ಮಡಿಕೇರಿ: ‘ಭೂಮಿ ಮಾರಾಟಕ್ಕೆ ಅನುಮತಿಗಾಗಿ ಕಳೆದ 5 ವರ್ಷಗಳಿಂದಲೂ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದೇನೆ’ ಎಂದು ರೈತ ತಿಮ್ಮಪ್ಪ ರೈ ಅಳಲು ತೋಡಿಕೊಂಡರು.
‘2008ರಲ್ಲಿ ಸರ್ಕಾರದಿಂದ ನಾಕೂರು ಗ್ರಾಮದಲ್ಲಿ 72 ಸೆಂಟ್ ಜಾಗ ಮಂಜೂರಾಗಿತ್ತು. ನಿಯಮಗಳ ಪ್ರಕಾರ 25 ವರ್ಷಗಳ ಕಾಲ ಭೂಮಿ ಮಾರಾಟ ಮಾಡುವಂತಿಲ್ಲ. ಆದರೆ, ಜಿಲ್ಲಾಧಿಕಾರಿ ಅವರ ಅನುಮತಿ ಮೇರೆಗೆ ಮಾರಾಟ ಮಾಡಲು ಅವಕಾಶ ಇದೆ. ಇದಕ್ಕಾಗಿ ಕಳೆದ 5 ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಕಂದಾಯ ಇಲಾಖೆಯ ಕೆಳಹಂತದ ಸಿಬ್ಬಂದಿ ಸುಮ್ಮನೇ ಸತಾಯಿಸುತ್ತಿದ್ದಾರೆ’ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸೋಮವಾರಪೇಟೆ ರೈತ ಸಂಘದ ಸಂಚಾಲಕ ಕೆ.ಎಂ.ಲಕ್ಷ್ಮಣ ಮಾತನಾಡಿ, ‘ತಿಮ್ಮಪ್ಪ ರೈ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಅನಿವಾರ್ಯವಾಗಿ ಭೂಮಿ ಮಾರಾಟ ಮಾಡಬೇಕಿದೆ. ಇನ್ನಾದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ಹೇಳಿದರು.
ನಿಯಮಾವಳಿಗಳಲ್ಲಿ ಅವಕಾಶ ಇದ್ದರೂ ಅನಗತ್ಯವಾಗಿ ಸತಾಯಿಸುವ ಹಾಗೂ ಸಾರ್ವಜನಿಕರಿಗೆ ಸ್ಪಂದಿಸದ ಇಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತ ಎ.ಎಂ.ಜಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.