ADVERTISEMENT

ಗೋಣಿಕೊಪ್ಪಲು | ನಿವೇಶನಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ಬುಡಕಟ್ಟು ಕೃಷಿಕರ ಸಂಘದ ನೇತೃತ್ವ, ಹಲವು ವರ್ಷಗಳಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:57 IST
Last Updated 2 ಜುಲೈ 2024, 4:57 IST
ಗೋಣಿಕೊಪ್ಪಲು ಬಳಿಯ ಹೊಸೂರು ಗ್ರಾಮ ಪಂಚಾಯಿತಿ ಎದುರು ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಕಾಫಿ ತೋಟದ ಲೈನ್ ಮನೆ ನಿವಾಸಿಗಳು ನಿವೇಶನಕ್ಕಾಗಿ ಹಗಲು ರಾತ್ರಿ ಧರಣಿ ಮುಂದುವರಿಸಿದ್ದಾರೆ. ರುವ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತನಾಡಿದರು.
ಗೋಣಿಕೊಪ್ಪಲು ಬಳಿಯ ಹೊಸೂರು ಗ್ರಾಮ ಪಂಚಾಯಿತಿ ಎದುರು ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಕಾಫಿ ತೋಟದ ಲೈನ್ ಮನೆ ನಿವಾಸಿಗಳು ನಿವೇಶನಕ್ಕಾಗಿ ಹಗಲು ರಾತ್ರಿ ಧರಣಿ ಮುಂದುವರಿಸಿದ್ದಾರೆ. ರುವ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತನಾಡಿದರು.   

ಗೋಣಿಕೊಪ್ಪಲು: ಕಾಫಿತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಕಾರ್ಮಿಕರು ನಿವೇಶನಕ್ಕಾಗಿ ಆಗ್ರಹಿಸಿ ಸೋಮವಾರದಿಂದ ಪಾಲಿಬೆಟ್ಟದ ಹೊಸೂರು ಗ್ರಾಮ ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.

ಬುಡಕಟ್ಟು ಕೃಷಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮಕ್ಕಳು, ಮಹಿಳೆಯರು, ವಿದ್ಯಾರ್ಥಿನಿಯರು, ಪುರುಷರು ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದಾರೆ. ಸುರಿಯುತ್ತಿರುವ ಮಳೆಯಲ್ಲಿಯೇ ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗುತ್ತಿದ್ದಾರೆ.

ಈ ಕುರಿತು ಮಾತನಾಡಿದ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾ ಅಧ್ಯಕ್ಷ ಗಪ್ಪು,‘20 ವರ್ಷಗಳಿಂದ ತಲೆಯ ಮೇಲೊಂದು ಸೂರು ನಿರ್ಮಿಸಿಕೊಳ್ಳಲು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಯಾವ ಸರ್ಕಾರವೂ ಸ್ಪಂದಿಸುತ್ತಿಲ್ಲ. ಹಿಂದೆ ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಎದುರು ಹಲವು ಬಾರಿ ಆಹೋರಾತ್ರಿ ಧರಣಿ ನಡೆಸಲಾಗಿತ್ತು. ಅಂದಿನ ಶಾಸಕರು ಕೇವಲ ಭರವಸೆ ನೀಡಿದರೇ ಹೊರತು ನ್ಯಾಯ ಒದಗಿಸಲಿಲ್ಲ’ ಎಂದು ದೂರಿದರು.

ADVERTISEMENT

‘ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಸರ್ಕಾರ ಭೂಮಿ ಇದೆ. ಇದು ಉಳ್ಳವರ ಕಾಫಿ ತೋಟವಾಗಿದೆ. ಇದನ್ನು ಬಿಡಿಸಿ ನಿವೇಶನ ರಹಿತ ಬಡ ಬುಡಕಟ್ಟು ಜನಾಂಗದ ಕಾರ್ಮಿಕರಿಗೆ ನೀಡಿ ಎಂದು ಒತ್ತಾಯಿಸಲಾಗುತ್ತಿದೆ. ಇದರ ಬಗ್ಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

ಸಂಜೆ ತಾಲ್ಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ ಧರಣಿ ನಿರತರ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಆಹವಾಲು ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ‘ಶಾಸಕರೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು. ಜಿಲ್ಲಾಡಳಿತಕ್ಕೂ ವರದಿ ನೀಡಲಾಗುವುದು’ ಎಂದು ತಿಳಿಸಿದರು.

ಟಾರ್ಪಾಲ್ ಕೆಳಗೆ ಪ್ರತಿಭಟನೆ ಆರಂಭ ಭರವಸೆ ನೀಡಿದ್ದ ಹಿಂದಿನ ಶಾಸಕರು ಪೊನ್ನಂಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.