ಮಡಿಕೇರಿ: 16 ಗಂಟೆ ಅವಧಿಯ ಶಾಸ್ತ್ರೀಯ ನೃತ್ಯ, ನೀರಿನ ಮೇಲೆ ತೇಲುತ್ತಾ ತೆಪ್ಪದಲ್ಲಿ ನೃತ್ಯ... ಹೀಗೆ ಎಳೆಯ ವಯಸ್ಸಿನಲ್ಲೇ ಅಸಾಧಾರಣ ಸಾಧನೆ ಮಾಡಿದ ಬಾಲಕಿ ಪೊನ್ನಂಪೇಟೆಯ ಟಿ.ಎಚ್.ತನಿಷ್ಕಾ.
ಈಕೆ 5ನೇ ತರಗತಿಯ ವಿದ್ಯಾರ್ಥಿನಿಯಾಗಿರುವಾಗಲೇ ಜಿಲ್ಲಾಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ‍್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದು ವಿಶೇಷ.
ಪೊನ್ನಂಪೇಟೆಯ ಪಿ.ಎ.ಮಿನಿ ಹಾಗೂ ಟಿ.ಎಸ್.ಹರೀಶ್ ದಂಪತಿಯ ಪುತ್ರಿಯಾದ ಈಕೆ ತನ್ನ ಮೂರೂವರೆ ವರ್ಷದಿಂದಲೇ ನೃತ್ಯ ಗುರು ಪ್ರೇಕ್ಷಾ ಭಟ್ ಅವರ ಬಳಿ ನೃತ್ಯ ಕಲಿಯಲು ಆರಂಭಿಸಿ, ಈಗಾಗಲೇ ಮಂತ್ರಾಲಯ, ಕೇರಳದ ಕಣ್ಣೂರು, ಮೈಸೂರು, ತಮಿಳುನಾಡಿನ ವೆಲ್ಲೂರು, ಬೆಂಗಳೂರು, ಧರ್ಮಸ್ಥಳ ಸೇರಿದಂತೆ ಅನೇಕ ಕಡೆ ಏಕವ್ಯಕ್ತಿ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದಾಳೆ.
2021ರಲ್ಲಿ ಚನ್ನರಾಯಪಟ್ಟಣದಲ್ಲಿ ನಡೆದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಸಂಘಟಿಸಿದ್ದ ಸ್ಪರ್ಧೆಯಲ್ಲಿ 16 ಗಂಟೆಗಳ ಶಾಸ್ತ್ರೀಯ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಮಾತ್ರವಲ್ಲ, 2022ರಲ್ಲಿ ಕಾವೇರಿ ಪುಷ್ಕರಣಿಯ ಮೇಲೆ ತೆಪ್ಪದಲ್ಲಿ ನೃತ್ಯ ಮಾಡುವ ಮೂಲಕ ‘ಕರ್ನಾಟಕ ಬುಕ್ ಆಫ್ ರೆಕಾರ್ಡ್’ಗೆ ಸೇರ್ಪಡೆಯಾಗಿದ್ದಾಳೆ.
ಸದ್ಯ, ಪೊನ್ನಂಪೇಟೆಯ ಸಂತ ಅಂಥೋಣಿ ವಿದ್ಯಾಸಂಸ್ಥೆಯಲ್ಲಿ 5ನೇ ತರಗತಿ ಕಲಿಯುತ್ತಿರುವ ಈಕೆ ಛದ್ಮವೇಷದಲ್ಲೂ, ಪ್ರತಿಭಾ ಕಾರಂಜಿಯಲ್ಲೂ ಮುಂಚೂಣಿಯಲ್ಲಿದ್ದಾಳೆ.
ಈಗಾಗಲೇ ಇಂಡಿಯನ್ ಎಕ್ಸಲೆನ್ಸ್ ಅವಾರ್ಡ್, ನಾಟ್ಯ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿ, ಮಂಜುನಾಥ ಪ್ರಶಸ್ತಿ, ನಾಟ್ಯ ಸಿಂಧೂರ ಪ್ರಶಸ್ತಿ, ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ಸೇರಿದಂತೆ 10ಕ್ಕೂ ಅಧಿಕ ಪ್ರಶಸ್ತಿಗಳು ಈಕೆಗೆ ಲಭಿಸಿವೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೂ ಈಕೆ ಆಯ್ಕೆಯಾಗಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.