ADVERTISEMENT

ಗರಿಗೆದರಿದ ಕೃಷಿ ಚಟುವಟಿಕೆ: ಭತ್ತ, ಮುಸುಕಿನ ಜೋಳದ ಬಿತ್ತನೆಯತ್ತ ರೈತರು

ಡಿ.ಪಿ.ಲೋಕೇಶ್
Published 21 ಜೂನ್ 2024, 7:26 IST
Last Updated 21 ಜೂನ್ 2024, 7:26 IST
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದ ಕೊಮಾರಪ್ಪ ಎಂಬುವವರ ಗದ್ದೆಯನ್ನು ಟ್ರಾಕ್ಟರ್ ಮೂಲಕ ಉಳುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದ ಕೊಮಾರಪ್ಪ ಎಂಬುವವರ ಗದ್ದೆಯನ್ನು ಟ್ರಾಕ್ಟರ್ ಮೂಲಕ ಉಳುತ್ತಿರುವುದು.   

ಸೋಮವಾರಪೇಟೆ: ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತಾಪಿ ವರ್ಗ ಕೃಷಿ ಚಟುವಟಿಕೆಯತ್ತ ಚಿತ್ತ ಹರಿಸಿದೆ.

ಭೂಮಿಯಲ್ಲಿ ಶೀತ ಇರುವ ಕಾರಣ, ಭೂಮಿಯನ್ನು ಹದಗೊಳಿಸಿ, ಬೆಳೆ ಬೆಳೆಯುವತ್ತ ಮುಖ ಮಾಡಿದ್ದು, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿನ ಗದ್ದೆ, ಹೊಲಗಳನ್ನು ಹದಗೊಳಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಭತ್ತ, ಜೋಳ ಹಾಗೂ ಇನ್ನಿತರ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ 9,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಭತ್ತದ ಬಿತ್ತನೆ ಬೀಜವನ್ನು ಕರ್ನಾಟಕ ಸ್ಟೇಟ್ ಸೀಡ್ ಕಾರ್ಪೋರೇಷನ್‌ನಿಂದ ತರಿಸಿಕೊಂಡು ರೈತರಿಗೆ ವಿತರಿಸಲಾಗುತ್ತಿದೆ.

ADVERTISEMENT

ಬಿಆರ್2655(ಬಾಂಗ್ಲಾರೈಸ್), ಇಂಟಾನ್, ಐಆರ್64, ತನು, ಅತಿರ ತಳಿ ಬೀಜ ದಾಸ್ಥಾನು ಮಾಡಲಾಗಿದೆ. ಎಲ್ಲಾ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಸುಕಿನ ಜೋಳ ಬಿತ್ತನೆಗೆ ಸೂಕ್ತ ಸಮಯವಾಗಿರುವುದರಿಂದ ತಾಲ್ಲೂಕಿನ ಯಡವನಾಡು, ಹುದುಗೂರು, ಹೆಬ್ಬಾಲೆ, ಕೂಡಿಗೆ, ಗುಡ್ಡೆಹೊಸೂರು, ಮದಲಾಪುರ, ಶಿರಂಗಾಲ, ತೊರೆನೂರು, ಬಾಣಾವರ, ಆಲೂರು ಸಿದ್ದಾಪುರ, ಶನಿವಾರಸಂತೆ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ.

ಈಗಾಗಲೇ ಕೃಷಿ ಇಲಾಖೆಯಿಂದ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ದಾಸ್ತಾನಿರಿಸಲಾಗಿದೆ. ರೈತರ ಬೇಡಿಕೆ ಪೂರೈಸುವಷ್ಟು ಬಿತ್ತನೆ ಬೀಜವನ್ನು ದಾಸ್ತಾನಿರಿಸಲಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ.

ಗಂಗಾಕಾವೇರಿ, ಕಾವೇರಿ 25ಕೆ55, ಸಿಪಿ818, ಪಯನೀರ್30 ಬಿ07 ಮುಸುಕಿನ ಜೋಳದ ತಳಿಗಳ ಬಿತ್ತನೆ ಬೀಜ ಲಭ್ಯವಿದೆ. ತಾಲ್ಲೂಕಿನ ಗುಡ್ಡೆಹೊಸೂರು, ಕೂಡಿಗೆ, ತೊರೆನೂರು, ಹೆಬ್ಬಾಲೆ, ಶಿರಂಗಾಲ, ಶನಿವಾರಸಂತೆಯ ಸಹಕಾರ ಸಂಘ, ಕುಶಾಲನಗರ ಹಾಗೂ ಸೋಮವಾರಪೇಟೆ ಕಸಾಬ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜವನ್ನು ದಾಸ್ತಾನಿರಿಸಲಾಗಿದೆ.

ಈ ಬಾರಿ ಜೋಳ ಬೆಳೆಯತ್ತ ರೈತರ ನಿರಾಸಕ್ತಿ

ಹಲವೆಡೆಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಈ ಹಿಂದಿನ ವರ್ಷಗಳಲ್ಲಿ 4,500 ರಿಂದ 5 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ಮುಸುಕಿನ ಜೋಳ ಬೆಳೆಯುವ ಕೃಷಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಜೋಳ ಬೆಳೆಯುತ್ತಿದ್ದ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಕೃಷಿಕರು ಸುವರ್ಣ ಗಡ್ಡೆ, ಕೆಸ, ಸಿಹಿ ಗೆಣಸು, ಶುಂಠಿ ಬೆಳೆಯಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ಮುಸುಕಿನ ಜೋಳ ಬೆಳೆಯುವರರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಕೃಷಿ ಇಲಾಖೆಯಿಂದ ಕೃಷಿಕರಿಗೆ ಸಕಾಲದಲ್ಲಿ ಸೌಕರ್ಯಗಳನ್ನು ವಿತರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸಾಮಾನ್ಯವಾಗಿ ನಾವು ತುಂಗಾ ಭತ್ತವನ್ನು ನಾಟಿ ಮಾಡುತ್ತಿದ್ದೆವು. ಆದರೆ, ಈ ಬಾರಿ ತುಂಗ ಭತ್ತದ ಬೀಜ ಸಿಗುತ್ತಿಲ್ಲ. ಕಳೆದ ವರ್ಷ ನಮ್ಮ ಗದ್ದೆಯಲ್ಲಿ ಬೆಳೆದಿದ್ದ ತುಂಗ ಭತ್ತದ ಬೀಜವನ್ನು ಬಿತ್ತನೆಗೆ ಬಳಸುತ್ತಿದ್ದೇವೆ’ ಎಂದು ಗೌಡಳ್ಳಿ ಗ್ರಾಮದ ಕೃಷಿಕ ನಾಗರಾಜು ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದ ನಾಗರಾಜು ತಾವೇ ಬೆಳೆದ ತುಂಗಾ ಭತ್ತದ ಬೀಜವನ್ನು ಪಾತಿ ಮಾಡಿ ಚೆಲ್ಲುತ್ತಿರುವುದು.
ಈ ಬಾರಿ ಜೋಳ ಬೆಳೆಯತ್ತ ರೈತರ ನಿರಾಸಕ್ತಿ ಸೋಮವಾರಪೇಟೆ ತಾಲ್ಲೂಕಿನಲ್ಲಿ 9,500 ಹೆಕ್ಟೇರ್ ಪ್ರದೇಶ ಭತ್ತ ಬೆಳೆಯುವ ಗುರಿ
ತುಂಗಾ ಭತ್ತದ ಬಿತ್ತೆನೆ ಬೀಜ ಸಿಗುತ್ತಿಲ್ಲ. ಈ ಬಾರಿ ಭತ್ತದ ಬೀಜಕ್ಕೆ ಬೆಲೆ ಹೆಚ್ಚಳವಾಗಿದೆ. ಮುಂದೆ ಯಾವ ಬಿತ್ತನೆ ಬೀಜ ಸಿಗುತ್ತದೆಯೋ ಅದನ್ನೆ ಬಳಸಿ ಕೃಷಿ ಮಾಡಲಾಗುವುದು
ಕೊಮಾರಪ್ಪ ಗೌಡಳ್ಳಿ.
ಸರಿಯಾಗಿ ತುಂಗಾ ಭತ್ತದ ಬೀಜವನ್ನು ರೈತರು ಸಂಗ್ರಹಿಸದ ಕಾರಣ ತುಂಗಾ ಭತ್ತದ ಬೀಜವನ್ನು ಸರ್ಕಾರ ನೀಡುತ್ತಿಲ್ಲ. ಉಳಿದಂತೆ ಹೈಬ್ರೀಡ್ ಸೇರಿದಂತೆ ಹಿಂದೆ ನೀಡುತ್ತಿದ್ದ ಎಲ್ಲ ರೀತಿಯ ಭತ್ತದ ಬೀಜವನ್ನು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆಯಲ್ಲಿ ನೀಡಲಾಗುತ್ತಿದೆ
ವೀರಣ್ಣ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.