ಮಡಿಕೇರಿ: ರಾಜ್ಯದಲ್ಲಿರುವ ಒಕ್ಕಲಿಗ ಗೌಡರೆಲ್ಲ ಸ್ವಾಭಿಮಾನಿಗಳು ಎಂದು ಬಿಜೆಪಿ ಮುಖಂಡ ಡಿ.ವಿ.ಸದಾನಂದಗೌಡ ತಿಳಿಸಿದರು.
‘ಒಕ್ಕಲಿಗ ಸಮುದಾಯವರು ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಅಥವಾ ನಾನೇ ಹೇಳಿದೆ ಎಂದು ಮತ ಹಾಕುವವರಲ್ಲ. ಎಲ್ಲವನ್ನೂ ಚಿಂತಿಸಿ, ತಮಗೆ ಸರಿ ಕಂಡವರಿಗೆ ಮಾತ್ರವೇ ಅವರು ಮತ ನೀಡುತ್ತಾರೆ’ ಎಂದು ಅವರು ಇಲ್ಲಿನ ಕುಶಾಲನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಹೇಳಿದರು.
ಕೊಡವರು, ಒಕ್ಕಲಿಗರು ಸೇರಿದಂತೆ ಕೊಡಗಿನಲ್ಲಿರುವ ಎಲ್ಲರೂ ಜಾತಿಯನ್ನು ಮೀರಿ ಮತದಾನ ಮಾಡುವವರು. ಯಾರೋ ಒಬ್ಬರು ಬಂದು ಒಂದು ಜಾತಿ ಮತಗಳನ್ನು ಸೆಳೆಯುತ್ತೇವೆ ಎಂದರೆ ಅದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಒಕ್ಕಲಿಗ ಸಮುದಾಯದಲ್ಲಿನ ಈ ಹಿಂದಿನ ಪ್ರಮುಖ ನಾಯಕರು ಕೇವಲ ಒಂದು ಜಾತಿಗೆ ಮಾತ್ರ ಸೀಮಿತರಾಗಲಿಲ್ಲ. ಈಗಲೂ ಒಕ್ಕಲಿಗರನ್ನು ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗದು ಎಂದು ತಿಳಿಸಿದರು.
ದೇಶದಲ್ಲಿ 270 ಕ್ಷೇತ್ರದಲ್ಲಿ ಸ್ಪರ್ಧಿಸದ ಕಾಂಗ್ರೆಸ್‌ನ ರಾಹುಲ್‌ಗಾಂಧಿ ಅವರು ಬಿಜೆಪಿ 150ರಿಂದ 180 ಸ್ಥಾನಗಳಿಗೆ ಕುಸಿಯುತ್ತದೆ ಎಂದು ಹೇಳುವುದು ಹಾಸ್ಯಾಸ್ಪದ. ಡಿಎಂಕೆ, ಟಿಎಂಸಿ ಸೇರಿದಂತೆ ಐಎನ್‌ಡಿಎ ಮೈತ್ರಿಕೂಟದಲ್ಲಿ ಕೇವಲ 10 ಕ್ಷೇತ್ರಕ್ಕೆ ಸ್ಪರ್ಧಿಸುವ ಪಕ್ಷದ ನಾಯಕರೂ ತಾವೇ ಪ್ರಧಾನಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ದೇಶದಲ್ಲಿ ಬಿಜೆಪಿ ಒಂದೇ 400ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪಕ್ಷ ಎನಿಸಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕಾನೂನು ಸುವ್ಯವಸ್ಥೆ ಕುಸಿಯುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಬಾಂಬ್ ಹಾಕುವವರಿಗೆ, ಕಾನೂನು ಕೈಗೆತ್ತಿಕೊಳ್ಳುವವರಿಗೆ ಸ್ವರ್ಗವಿದ್ದಂತೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ದೊಡ್ಡ ದುರಂತ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.