ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶಿಶು ಮರಣ ದರ ರಾಜ್ಯದ ಸೂಚ್ಯಂಕ ಕ್ಕಿಂತಲೂ ಶೇ 50ಕ್ಕೂ ಅಧಿಕ ಕಡಿಮೆ ಇದೆ. ಇದರಿಂದ ಇಲ್ಲಿ ಜನಿಸುವ ಮಕ್ಕಳು ಸುರಕ್ಷಿತ ಎಂಬ ಕಾರಣಕ್ಕೆ ಹೊರ ಜಿಲ್ಲೆಗಳಿಗಿಂದಲೂ ಗರ್ಭಿಣಿಯರು ಇಲ್ಲಿಗೆ ಬಂದು ದಾಖಲಾಗುತ್ತಿದ್ದಾರೆ. ಆದರೂ, ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದರೆ, ಶಿಶು ಮರಣದರವನ್ನು ಇನ್ನಷ್ಟು ತಗ್ಗಿಸುವ ಎಲ್ಲ ಅವಕಾಶಗಳೂ ಇವೆ.
ರಾಜ್ಯದಲ್ಲಿ ಪ್ರತಿ ಸಾವಿರ ಮಕ್ಕಳು ಜನಿಸಿದರೆ 19 ಶಿಶುಗಳು ಮರಣ ಹೊಂದುತ್ತಿದ್ದರೆ, ಕೊಡಗಿನಲ್ಲಿ ಇದರ ಪ್ರಮಾಣ ಕೇವಲ 9 ಮಾತ್ರ. ಕಳೆದ ವರ್ಷ ಇದರ ಪ್ರಮಾಣ ರಾಜ್ಯದಲ್ಲಿ 24 ಇತ್ತು. ಆಗ ಜಿಲ್ಲೆಯಲ್ಲಿ 7.42 ಇತ್ತು. ಕಳೆದ ವರ್ಷದ ಅಂಕಿ ಅಂಶಕ್ಕೆ ಹೋಲಿಸಿದರೆ ಈ ವರ್ಷ ಶಿಶುಮರಣ ದರ ರಾಜ್ಯದಲ್ಲಿ ಕಡಿಮೆಯಾಗಿದ್ದರೆ, ಜಿಲ್ಲೆಯಲ್ಲಿ ತುಸು ಹೆಚ್ಚಾಗಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 48 ನವಜಾತ ಶಿಶುಗಳು ಮರಣ ಹೊಂದಿ ದ್ದರೆ, ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯಕ್ಕೆ 23 ಶಿಶುಗಳು ಮೃತಪಟ್ಟಿವೆ. ಇವುಗಳಲ್ಲಿ 13 ಸಾವನ್ನು ತಡೆಗಟ್ಟಬಹುದಿತ್ತು ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳೇ ಹೇಳುತ್ತಿವೆ.
ಈ ಸಾವುಗಳಲ್ಲಿ ಶೇ 50ಕ್ಕೂ ಅಧಿಕ ದಕ್ಷಿಣ ಕೊಡಗಿನಲ್ಲೇ ಸಂಭವಿಸುತ್ತಿವೆ. ಇದಕ್ಕೆ ಜನರಲ್ಲಿ ಇರುವ ಅಜ್ಞಾನ, ಮೂಢನಂಬಿಕೆ ಹಾಗೂ ತಾಲ್ಲೂಕು, ಹೋಬಳಿಗಳಲ್ಲಿ ಮಕ್ಕಳ ತಜ್ಞರ ಕೊರತೆ ಬಹುಮುಖ್ಯ ಕಾರಣ ಎನಿಸಿವೆ.
ಜಿಲ್ಲೆಯಲ್ಲಿರುವ 7 ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ 6 ಕೇಂದ್ರಗಳಲ್ಲಿ ಮಾತ್ರವಲ್ಲ ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲೂ ಮಕ್ಕಳ ತಜ್ಞ ವೈದ್ಯರಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಮಕ್ಕಳ ತಜ್ಞರಿದ್ದರೂ, ದೂರದ ಊರುಗಳಿಂದ ಗಂಭೀರವಾಸ್ಥೆ ತಲುಪಿದ ಮಕ್ಕಳನ್ನು ಕರೆದುಕೊಂಡು ಬರುವಷ್ಟರಲ್ಲಿ ಅವರು ಮೃತಪಡುತ್ತಿರುವುದು ಕಂಡು ಬರುತ್ತಿದೆ.
ಮುಖ್ಯವಾಗಿ, ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಜನರಲ್ಲಿ ಮೂಢನಂಬಿಕೆ ಹೆಚ್ಚಿದ್ದು, 6 ತಿಂಗಳ ಒಳಗಿನ ಶಿಶುಗಳು ಎದೆಹಾಲು ಕುಡಿಯುತ್ತಿಲ್ಲ ಎಂಬ ಕಾರಣಕ್ಕೆ ನಾಟಿ ಔಷಧ ಕುಡಿಸಲಾಗುತ್ತಿದೆ. ಈ ಮಕ್ಕಳಲ್ಲಿ ಮೊದಲ 6 ತಿಂಗಳಲ್ಲಿ ಸೊಪ್ಪಿನ ರಸವನ್ನು ಜೀರ್ಣಿಸಿಕೊಳ್ಳುವಷ್ಟು ಶಕ್ತಿ ಇರುವುದಿಲ್ಲ. ಆಗ ಸಹಜವಾಗಿ ವಾಂತಿಯಾಗುತ್ತದೆ. ಕೆಲವೊಮ್ಮೆ ಈ ವಾಂತಿ ಶ್ವಾಸಕೋಶಕ್ಕೆ ಸೇರಿ ಉಸಿರುಗಟ್ಟಿ ಶಿಶುಗಳು ಮೃತಪಡುತ್ತಿವೆ. ಇದರ ವಿರುದ್ಧ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ಮೂಲಕ ಎಷ್ಟೇ ಜಾಗೃತಿ ಮೂಡಿಸಿದರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ.
ಜೊತೆಗೆ, ಈ ಭಾಗದ ಗರ್ಭಿಣಿಯರಲ್ಲಿ ಕೆಲವರು ಮದ್ಯ ಸೇವಿಸುತ್ತಾರೆ. ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಉಚಿತವಾಗಿ ನೀಡಿದರೂ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಅವಧಿಪೂರ್ವ ಹೆರಿಗೆ ಯಾಗುವುದು, ನಿರ್ಜೀವ ಮಗು ಜನಿಸುವುದು ಹೆಚ್ಚುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಗ್ರಾಮ ಪಂಚಾಯಿತಿಗಳು ಹಾಗೂ ಇನ್ನಿತರ ಸಂಘ, ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಿದರೆ, ಜಿಲ್ಲೆಯಲ್ಲಿರುವ ಎಲ್ಲ ಖಾಲಿ ಇರುವ ಮಕ್ಕಳ ತಜ್ಞರು ಹಾಗೂ ಸ್ತ್ರೀರೋಗ ತಜ್ಞರ ಹುದ್ದೆಗಳನ್ನು ಭರ್ತಿ ಮಾಡಿದರೆ ಖಂಡಿತವಾಗಿಯೂ ಶಿಶು ಮರಣದರವನ್ನು ಇನ್ನಷ್ಟು ತಗ್ಗಿಸಬಹುದಾಗಿದೆ.
ಶಿಶುಗಳಿಗಾಗಿಯೇ ಇದೆ 20 ಬೆಡ್‌ಗಳು
ಮಡಿಕೇರಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಿಶುಗಳಿಗಾಗಿಯೇ ಎಂದು 20 ಬೆಡ್‌ಗಳು ಮೀಸಲಿವೆ. ಇಲ್ಲಿ 7 ಮಕ್ಕಳ ತಜ್ಞರು ಇದ್ದರೂ, ಇನ್ನೂ ಇಬ್ಬರು ಸಹಾಯಕ ಪ್ರಾಧ್ಯಾಪಕರು ಹಾಗೂ ಮೂವರು ಹಿರಿಯ ಸ್ಥಾನಿಕ ವೈದ್ಯರ ಕೊರತೆ ಇದೆ.
ಹಾಗೆಯೇ, ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ತೀವ್ರ ನಿಗಾ ಘಟಕ ಸೇರಿದಂತೆ 200 ಬೆಡ್‌ಗಳಿವೆ. ಇಲ್ಲಿ ನಿತ್ಯ 150ಕ್ಕೂ ಅಧಿಕ ಮಹಿಳೆಯರು ಆರೋಗ್ಯ ತಪಾಸಣೆಗೆ ಕೊಡಗು ಮಾತ್ರವಲ್ಲ ಮೈಸೂರಿನ ಪಿರಿಯಾಪಟ್ಟಣ, ಹುಣಸೂರು, ಹಾಸನದ ಸಕಲೇಶಪುರ, ಕೊಣನೂರು, ಅರಕಲಗೂಡು ತಾಲ್ಲೂಕುಗಳಿಂದಲೂ ಬರುತ್ತಾರೆ. ಆದರೆ, ಶೇ 50ಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ರೇಡಿಯೊಲಜಿಸ್ಟ್‌ಗಳ ಕೊರತೆಯಿಂದ ಸ್ಕ್ಯಾನಿಂಗ್ ಮಾಡಿಸುವುದೇ ತೀರಾ ಕಷ್ಟಕರವಾದ ಸ್ಥಿತಿ ಆಸ್ಪತ್ರೆಯಲ್ಲಿದ್ದು, ತುರ್ತಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.
ರಾಜ್ಯಕ್ಕೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಶಿಶು ಮರಣ ದರ ತೀರಾ ಕಡಿಮೆ ಇದೆ. ಜನರು ಮೂಢನಂಬಿಕೆ ಬಿಡಬೇಕು. ಮೊದಲ 6 ತಿಂಗಳಿನಲ್ಲಿ ಮಕ್ಕಳಿಗೆ ಎದೆಹಾಲನ್ನು ಮಾತ್ರ ನೀಡಬೇಕು–ಡಾ.ಕೆ.ಎಂ. ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ
ನಾಟಿ ಔಷಧಿ ಕುಡಿಸಿ, ಮಗುವಿನ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ ನಂತರ ಬಹಳ ತಡವಾಗಿ ಶಿಶುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದು ಸವಾಲಿನ ಸಂಗತಿ ಎನಿಸಿದೆ– ಡಾ.ಪುರುಷೋತ್ತಮ್, ಶಿಶುವೈದ್ಯಶಾಸ್ತ್ರ ಭಾಗದ ಮುಖ್ಯಸ್ಥ.
ಪ್ರತಿ ಶಿಶುವಿನ ಮರಣವೂ ಗಂಭೀರವಾಗಿ ಪರಿಗಣನೆ’
‘ಪ್ರತಿ ಶಿಶುವಿನ ಮರಣವನ್ನೂ ಗಂಭೀರವಾಗಿ ಪರಿಗಣಿಸಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಜೊತೆಗೆ, ಪ್ರತಿ ತಿಂಗಳೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ತಪ್ಪಿಸಬಹುದಾದ ಶಿಶು ಮರಣದ ಕುರಿತು ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಮಧುಸೂದನ ‘ಪ್ರಜಾವಾಣಿ’ಗೆ ತಿಳಿಸಿದರು.
ಮೊದಲ 6 ತಿಂಗಳ ಒಳಗೆ ಶಿಶುಗಳಿಗೆ ಯಾವುದೇ ಕಾರಣಕ್ಕೂ ಎದೆಹಾಲು ಬಿಟ್ಟು ಬೇರೆ ಆಹಾರ ಹಾಗೂ ಪಾನೀಯಗಳನ್ನು ನೀಡಲೇಬಾರದು. ಆರೋಗ್ಯ ಕೆಟ್ಟರೆ ನೇರವಾಗಿ ವೈದ್ಯರನ್ನು ಸಂಪರ್ಕಿಸಿ ಔಷಧ ಪಡೆದುಕೊಳ್ಳಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.