ಮಡಿಕೇರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ಕಾರ್ಯನಿರ್ವಹಿಸಿ ಹಲವು ಮಂದಿಗೆ ಬೆಳಕಾಗಿದ್ದ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ಓಟ್‌ರೀಚ್ ಸೇವಾ ಕೇಂದ್ರದ ಅವಧಿ ಮುಂದಿನ ವರ್ಷ ಫೆಬ್ರುವರಿ ವೇಳೆಗೆ ಮುಗಿಯಲಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ಈ ಕೇಂದ್ರವು 5 ವರ್ಷಗಳ ಒಪ್ಪಂದ ಮುಗಿದ ಕಾರಣ ಸ್ಥಗಿತಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಈ ಕುರಿತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಪತ್ರ ಬರೆದು ಕೊಡಗಿನಲ್ಲಿ ದಿನ ಕಳೆದಂತೆ ಶ್ರವಣ ದೋಷವುಳ್ಳವರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರೂ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಇಲ್ಲಿನ ಶಾಸಕರು ಹಾಗೂ ಸಂಸದರು ಈ ಕುರಿತು ಗಮನ ಹರಿಸಲೇ ಬೇಕಿದೆ ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ.
ಶ್ರವಣದೋಷವುಳ್ಳವರ ಚಿಕಿತ್ಸೆ ಒಂದೆರಡು ದಿನಗಳಲ್ಲಿ ಮುಗಿಯುವಂತದ್ದಲ್ಲ. ಇದಕ್ಕೆ ನಿರಂತರವಾದ ಹಾಗೂ ನಿಯಮಿತವಾದ ಥೆರಪಿ ಬೇಕಾಗುತ್ತದೆ. ಈ ಬಗೆಯ ಚಿಕಿತ್ಸೆ ನೀಡುವ ದೇಶದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯೂ ಒಂದು. ಈ ಬಗೆಯ ಸಂಸ್ಥೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಲ್ಲ.
ಶ್ರವಣದೋಷವುಳ್ಳ ಮಕ್ಕಳು, ಶ್ರವಣ ಸಮಸ್ಯೆ ಎದುರಿಸುತ್ತಿರುವ ಜನರು, ಮಾತನಾಡಲು ಸಮಸ್ಯೆ ಇರುವ ಮಕ್ಕಳು ಪ್ರತಿ ಬಾರಿಯೂ ಥೆರಪಿ ತೆಗೆದುಕೊಳ್ಳಲು ಮೈಸೂರಿಗೆ ಹೋಗಬೇಕಿತ್ತು. ಅದನ್ನು ತಪ್ಪಿಸಲು ಸಂಸ್ಥೆಯು ಕೆಲವೊಂದು ದೂರದ ಜಿಲ್ಲೆಗಳಲ್ಲಿ ‘ಔಟ್‌ರೀಚ್’ ಸೇವಾ ಕೇಂದ್ರಗಳನ್ನು ಆರಂಭಿಸಿತ್ತು. ಈ ಬಗೆಯ ಒಂದು ಔಟ್‌ರೀಚ್ ಸೇವಾ ಕೇಂದ್ರ ನಮ್ಮ ಕೊಡಗಿನಲ್ಲಿಯೂ ಇದೆ. ಕಳೆದ 5 ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಈ ಕೇಂದ್ರ ಕಾರ್ಯಾಚರಣೆ ನಡೆಸುತ್ತಿದೆ.
ಇಲ್ಲಿಂದ ಜಿಲ್ಲೆಯ ಸಾವಿರಾರು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶ್ರವಣದೋಷವುಳ್ಳ ಮಕ್ಕಳಿಗೆ, ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಈ ಸಂಸ್ಥೆ ಸೂಕ್ತ ಚಿಕಿತ್ಸೆ ನೀಡಿದೆ. ಇದು ಹಲವರ ಬದುಕಿನ ಬೆಳಕಾಗಿದೆ. ಆದರೆ, ಇದರ ಒಪ್ಪಂದದ ಅವಧಿ ಮುಗಿದಿದೆ ಎಂಬ ಕಾರಣಕ್ಕೆ ಕೇಂದ್ರ ಮುಚ್ಚುವ ಭೀತಿ ಎದುರಾಗಿದೆ.
ಈಗಾಗಲೇ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಈ ಕೇಂದ್ರವನ್ನು ಮುಚ್ಚಬಾರದು, ಮುಂದುವರಿಸಬೇಕು. ಇದರ ಅಗತ್ಯತೆ ಕೊಡಗಿಗೆ ಇದೆ ಎಂದು ಒತ್ತಾಯಿಸಿ ಬರೆದ ಪತ್ರಕ್ಕೆ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಮರ್ಪಕವಾಗಿ ಸ್ಪಂದಿಸಿಲ್ಲ. ಮಾತ್ರವಲ್ಲ, ಈ ಔಟ್‌ರೀಚ್ ಸೇವಾ ಕೇಂದ್ರವನ್ನು ಮುಚ್ಚಲು ಬಹುತೇಕ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧಿಕಾರಿಗಳು ಒಂದು ವೇಳೆ ಈ ಕೇಂದ್ರ ಮುಚ್ಚಿದರೂ, ಆಡಿಯೊಲಜಿಸ್ಟ್ ಸೇರಿದಂತೆ ಇತರ ತಜ್ಞರನ್ನು ನೇಮಕ ಮಾಡಿಕೊಂಡು ಸೇವೆ ಮುಂದುವರಿಸಲಾಗುವುದು ಎಂದು ಹೇಳುತ್ತಾರೆ. ಆದರೆ, ಐಶ್‌ನ ಔಟ್‌ರೀಚ್ ಸೇವಾ ಕೇಂದ್ರ ಕೇವಲ ಥೆರಪಿಗಳನ್ನು ಮಾತ್ರವಲ್ಲ ದುಬಾರಿ ಬೆಲೆಯ ಶ್ರವಣ ಯಂತ್ರಗಳನ್ನು ಅತ್ಯಂತ ಕನಿಷ್ಠ ಬೆಲೆಗೆ ಪೂರೈಸುತ್ತಿದೆ. ಜೊತೆಗೆ, ಆಟಿಸಂಪೀಡಿತ ಮಕ್ಕಳಿಗೆ ಸ್ಪಷ್ಟವಾಗಿ ಮಾತನಾಡಲು ಥೆರಪಿಗಳನ್ನು ನೀಡುತ್ತಿದೆ. ಈ ಎಲ್ಲ ಕಾರಣಗಳಿಂದ ಈ ಔಟ್ ರೀಚ್ ಸೇವಾ ಕೇಂದ್ರ ಮುಚ್ಚಬಾರದು ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ.
ಆಸ್ಪತ್ರೆಯಲ್ಲಿದೆ ಕಿವಿ, ಮೂಗು, ಗಂಟಲು ವಿಭಾಗ: ಸದ್ಯ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಕಿವಿ, ಮೂಗು, ಗಂಟಲು ವಿಭಾಗವು ಕಾರ್ಯನಿರ್ವಹಿಸುತ್ತಿದೆ. ಈ ವಿಭಾಗದಲ್ಲಿ 5 ಮಂದಿ ವೈದ್ಯರು ಇದ್ದಾರೆ. ಇನ್ನೂ ಇಬ್ಬರು ವೈದ್ಯರು ವಿಭಾಗಕ್ಕೆ ಬೇಕಿದೆ. ಜೊತೆಗೆ, ಈ ವರ್ಷ ಸ್ನಾತಕೋತ್ತರ ಪದವಿ ವಿಭಾಗವೂ ಸಂಸ್ಥೆಯಲ್ಲಿ ಆರಂಭವಾಗಲಿದೆ. ಹೀಗಾಗಿ, ಹೆಚ್ಚಿನ ವೈದ್ಯರ ಅಗತ್ಯ ಇದೆ. ಇಲ್ಲಿಯೂ ಶ್ರವಣದೋಷವುಳ್ಳವರಿಗೆ ಉತ್ತಮವಾದ ಚಿಕಿತ್ಸೆ ದೊರಕುತ್ತಿದೆ.
ಕೇಂದ್ರ ಮುಂದುವರಿಯಬೇಕು
ಕೊಡಗಿನಲ್ಲಿ ವೈದ್ಯಕೀಯ ಸೇವೆ ಹೆಚ್ಚಬೇಕೇ ಹೊರತು ಅದು ಕಡಿಮೆಯಾಗಬಾರದು. ‘ಐಶ್’ನ ಔಟ್‌ರೀಚ್ ಸೇವಾ ಕೇಂದ್ರ ಮುಂದುವರಿಯುವುದಕ್ಕೆ ಎಲ್ಲರೂ ಪ್ರಯತ್ನಪಡಬೇಕು. ಶ್ರವಣದೋಷವುಳ್ಳವರಿಗೆ ಅತಿ ಜೂರೂರಾಗಿ ಬೇಕಿರುವ ಇಂತಹ ಕೇಂದ್ರವನ್ನು ಉಳಿಸಿಕೊಳ್ಳಲು ಎಲ್ಲರೂ ಪಕ್ಷಾತೀತವಾಗಿ ಪ್ರಯತ್ನಿಸಬೇಕು. ಒಂದು ವೇಳೆ ಈ ಕೇಂದ್ರ ಮುಚ್ಚಿದರೆ ಮೈಸೂರು ಅಥವಾ ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಬೇಕಾಗುತ್ತದ
ವಿ.ಕೃಷ್ಣ ಸಾಮಾಜಿಕ ಹೋರಾಟಗಾರರು
ಸೇವೆಗೆ ವ್ಯತ್ಯಯವಾಗದಂತೆ ಕ್ರಮ
ಯಾವುದೇ ಕಾರಣಕ್ಕೂ ಯಾವುದೇ ಬಗೆಯ ಸೇವೆಯೂ ಆಸ್ಪತ್ರೆಯಲ್ಲಿ ಸ್ಥಗಿತಗೊಳ್ಳಲು ಅವಕಾಶ ನೀಡುವುದಿಲ್ಲ. ‘ಐಶ್’ನ ಔಟ್‌ರೀಚ್ ಸೇವಾ ಕೇಂದ್ರ ಮುಂದುವರಿಯುವುದಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಒಂದು ವೇಳೆ ಆಗದಿದ್ದರೆ ನಾವೇ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ಸೇವೆಯಲ್ಲಿ ಯಾವುದೇ ನ್ಯೂನತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು.
-ಡಾ.ಎ.ಜೆ.ಲೋಕೇಶ್ ಡೀನ್ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು -
ಉತ್ತಮವಾದ ಸೇವೆ ನೀಡುತ್ತಿದೆ
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಐಶ್) ಓಟ್‌ರೀಚ್ ಸೇವಾ ಕೇಂದ್ರವು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಇಂತಹ ಕೇಂದ್ರ ಮುಂದುವರಿಯಲು ಪ್ರಯತ್ನಿಸಲಾಗುತ್ತಿದೆ.
-ಡಾ.ಶ್ವೇತಾ ಕಿವಿ ಮೂಗು ಗಂಟಲು ವಿಭಾಗದ ಮುಖ್ಯಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.