ADVERTISEMENT

ಸೋಮೇಶ್ವರ ದೇವಾಲಯಕ್ಕೆ ಅಮೃತ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 4:38 IST
Last Updated 22 ಜೂನ್ 2024, 4:38 IST
ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯ.
ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯ.   

ಸೋಮವಾರಪೇಟೆ: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯಕ್ಕೆ 75ನೇ ಸಂವತ್ಸರದ ತುಂಬಿದ ಹಿನ್ನೆಲೆಯಲ್ಲಿ ಸಡಗರ ಸಂಭ್ರಮದಿಂದ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ.

ದೇವಾಲಯಕ್ಕೆ ತನ್ನದೇ ಆದ ಇತಿಹಾಸ ಇದ್ದು, 1943ರಲ್ಲಿ ಶೃಂಗೇರಿಯ ಧರ್ಮಾಧಿಕಾರಿ ಕಳಿಲೆ ಶೇಷಶಾಸ್ತ್ರಿಗಳು ಚಾತುರ್ಮಾಸದ ಪೂಜೆಯನ್ನು ಒಂದು ತಿಂಗಳ ಕಾಲ ನಡೆಸಲು ಇಲ್ಲಿಗೆ ಬಂದಿದ್ದರು. ಅವರಿಗೆ ಇಲ್ಲಿ ಶಿವಾಲಯವಿಲ್ಲದ ಕೊರತೆ ಬೇಸರ ತಂದಿತು. ಸ್ಥಳೀಯ ನಿವಾಸಿ ಚಂದ್ರಶೇಖರಯ್ಯ ಅವರಲ್ಲಿ ವಿಷಯ ಪ್ರಸ್ತಾಪಿಸಿ ದೇವಾಲಯ ನಿರ್ಮಾಣವಾದರೆ ತಾವೂ ಅಲ್ಪ ಸ್ವಲ್ಪ ಸಹಾಯ ಮಾಡುವುದಾಗಿ ಹೇಳಿದ್ದರು. ಈ ಸಂದರ್ಭ ದೊಡ್ಡ ಮನೆಯ ದಿವಂಗತ ಡಿ.ಸಾಕಮ್ಮ ಅವರು ತಮ್ಮ ಸ್ವಂತ ಜಾಗವನ್ನು ದೇವಾಲಯ ನಿರ್ಮಾಣಕ್ಕೆ ಬಿಟ್ಟುಕೊಟ್ಟರಲ್ಲದೆ ಧನ ಸಹಾಯವನ್ನು ಮಾಡಿದರು.

ಈ ಪ್ರೋತ್ಸಾಹದಿಂದ ಉತ್ತೇಜನ ದೊರಕಿ ದೇವಾಲಯ ಸಮಿತಿ ರಚನೆ. ಸುತ್ತಮುತ್ತಲ ಜನರಿಂದ ವಂತಿಗೆ ಸ್ವೀಕಾರ, ದೇವಸ್ಥಾನದ ನೀಲನಕ್ಷೆ ತಯಾರಿಕೆ ಮುಂತಾದ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿ ಕಾರ್ಯೋನ್ಮುಖರಾದವರು ದೊಡ್ಡ ಮನೆಗೆ ಸೇರಿದ ಗೋವಿಂದಪ್ಪನವರು. ದೇವಾಲಯದ ಸಮಿತಿಯಲ್ಲಿ ಡಿ.ಸಾಕಮ್ಮ ಅವರ ಪುತ್ರ ಡಿ.ಸಿದ್ದಣ್ಣ ಅಧ್ಯಕ್ಷರಾಗಿ ಕೆ.ಚಂದ್ರಶೇಖರಯ್ಯ ಗೌರವ ಕಾರ್ಯದರ್ಶಿಗಳಾಗಿ, ಇತರ ಪ್ರಮುಖರು ಸದಸ್ಯರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಎಲ್ಲರ ಸಹಕಾರದಿಂದ ದೇವಾಲಯದ ನಿರ್ಮಾಣ ಕಾರ್ಯ 1949ರಲ್ಲಿ ಪೂರ್ಣಗೊಂಡಿತು.

ADVERTISEMENT

ಶೃಂಗೇರಿಯ ಹಿರಿಯ ಸ್ವಾಮೀಜಿಗಳಾಗಿದ್ದ ನರಸಿಂಹ ಭಾರತಿ ಅವರಿಗೆ ಒಮ್ಮೆ ತುಂಗಾನದಿಯಲ್ಲಿ ಎರಡು ಶಿವಲಿಂಗ ದೊರೆಯಿತಂತೆ. ಅದರಲ್ಲಿ ಒಂದನ್ನು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕೊಟ್ಟು ಇನ್ನೊಂದನ್ನು ಸೋಮವಾರಪೇಟೆಯ ಸೋಮೇಶ್ವರ ದೇವಾಲಯಕ್ಕೆ ನೀಡಿರುವುದಾಗಿ ತಿಳಿದುಬಂದಿದೆ. ಶೃಂಗೇರಿಯಿಂದ ಬಂದ ಋತ್ವಿಜರಿಂದಲೇ ಪ್ರತಿಷ್ಠಾಪನಾ ಕಾರ್ಯ ಸಾಂಗವಾಗಿ ನೆರವೇರಿತು. ಸೋಮೇಶ್ವರ ದೇವಾಲಯವು ಅಲ್ಲಿರುವ ಶಿವಲಿಂಗದ ಜೊತೆಗೆ ಕುಂಭಕೋಣಂನ ಶಿಲ್ಪಿ ಹಾಗೂ ಮೈಸೂರಿನ ಶಿಲ್ಪಿ ಸಿದ್ಧಲಿಂಗ ಸ್ವಾಮಿಗಳಿಂದ ತಯಾರಾದ ಗಣಪತಿ, ಪಾರ್ವತಿ, ನಂದಿ ಹಾಗೂ ನವಗ್ರಹ ವಿಗ್ರಹಗಳಿಂದ ಕಂಗೊಳಿಸುತ್ತಿದೆ. ಶಿವಲಿಂಗವು ಸೋಮವಾರಪೇಟೆಯಲ್ಲಿರುವ ಕಾರಣ ಸೋಮೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತಿದೆ.

75ನೇ ವರ್ಷಾಚರಣೆ ಪ್ರಯುಕ್ತ ಸೋಮೇಶ್ವರ ದೇವಾಲಯದಲ್ಲಿ ಜೂನ್ 22ರಿಂದ 24ರವರೆಗೆ ದೇವಾಲಯದಲ್ಲಿ ನವದುರ್ಗಾ ಚಂಡಿಕಾ ಹೋಮ, ಏಕಾದಶ ರುದ್ರಹೋಮ ಸೇರಿದಂತೆ ಇನ್ನಿತರ ಪೂಜೆಗಳು ನಡೆಯಲಿವೆ.

ದೇವಾಲಯ ಸಮಿತಿ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜ, ದೇವಿ ಬಳಗ, ಮಾತಾ ಬಳಗದ ಸಹಕಾರದೊಂದಿಗೆ ವೇದ ಬ್ರಹ್ಮ ಎಂ.ವಿ. ಕೃಷ್ಣಮೂರ್ತಿ ಘನಪಾಠಿಗಳು ಮತ್ತು ಚಿತ್ರಕುಮಾರ್ ಭಟ್ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಜೂನ್‌ 22ರಂದು ಶುದ್ಧಿ ಪುಣ್ಯಃ, ಶ್ರೀಗಣಪತಿ ಪೂಜೆ, ಮಹಾ ಸಂಕಲ್ಪ, ಕಲಶಾರಾಧನೆ, ನವದುರ್ಗಾ ಚಂಡಿಕಾ ಪಾರಾಯಣ, ಮಂಡಲ ಆರಾಧನೆ ನಡೆಯಲಿದೆ.

23ರಂದು ಬೆಳಿಗ್ಗೆ 8ರಿಂದ ನವ ದುರ್ಗಾ ಚಂಡಿಕಾ ಹೋಮ, ಕನ್ನಿಕಾ ಪೂಜೆ, ನವ ಮುತ್ತೈದೆಯರ ಬಾಗಿನ ಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ದೀಪ ದುರ್ಗಾ ದೀಪ ನಮಸ್ಕಾರ ಪೂಜೆ ನಡೆಯಲಿದೆ.

24ರಂದು ಬೆಳಿಗ್ಗೆ 7ರಿಂದ ಸೋಮೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾರಾಧನೆ, ಶತರುದ್ರಾಭಿಷೇಕ, ಏಕಾದಶ ರುದ್ರಹೋಮ, ಮಧ್ಯಾಹ್ನ ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ಕ್ಕೆ ಅಮೃತ ಮಹೋತ್ಸವ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.

ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯದ ಎದುರು ನಿರ್ಮಿಸಿರು ಆಕರ್ಷಕವಾದ ಈಶ್ವರ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.