಲಸವೂ ನಡೆಯುತ್ತಿದೆ. ಕಾಳು ಮೆಣಸಿನ ಕೃಷಿಯತ್ತಲೂ ರೈತರ ಗಮನ ಹರಿಸಿದ್ದಾರೆ. ಇಲ್ಲಿನ ನರ್ಸರಿಗಳಲ್ಲಿ ಕಾಫಿ, ಅಡಿಕೆ, ಕಾಳು ಮೆಣಸಿನ ಗಿಡಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಹೊದ್ದೂರು, ನೆಲಜಿ, ಬಲ್ಲಮಾವಟಿ, ಪೇರೂರು, ಪುಲಿಕೋಟು ಭಾಗಗಳಲ್ಲಿ ಭತ್ತದ ಕೃಷಿಯ ಜೊತೆಗೆ ಕಾಫಿ ತೋಟದ ಕೆಲಸಗಳೂ ಭರದಿಂದ ಸಾಗುತ್ತಿವೆ.

ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಕಿರು ಸೇತುವೆಯ ಮಟ್ಟಕ್ಕೆ ನೀರಿನ ಹರಿವು ಕಂಡು ಬಂದ ದೃಶ್ಯ
ಸೋಮವಾರಪೇಟೆ ಸಮೀಪದ ಅಜ್ಜಳ್ಳಿ ನವೀನ್ ಅವರ ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯಕ್ಕೆ ಸಸಿಗಳನ್ನು ಕೀಳುತ್ತಿರುವ ಕಾರ್ಮಿಕರು

ಉತ್ತಮ ಮಳೆ: ನಾಟಿ ಕಾರ್ಯಕ್ಕೆ ಸಿದ್ಧತೆ

ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಹಲವೆಡೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಮುಂಗಾರು ಮಳೆ ನಿಗದಿತ ಸಮಯದಲ್ಲಿ ಸುರಿದು ಕೆಲವು ವರ್ಷಗಳೇ ಕಳೆದಿವೆ. ಆದರೆ ಪ್ರಸಕ್ತ ಸಾಲಿನ ಮೇ ಅಂತ್ಯದಿಂದಲೂ ಆಗಾಗ ಮಳೆಯಾಗುತ್ತಿದ್ದು ಜೂನ್ ತಿಂಗಳಿನಿಂದ ನಿರಂತರ ಮಳೆಯಾಗುತ್ತಿದೆ. ಗದ್ದೆಗಳಲ್ಲಿ ನೀರು ಸಂಗ್ರಹವಾದ್ದರಿಂದ ಹಲವು ಗ್ರಾಮಗಳ ರೈತರು ಕೃಷಿಯಲ್ಲಿ ಚುರುಕುಗೊಂಡಿದ್ದಾರೆ. ಶಾಂತಳ್ಳಿ ಹೋಬಳಿಯಾದ್ಯಂತ ನಾಟಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದರೆ ಶನಿವಾರಸಂತೆ ಹೋಬಳಿಯ ಕೆಲವು ರೈತರು ಈಗಾಗಲೇ ನಾಟಿ ಕೆಲಸ ಪ್ರಾರಂಭಿಸಿದ್ದಾರೆ. ಸಮೀಪದ ಅಜ್ಜಳ್ಳಿಯಲ್ಲಿ ಮನೆ ಮಂದಿಯೊಂದಿಗೆ ಕಾರ್ಮಿಕರು ನಾಟಿ ಕೆಲಸ ಮಾಡಿದರು. ಮಳೆ ಬಿಡುವು ನೀಡಿ ಸುರಿಯುತ್ತಿರುವುದರಿಂದ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಡೆಸಲು ಅವಕಾಶವಾಗಿದೆ. ‘ಕೆಲವು ವರ್ಷಗಳಿಂದ ಸರಿಯಾದ ಸಮಯಕ್ಕೆ ಭತ್ತದ ನಾಟಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮಳೆ ಬಿಟ್ಟು ಬಿಟ್ಟು ಚೆನ್ನಾಗಿ ಸುರಿಯುತ್ತಿದೆ. ಭತ್ತದ ಕೃಷಿ ಲಾಭದಾಯಕ ಅಲ್ಲ ಎಂದು ಈಗಾಗಲೇ ಹಲವರು ಶುಂಠಿ ಕಾಫಿ ಮತ್ತು ಅಡಿಕೆ ತೋಟಗಳನ್ನಾಗಿ ಗದ್ದೆಯನ್ನು ಪರಿವರ್ತಿಸಿದ್ದಾರೆ. ಆದರೆ ನಾವು ಪ್ರತಿ ವರ್ಷ ಭತ್ತ ಬೆಳೆಯುತ್ತಿದ್ದೇವೆ’ ಎಂದು ಗದ್ದೆಯ ಮಾಲೀಕರಾದ ಅಜ್ಜಳ್ಳಿ ನವೀನ್ ತಿಳಿಸಿದರು. 80.5 ಸೆಂ.ಮೀ ಮಳೆ: ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು 2 ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ. ಕಳೆದ ವರ್ಷ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 41.2 ಸೆಂ.ಮೀ ಮಳೆಯಾಗಿತ್ತು. ಈ ಬಾರಿ ಭಾನುವಾರದ ತನಕ 80.5 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.