ADVERTISEMENT

ವಿರಾಜಪೇಟೆ: ವಿ.ಬಾಡಗ ಶಾಲೆಗೆ 'ಆದರ್ಶ ಶೈಕ್ಷಣಿಕ ಸಂಸ್ಥೆ' ಪ್ರಶಸ್ತಿ

ಹಲವು ಹೊಸತುಗಳ ಮೂಲಕ ಗಮನ ಸೆಳೆದಿರುವ ಶತಮಾನ ಕಂಡ ಶಾಲೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 6:56 IST
Last Updated 2 ನವೆಂಬರ್ 2024, 6:56 IST
 ದಾನಿಗಳಿಂದ ನಿರ್ಮಾಣಗೊಂಡಿರುವ ಶಾಲೆಯ ಪಾರ್ಕ್
 ದಾನಿಗಳಿಂದ ನಿರ್ಮಾಣಗೊಂಡಿರುವ ಶಾಲೆಯ ಪಾರ್ಕ್   

ವಿರಾಜಪೇಟೆ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಇಂತಹವರ ನಡುವೆ ಜಿಲ್ಲೆಯ ಗ್ರಾಮವೊಂದರಲ್ಲಿನ ಸರ್ಕಾರಿ ಶಾಲೆಯೊಂದು ರಾಜ್ಯಮಟ್ಟದ ‘ಆದರ್ಶ ಶೈಕ್ಷಣಿಕ ಸಂಸ್ಥೆ’ ಪ್ರಶಸ್ತಿ ಪಡೆದು ಜಿಲ್ಲೆ ಹಾಗೂ ಸರ್ಕಾರಿ ಶಾಲೆಗಳಿಗೆ ಹೆಮ್ಮೆ ಮೂಡಿಸಿದೆ.

ಬಹುತೇಕ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸಮೀಪದ ವಿ.ಬಾಡಗ ಗ್ರಾಮದಲ್ಲಿನ ಶತಮಾನದ ಇತಿಹಾಸವನ್ನು ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘವು ನೀಡುವ 2024-25ನೇ ಸಾಲಿನ ‘ಆದರ್ಶ ಶೈಕ್ಷಣಿಕ ಸಂಸ್ಥೆ’ ಪ್ರಶಸ್ತಿಗೆ ಪಾತ್ರವಾದ ಶಾಲೆ. ಬೆಂಗಳೂರಿನ ಕೊಂಡಜ್ಜಿ ಭವನ ಸಭಾಂಗಣದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಕೆ.ಸಿ.ಗೀತಾಂಜಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

1914-15ನೇ ಸಾಲಿನಲ್ಲಿ ಸ್ಥಾಪನೆಯಾದ ಶಾಲೆಯು ಗ್ರಾಮಸ್ಥರ ಸಹಕಾರದಿಂದ 110 ವರ್ಷಗಳನ್ನು ಪೂರೈಸಿ, ಗ್ರಾಮದ ಸಾಕಷ್ಟು ಮಂದಿಯ ಬಾಳಿಗೆ ಬೆಳಕಾಗಿದೆ. ಪ್ರಸಕ್ತ ಸಾಲಿನಲ್ಲಿ 47 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾರಿಗೆ ಸಮಸ್ಯೆಯ ನಡುವೆ ಮುನ್ನಡೆಯುತ್ತಿರುವ ಶಾಲೆಯನ್ನು ಉಳಿಸಿಕೊಳ್ಳಲು ಹಳೆಯ ವಿದ್ಯಾರ್ಥಿಗಳ ಸಂಘ, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಎಸ್.ಡಿ.ಎಂ.ಸಿ ಮತ್ತು ಶಾಲಾ ಶಿಕ್ಷಕರು ಪ್ರಯತ್ನ ನಡೆಸುತ್ತಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ತಮ್ಮ ಖಾಸಗಿ ವಾಹನಗಳಲ್ಲೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಡುವ ಮೂಲಕ ಸಾರಿಗೆ ಬವಣೆಯನ್ನು ನೀಗುವ ಯತ್ನ ನಡೆಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.

ADVERTISEMENT

ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿರುವುದನ್ನು ತಪ್ಪಿಸಲು ಶಾಲಾ ಶಿಕ್ಷಕರು ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಹಾಜರಾತಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕಳೆದ ಒಂದು ಸಾಲಿನಿಂದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ. ಜತೆಗೆ, ದಾನಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಂದ ಶಾಲಾ ಅಗತ್ಯದ ಹಲವು ವಸ್ತುಗಳು ಮತ್ತು ಅಗತ್ಯ ಸಹಾಯವನ್ನು ಶಾಲೆಗೆ ಒದಗಿಸುತ್ತಿದ್ದಾರೆ.

ಪಠ್ಯಪುಸ್ತಕ, ನೋಟ್ ಬುಕ್ ಕಳೆದು ಹೋಗುವ ಕಾರಣದಿಂದ ಪುಸ್ತಕ ಸೇರಿದಂತೆ ಲೇಖನ ಸಾಮಾಗ್ರಿಗಳನ್ನು ಸಂಜೆ ಶಾಲೆಯಲ್ಲಿಯೇ ಇರಿಸಿ, ಮರುದಿನ ಬೆಳಿಗ್ಗೆ ಮತ್ತೆ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಜೋಪಾನ ಮಾಡುವ ಕಾರ್ಯದಲ್ಲಿ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ನಿತ್ಯ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಒಂದೆಡೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಂಚಿತಂಡ ಗಿಣಿ ಮೊಣ್ಣಪ್ಪ ಮತ್ತು ಸದಸ್ಯರು ಶಾಲೆಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮತ್ತೊಂದೆಡೆ, ಶಾಲೆಯ ಮುಖ್ಯಶಿಕ್ಷಕಿ ಗೀತಾಂಜಲಿ ಸೇರಿದಂತೆ ಶಿಕ್ಷಕ ವೃಂದದವರು ಸಾಥ್ ನೀಡಿದ್ದಾರೆ.

ಇದೀಗ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಅಂದಾಜು ₹ 1 ಲಕ್ಷ ವೆಚ್ಚದಲ್ಲಿ ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿಯುವ ಕ್ರಿಯಾಯೋಜನೆ ತಯಾರಾಗಿದೆ. ಶಾಸಕ ಎ.ಎಸ್. ಪೊನ್ನಣ್ಣ ಅವರು ವಿ.ಬಾಡಗ ಶಾಲೆಗೆ ಪ್ರಶಸ್ತಿ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ.
 

 ದಾನಿಗಳಿಂದ ನಿರ್ಮಾಣಗೊಂಡಿರುವ ಶಾಲೆಯ ಪಾರ್ಕ್
ಬೆಂಗಳೂರಿನ ಕೊಂಡಜ್ಜಿ ಭವನ ಸಭಾಂಗಣದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಗೀತಾಂಜಲಿ ಕೆ.ಸಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು
ಬೆಂಗಳೂರಿನ ಕೊಂಡಜ್ಜಿ ಭವನ ಸಭಾಂಗಣದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಗೀತಾಂಜಲಿ ಕೆ.ಸಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.