ಮಡಿಕೇರಿ: ‘ಬಾಳೆ ಬೆಳೆದವನ ಬಾಳು ಗೋಳು’ ಎಂಬ ಮಾತನ್ನು ಸುಳ್ಳಾಗಿಸಿ, ‘ಬಾಳೆ ಬೆಳೆದವರ ಬಾಳು ಬಂಗಾರ’ ಎಂಬ ಹಳೆಯ ಗಾದೆ ಮಾತನ್ನು ನಿಜವಾಗಿಸಿದ ಯಶೋಗಾಥೆ ಇಲ್ಲಿದೆ.
ಗುತ್ತಿಗೆಗೆ ಭೂಮಿ ಪಡೆದು, ಆಧುನಿಕ ತಂತ್ರಜ್ಞಾನ ಬಳಸಿ, ಯಶಸ್ವಿಯಾಗಿ ಬಾಳೆ ಬೆಳೆದು ಸೈ ಎನಿಸಿಕೊಂಡವರು ಇಲ್ಲಿನ ನಾಪೋಕ್ಲುವಿನ ಚೋನಕೆರೆಯ ಸೋದರರಾದ ಶರತ್ ಕೊಂಬಂಡ, ಸಂಜಯ್ ಕೊಂಬಂಡ.
ಪದವೀಧರರಾಗಿರುವ ಇವರಿಬ್ಬರು 2015ರಲ್ಲಿ 500 ಬಾಳೆಕಂದಿನೊಂದಿಗೆ ತೋಟ ಶುರು ಮಾಡಿದರು. ಈಗ ಹಾಕತ್ತೂರಿನಲ್ಲಿ 16 ಎಕರೆ ಕೃಷಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಒಟ್ಟು 18 ಸಾವಿರ ಬಾಳೆಗಿಡಗಳನ್ನು ಬೆಳೆದಿದ್ದಾರೆ. ಇದರಲ್ಲಿ 15 ಸಾವಿರಕ್ಕೂ ಹೆಚ್ಚು ನೇಂದ್ರ ಬಾಳೆ ಹಾಗೂ 3 ಸಾವಿರ ಜಿ 9 ತಳಿಯ ಬಾಳೆ ಇದೆ.
ಕೇವಲ ಇಷ್ಟೇ ಆಗಿದ್ದರೆ ಇದರಲ್ಲಿ ವಿಶೇಷ ಇಲ್ಲ. ಆದರೆ, ಇವರು ಬಾಳೆಗಿಡಗಳು ಗಾಳಿಗೆ ನೆಲಕ್ಕೊರಗದಂತೆ ಮಾಡಲು ಅನುಸರಿಸುವ ವಿಧಾನದಿಂದ ಇತರರಿಗೆ ಮಾದರಿಯಾಗಿದ್ದಾರೆ.
ಗಾಳಿ ಬೀಸಿದರೆ ಗಿಡಗಳು ಬೀಳದ ಹಾಗೆ ಮಾಡಲು ಅಡಕೆ ಗಿಡದ ಕಂಬಗಳನ್ನು ಬಳಸುತ್ತಾರೆ. 10 ಎಂ.ಎಂನ ಜಿ.ಎ ವೈಯರ್‌ಗಳನ್ನು, ಕೇಬಲ್ ವೈಯರ್‌ಗಳನ್ನು ಬಳಕೆ ಮಾಡಿ 36 ಬಾಳೆಗಿಡಗಳಿಗೆ ಒಂದು ಬಾಕ್ಸ್ ತರಹ ಮಾಡಿ, 4 ಕಂಬಗಳಿಗೆ ನಾಲ್ಕೂ ದಿಕ್ಕುಗಳಿಂದಲೂ ಕಟ್ಟಲಾಗುತ್ತದೆ. ಇದರಿಂದ ಈ ಭಾಗದಲ್ಲಿ ಬೀಸುವ ಬಿರುಸಿನ ಗಾಳಿಗೆ ಬಾಳೆಗಿಡಗಳು ನೆಲಕ್ಕೊರಗುವುದಿಲ್ಲ.
ಈ ಬಗೆಯ ವಿಧಾನವನ್ನು ಅವರು ಕೇರಳದ ವಯನಾಡಿನಲ್ಲಿ ನೋಡಿ, ಅದನ್ನು ಇಲ್ಲಿ ಪ್ರಾಯೋಗಿಕವಾಗಿ ಮಾಡಿದರು. ಅದು ಯಶಸ್ವಿಯಾದ ಕೂಡಲೇ ಇಡೀ ತೋಟಕ್ಕೆ ಅದನ್ನು ಅನ್ವಯಿಸಿದರು. ಈ ಮೂಲಕ ಈ ಭಾಗದಲ್ಲೂ ಯಶಸ್ವಿಯಾಗಿ, ಲಾಭದಾಯಕವಾಗಿ ಬಾಳೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇವರ ತೋಟಕ್ಕೆ ಈಚೆಗೆ ಭೇಟಿ ನೀಡಿದ್ದ ಕೃಷಿ ಇಲಾಖೆಯ ಅಧಿಕಾರಿಗಳೇ ಅಕ್ಷರಶಃ ನಿಬ್ಬೆರಗಾದರು.
5.5 ಅಡಿ ಅಂತರದಲ್ಲಿ ಒಂದು ಎಕರೆಗೆ 1,425 ಬಾಳೆಗಿಡಗಳ ನಾಟಿ ಮಾಡಿರುವ ಇವರು ಜಮೀನಿನಲ್ಲೇ ಇರುವ ಕೆರೆಯಿಂದ ನೀರನ್ನು ತುಂತುರು ನೀರಾವರಿ ಪದ್ಧತಿ ಮೂಲಕ ಗಿಡಗಳಿಗೆ ಕೊಡುತ್ತಾರೆ. 5 ಬಾರಿ ಉಳುಮೆ ಮಾಡಿ, ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಕಳೆ ಇಲ್ಲದೇ ಸ್ವಚ್ಛವಾಗಿರುವ ಬಾಳೆ ತೋಟ ನೋಡಲು ನಿಜಕ್ಕೂ ಎರಡು ಕಣ್ಣುಗಳು ಸಾಲದು ಎನ್ನಿಸುತ್ತವೆ.
ಪ್ರತಿ ಬಾಳೆ ಗಿಡದ ಸುಳಿಗೆ ನ್ಯಾನೊ ಪೋಷಕಾಂಶ ಮತ್ತು ಮೈಕ್ರೊ ನ್ಯೂಟ್ರೆಂಟ್‌ಗಳನ್ನು 3ರಿಂದ 4 ಬಾರಿ ಹಾಕುತ್ತಾರೆ. ಇದರಿಂದ ಗಿಡಗಳ ಬೆಳವಣಿಗೆ ಹೆಚ್ಚಾಗುತ್ತದೆ.
ಬೆಳೆದ ಹಣ್ಣುಗಳನ್ನು ಕೇರಳಕ್ಕೆ ಮತ್ತು ಧರ್ಮಸ್ಥಳಕ್ಕೆ ಮಾರಾಟ ಮಾಡುತ್ತಾರೆ. ಒಂದು ವರ್ಷಕ್ಕೆ 2 ಲಕ್ಷ ಕೆ.ಜಿಯಿಂದ 3 ಲಕ್ಷ ಕೆ.ಜಿಯವರೆಗೆ ಮಾರಾಟ ಮಾಡಲಾಗುತ್ತದೆ. ಜೊತೆಗೆ, ಇವರು ವರ್ಷಕ್ಕೆ 50 ಸಾವಿರದಿಂದ 1 ಲಕ್ಷದವರೆಗೆ ಬಾಳೆಕಂದುಗಳ ಮಾರಾಟವನ್ನೂ ಮಾಡುತ್ತಾರೆ. ಕೇರಳ ಮತ್ತು ಎಚ್.ಡಿ.ಕೋಟೆಯಿಂದ ಇಲ್ಲಿಗೆ ಬಂದು ಖರೀದಿಸುತ್ತಾರೆ.
ಸದ್ಯ, ಇವರು ತೋಟದಲ್ಲಿರುವ ಬಾಳೆ ಇನ್ನು 20 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದರೊಂದಿಗೆ ಇವರು ಕಾಫಿ, ತೆಂಗು, ಅಡಕೆ, ಮೆಣಸುಗಳನ್ನೂ ಬೆಳೆಯುವ ಮೂಲಕ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿದ್ದಾರೆ.
ಔಷಧ ಸಿಂಪಡಣೆಗೆ ಆಧುನಿಕ ಯಂತ್ರೋಪಕರಣಗಳ ಬಳಕೆ 5.5 ಅಡಿ ಅಂತರದಲ್ಲಿ ಒಂದು ಎಕರೆಗೆ 1,425 ಬಾಳೆಗಿಡಗಳ ನಾಟಿ ಇತರರಿಗೆ ಮಾದರಿಯಾದ ಸೋದರರು
ಏಪ್ರಿಲ್‌ನಲ್ಲಿ ಬಿತ್ತನೆ ಮಾಡಿದರೆ ಮಾರ್ಚ್ ಹೊತ್ತಿಗೆ ಕಟಾವಿಗೆ ಬರುತ್ತದೆ. ಬಾಳೆಕೃಷಿ ಮಾಡುವುದಕ್ಕೆ ಇದು ಒಳ್ಳೆಯ ಕಾಲ. ಶ್ರಮಪಟ್ಟು ಮಾಡಿದರೆ ನಿಜಕ್ಕೂ ಬಾಳೆ ಕೈ ಹಿಡಿಯುತ್ತದೆಶರತ್ ಕೊಂಬಂಡ ಬಾಳೆ ಕೃಷಿಕ.
ಬಾಳೆತೋಟವನ್ನು ಈಚೆಗಷ್ಟೇ ನೋಡಿದೆವು. ನಿಜಕ್ಕೂ ಇವರು ಅಚ್ಚುಕಟ್ಟಾದ ಬಾಳೆತೋಟ ಮಾಡಿದ್ದಾರೆ. ಯುವ ತಲೆಮಾರಿಗೆ ಆದರ್ಶ ಎನಿಸಿದ್ದಾರೆಮೈತ್ರಿ ಕೃಷಿ ಇಲಾಖೆ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.