ADVERTISEMENT

ನಾಪೋಕ್ಲು: ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 13:44 IST
Last Updated 21 ನವೆಂಬರ್ 2024, 13:44 IST
ಮಡಿಕೇರಿಯ ರಾಧಾ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಪೋಕ್ಲು ಸಮೀಪದ ನೇತಾಜಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು
ಮಡಿಕೇರಿಯ ರಾಧಾ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಪೋಕ್ಲು ಸಮೀಪದ ನೇತಾಜಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು   

ನಾಪೋಕ್ಲು: ಕೆಲವರು ವೃತ್ತಿಪರರು. ಮತ್ತೆ ಕೆಲವರು ಕೃಷಿಕರು. ಇನ್ನು ಕೆಲವರು ವಿದೇಶದಲ್ಲಿ ಜೀವನ ಸಾಗಿಸಿದವರು. ವೃತ್ತಿಜೀವನ, ಸಾಮಾಜಿಕ ಜೀವನದಲ್ಲಿ ಮಾಗಿದ ಹಲವರು ಒಗ್ಗೂಡಿ ಒಂದು ಸುಂದರ ಸಮಾರಂಭ ರೂಪಿಸಿದರು. ಅದುವೇ  ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ.

ಮಡಿಕೇರಿಯ ರಾಧಾ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 62ರ ಆಸುಪಾಸಿನ ಹರೆಯದವರು 42 ವರ್ಷಗಳ ಹಿಂದೆ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಗುಂಪು ಅದಾಗಿತ್ತು.

1982ರಲ್ಲಿ ಬಲ್ಲಮಾವಟಿಯ ನೆಲಜಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಹರಿದು ಹಂಚಿ ಹೋಗಿದ್ದವರು ಮತ್ತೆ ಒಗ್ಗೂಡಿದರು. ವಾಟ್ಸಪ್ ಗುಂಪು ರಚಿಸಿಕೊಂಡು ದೂರವಾಗಿದ್ದವರು ಹತ್ತಿರವಾದರು. ಎಡಿಕೇರಿ ರಾಧಾ ಎಲ್ಲರನ್ನು ಒಗ್ಗೂಡಿಸಿದ ಕೀರ್ತಿಗೆ ಪಾತ್ರರಾದರು.

ADVERTISEMENT

ಎಲ್ಲರೂ ಒಗ್ಗೂಡಿ ಸಂತಸ ಹಂಚಿಕೊಂಡ ಕಾರ್ಯಕ್ರಮ ಸ್ನೇಹ ಸಮ್ಮಿಲನದಲ್ಲಿ 44 ವರ್ಷಗಳ ಜೀವನ ಗಾಥೆಯನ್ನು ಹಲವರು ಹಂಚಿಕೊಂಡರು. ಉನ್ನತ ಶಿಕ್ಷಣ, ಉದ್ಯೋಗ, ಕೌಟುಂಬಿಕ ಜೀವನ, ಹಳೆಯ ಘಟನೆಗಳು, ಬದುಕಿನ ಏಳುಬೀಳುಗಳು ಎಲ್ಲವೂ ವೇದಿಕೆಯಲ್ಲಿ ವಿಚಾರ ವಿನಿಮಯಕ್ಕೊಳಪಟ್ಟವು.

ಹಿಂದೆ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿದರು. ಓದಿದ ಶಾಲೆಯ ಅಭಿವೃದ್ಧಿಗೆ ಉತ್ತಮ ಯೋಜನೆ ರೂಪಿಸೋಣ ಎಂಬ ಅಭಿಪ್ರಾಯಗಳೂ ಕೇಳಿಬಂದವು. ಈ ಕಾರ್ಯಕ್ರಮ ಹಲವರಿಗೆ ಒಂದು ಅಪರೂಪದ ಕ್ಷಣವಾಗಿತ್ತು.

ಬಳಿಕ ಮಾತನಾಡಿದ ಗುಂಪಿನ ಸದಸ್ಯರು ಬಹಳ ಅಪರೂಪವಾದ ಕಾರ್ಯಕ್ರಮವಿದು. ಜೀವನ ತೃಪ್ತಿ ನೀಡಿದೆ. ಸಾರ್ಥಕ ಕ್ಷಣಗಳನ್ನು ಅನುಭವಿಸಿದ್ದೇವೆ. ಇದಕ್ಕೆಲ್ಲಾ ಪ್ರೌಢಶಾಲಾ ಹಂತದಲ್ಲಿ ಮಾರ್ಗದರ್ಶನ ಮಾಡಿದ ಶಿಕ್ಷಕರೇ ಕಾರಣ ಎಂದರು.

ಮನರಂಜನ ಕ್ರೀಡಾ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.