ADVERTISEMENT

ಕೊಡಗು: ಬಿತ್ತನೆಯತ್ತ ಚಿತ್ತ ಹರಿಸಿದ ಅನ್ನದಾತ

ಗಿರೀಶ.ಕೆ.ಎಸ್.
Published 20 ಮೇ 2024, 7:19 IST
Last Updated 20 ಮೇ 2024, 7:19 IST
ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ನಿಂದ ಹೊಲವನ್ನು ಉಳುಮೆ ಮಾಡಿದರು
ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ನಿಂದ ಹೊಲವನ್ನು ಉಳುಮೆ ಮಾಡಿದರು   

ಮಡಿಕೇರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಕೊಡಗು ಜಿಲ್ಲೆಯಲ್ಲಿ ಇದುವರೆಗೂ ಆವರಿಸಿದ್ದ ಬರ ಛಾಯೆ ಮಾಯವಾಗುವಂತೆ ಮಾಡಿದೆ. ಮುಂಗಾರು ಪೂರ್ವದಲ್ಲೇ ಮುಂಗಾರಿನಂತೆ ಮೋಡಗಳು ಆರ್ಭಟಿಸುತ್ತಿದ್ದು, ಮಳೆ ಸುರಿಸುತ್ತಿರುವುದು ರೈತರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿವೆ. ಕಳೆದ ವರ್ಷ ಜೂನ್ ತಿಂಗಳಿನಲ್ಲೂ ಈ ಪರಿಯಲ್ಲಿ ಮಳೆಯಾಗಿರಿಲಿಲ್ಲ. ವರ್ಷವಿಡೀ ಮಳೆಯ ಕೊರತೆಯನ್ನು ಕಂಡು, ಈ ವರ್ಷವೂ ಬಿರುಬೇಸಿಗೆಯನ್ನು ಅನುಭವಿಸಿ ಕಳಾಹೀನವಾಗಿದ್ದ ವಸುಂಧರೆ ಬೀಳುತ್ತಿರುವ ಮಳೆಗೆ ಅಕ್ಷರಶಃ ತಣಿಯುತ್ತಿದೆ.

ಈಗಾಗಲೇ ರೈತರು ಭೂಮಿಯನ್ನು ಹಸನು ಮಾಡಿಕೊಳ್ಳುವತ್ತ ತಮ್ಮ ಗಮನ ಹರಿಸಿದ್ದಾರೆ. ಮುಂಗಾರು ಪೂರ್ವದ ಮಳೆಗೆ ಬಿತ್ತನೆ ಮಾಡಲು ಕುಶಾಲನಗರ, ಸೋಮವಾರಪೇಟೆ ತಾಲ್ಲೂಕುಗಳ ರೈತರು ಸಿದ್ಧತೆ ನಡೆಸಿದ್ದರೆ, ಇನ್ನುಳಿದ ತಾಲ್ಲೂಕುಗಳ ರೈತರು ಮುಂಗಾರಿನಲ್ಲಿ ಭತ್ತದ ಬೆಳೆ ಬೆಳೆಯಲು ಭೂಮಿಯನ್ನು ಅಣಿಗೊಳಿಸುತ್ತಿದ್ದಾರೆ. ಉತ್ತರ ಕೊಡಗಿನಲ್ಲಿ ಎಲ್ಲಿ ನೋಡಿದರೂ ಉಳುಮೆ ಮಾಡುವ ದೃಶ್ಯಗಳು ಕಾಣುತ್ತಿವೆ. ಮಳೆ ಕೊಂಚ ಬಿಡುವು ನೀಡಿ ಇನ್ನಷ್ಟು ಬರಲಿ ಎಂಬುದು ಎಲ್ಲರ ಆಶಯವಾಗಿದೆ.

ಬರ ಎಂದು ತಣ್ಣಗೆ ಕುಳಿತಿದ್ದ ಕೃಷಿ ಇಲಾಖೆಯ ಅಧಿಕಾರಿಗಳೂ ಬೀಳುತ್ತಿರುವ ಮಳೆಗೆ ತಡಬಡಿಸಿ ಎದ್ದು ಕುಳಿತ್ತಿದ್ದಾರೆ. ಬಿತ್ತನೆ ಬೀಜಗಳಿಗಾಗಿ ಬೇಡಿಕೆ ಸಲ್ಲಿಸಿದ್ದು, ಮುಂದಿನ ವಾರದ ಹೊತ್ತಿಗೆ ಬಿತ್ತನೆ ಬೀಜ ಬರುವ ನಿರೀಕ್ಷೆ ಇದೆ. ಸಮಾಧಾನದ ಸಂಗತಿ ಎಂದರೆ ಬೇಡಿಕೆಯಷ್ಟು ರಸಗೊಬ್ಬರದ ದಾಸ್ತಾನನ್ನು ಕೃಷಿ ಇಲಾಖೆ ಇರಿಸಿಕೊಂಡಿದ್ದು, ರೈತರು ಗೊಂದಲಕ್ಕೆ ಒಳಗಾಗಬೇಕಿಲ್ಲ ಎಂಬ ವಾಗ್ದಾನ ನೀಡಿದೆ.

ADVERTISEMENT

ಜಿಲ್ಲೆಯಲ್ಲಿ ಭತ್ತಕ್ಕೆ ಹೆಚ್ಚಿನ ಬೇಡಿಕೆ ಇದೆ. 1,844 ಕ್ವಿಂಟಲ್‌ನಷ್ಟು ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಮುಸುಕಿನ ಜೋಳಕ್ಕೆ 41.47 ಕ್ವಿಂಟಲ್‌ನಷ್ಟು ಬೇಡಿಕೆ ಇದೆ. ಈ ಎಲ್ಲ ಬಿತ್ತನೆ ಬೀಜಗಳು ಸೋಮವಾರದಿಂದಲೇ ಬರಲಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಇನ್ನು ರಸಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಸಾಕಷ್ಟಿದೆ. ಒಟ್ಟು ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 80,946 ಟನ್‌ಗಳಷ್ಟು ರಸಗೊಬ್ಬರ ಬೇಕಿದೆ. ಇದರಲ್ಲಿ ಮೇ ತಿಂಗಳಿಗೆ ಸಾಕಾಗುವಷ್ಟು 12,451 ಟನ್‌ ದಾಸ್ತಾನು ಇದೆ. ಒಟ್ಟಾರೆ, 36,897 ಟನ್‌ನಷ್ಟು ರಸಗೊಬ್ಬರ ಜಿಲ್ಲೆಯಲ್ಲಿದೆ. ಎಲ್ಲೂ ರಸಗೊಬ್ಬರಗಳಿಗೆ ಕೊರತೆ ಉಂಟಾಗಿಲ್ಲ ಎಂದು ಅವರು ತಿಳಿಸುತ್ತಾರೆ.

ವಾಸ್ತವವಾಗಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗುವುದು ಜೂನ್ ಹಾಗೂ ಜುಲೈ ತಿಂಗಳಿನಲ್ಲಿ. ಈಗ ಭೂಮಿಯನ್ನು ಹದಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಹೆಚ್ಚಿನ ಬೇಡಿಕೆ ಇಲ್ಲವಾಗಿದೆ.

ಶುಂಠಿ ಬೇಸಾಯದತ್ತ ಹೆಚ್ಚಿನ ಒಲವು: ಇತ್ತೀಚಿನ ವರ್ಷಗಳಲ್ಲಿ ಭತ್ತ ಸೇರಿದಂತೆ ಯಾವುದೇ ಬಗೆಯ ಬೆಳೆಗಳನ್ನು ಬೆಳೆಯುವುದಕ್ಕೆ ಹೆಚ್ಚಿನ ರೈತರ ಒಲವು ತೋರುತ್ತಿಲ್ಲ. ಬದಲಿಗೆ, ಶುಂಠಿ ಬೇಸಾಯದತ್ತ ವಾಲಿದ್ದಾರೆ. ಕೇರಳದಿಂದ ಬರುವ ಕೃಷಿಕರಿಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡುತ್ತಾರೆ. ಶುಂಠಿಯನ್ನು ಫಲವತ್ತಾದ ಭೂಮಿಯಲ್ಲಿ ಬೆಳೆದು ಕೇರಳದವರು ಲಾಭ ಮಾಡಿಕೊಳ್ಳು‌ತ್ತಿದ್ದಾರೆ. ಈ ವಿದ್ಯಮಾನದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇದೆ.

ಈ ವರ್ಷವೂ ಈ ಪ್ರಕ್ರಿಯೆ ನಿಂತಿಲ್ಲ ಅಥವಾ ನಿಯಂತ್ರಣಕ್ಕೂ ಬಂದಿಲ್ಲ. ಕೊಡಗಿನ ಕೃಷಿ ಸಂಸ್ಕೃತಿ ನಿಧಾನವಾಗಿ ಬದಲಾಗುತ್ತಿದೆ ಎಂದು ಹಲವು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಒಟ್ಟಾರೆ ಜಿಲ್ಲೆಯಲ್ಲಿ ಶೇ 67.81ರಷ್ಟು ಪ್ರದೇಶದಲ್ಲಿ ಬಿತ್ತನೆಯೇ ನಡೆದಿರಲಿಲ್ಲ. ಕೇರಳದಲ್ಲಿ ಶುಂಠಿಗೆ ಅತ್ಯಧಿಕ ಬೇಡಿಕೆ ಇರುವುದರಿಂದ ಕೇರಳ ಭಾಗದಿಂದ ಹೆಚ್ಚಿನ ರೈತರು ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆಯಲು ಬರುತ್ತಿರುವುದು ಸಾಮಾನ್ಯವಾಗಿದೆ.

ಭತ್ತದ ಬಿತ್ತನೆಗೆ ನಡೆದಿದೆ ತಯಾರಿ: ಮುಂಗಾರು ಪೂರ್ವದಲ್ಲಿ ಬೀಳುತ್ತಿರುವ ಮಳೆ ಹಾಗೂ ಮುಂಗಾರು ಸಾಮಾನ್ಯವಾಗಿರಲಿದ್ದು, ಕೊರತೆ ಉಂಟಾಗದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ, ಭತ್ತದ ಸಸಿಮಡಿ ಮಾಡಲು ಭೂಮಿಯನ್ನು ಹದ ಮಾಡುವ ಕಾರ್ಯವು ನಾಪೋಕ್ಲು, ಮಡಿಕೇರಿ ತಾಲ್ಲೂಕು, ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು ಭಾಗಗಳಲ್ಲಿ ನಡೆದಿದೆ. ಮಳೆ ಹೀಗೆಯೇ ಮುಂದುವರಿದರೆ ಜೂನ್‌ ತಿಂಗಳಿನಲ್ಲಿ ಸಸಿಮಡಿ ಮಾಡುವ ಪ್ರಕ್ರಿಯೆ ನಡೆಯಲಿದೆ.

ಮಳೆಯ ಪ್ರಮಾಣವೂ ಹೆಚ್ಚುತ್ತಿದೆ: ಜನವರಿಯಿಂದ ಏಪ್ರಿಲ್‌ವರೆಗೂ ಜಿಲ್ಲೆಯಲ್ಲಿ ಮಳೆ ಕೊರತೆ ಇತ್ತು. ಆದರೆ, ಮೇ ತಿಂಗಳಿನಲ್ಲಿ ವಾಡಿಕೆಗಿಂತ ಶೇ 20ಕ್ಕೂ ಅಧಿಕ ಮಳೆಯಾಗಿದೆ. ಇದರಿಂದ ವಾರ್ಷಿಕ ಕೊರತೆಯ ಪ್ರಮಾಣ ತಗ್ಗಿದೆ. ಮೇ 14ರವರೆಗಿನ ಅಂಕಿಸಂಖ್ಯೆಗಳನ್ನು ಗಮನಿಸಿದರೆ ವಾರ್ಷಿಕ ಶೇ 64ರಷ್ಟು ಮಳೆ ಸುರಿದಿದೆ.

ಮಾಹಿತಿ: ಜೆ.ಸೋಮಣ್ಣ, ರಘು ಹೆಬ್ಬಾಲೆ, ಡಿ.ಪಿ.ಲೋಕೇಶ್.

ಶನಿವಾರಸಂತೆಯಲ್ಲಿ ಬಿತ್ತನೆಗಾಗಿ ಭೂಮಿಯನ್ನು ಹಸನು ಮಾಡಲಾಗಿದೆ
ಪೊನ್ನಂಪೇಟೆ ಬಳಿಯ ಕಿರುಗೂರಿನಲ್ಲಿ ಬತ್ತ ನಾಟಿ ಮಾಡಲು ಗದ್ದೆಗಳನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲಾಗುತ್ತಿರುವ ದೃಶ್ಯ ಈಚೆಗೆ ಕಂಡು ಬಂತು
ನೀಗುತ್ತಿದೆ ಮಳೆಯ ಕೊರತೆ, ಗರಿಗೆದರುತ್ತಿದೆ ಆಶಾಕಿರಣ ಕಳೆದ ವರ್ಷಕ್ಕಿಂತ ಮುಂಚಿತವಾಗಿಯೇ ನಡೆದಿದೆ ಸಿದ್ಧತಾ ಕಾರ್ಯ ಕೃಷಿ ಇಲಾಖೆಯ ಅಧಿಕಾರಿಗಳಿಂದಲೂ ನಡೆದಿದೆ ಸಿದ್ಧತೆ

ನಿರಂತರ ಮಳೆ ಕೃಷಿ ಚಟುವಟಿಕೆಗೆ ಅನುಕೂಲ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಇದರಿಂದ ರೈತರು ಕೈಗೊಂಡಿರುವ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಈಗಾಗಲೇ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಶುಂಠಿ ಜೋಳ ಕೆಸ ಸುವರ್ಣ ಗೆಡ್ಡೆ ಮತ್ತಿತರರ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಮಳೆಯಿಂದ ರೈತಾಪಿ ವರ್ಗ ಸಂತಸಗೊಂಡಿದೆ. ಕೆಲವು ಗ್ರಾಮಗಳಲ್ಲಿ ತಂಬಾಕು ಬೇಸಾಯಕ್ಕೂ ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.

-ಮಂಜುನಾಥ್ ರೈತ ಹಳಗೋಟೆ.

ಜಮೀನು ಹದಗೊಳಿಸಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಶಿರಂಗಾಲ ತಾಲ್ಲೂಕು ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಚುರುಕುಗೊಂಡಿದ್ದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಕಳೆದ ಒಂದು ತಿಂಗಳಿಂದಲೂ ಮಳೆ ಇಲ್ಲದೆ ರೈತರು ಬೇಸಿಗೆ ಬೆಳೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಈಗ ಬೀಳುತ್ತಿರುವ ಮಳೆಗೆ ಮೆಕ್ಕೆಜೋಳ ಕೃಷಿ ಕೈಗೊಳ್ಳುವ ಉದ್ದೇಶದಿಂದ ಜಮೀನನ್ನು ಉಳುಮೆ‌ ಮಾಡಿ ಹದಗೊಳಿಸುತ್ತಿದ್ದೇವೆ. ಸ್ವಲ್ಪ ಮಳೆ ಬಿಡುವು ನೀಡಿದರೆ ಬಿತ್ತನೆ ಬೀಜಗಳನ್ನು ಬಿತ್ತಲಾಗುತ್ತದೆ.

- ಶಶಿಧರ್ ರೈತ ಶಿರಂಗಾಲ

ರೈತರ ಸಾಲ ಮನ್ನಾ ಮಾಡಿ ಈ ಬಾರಿ ಮಳೆ ಪ್ರಾರಂಭವಾಗಿರುವುದನ್ನು ನೋಡಿದರೆ ಆಶಾದಾಯಕ ಮುಂಗಾರು ಮಳೆಯಾಗಬಹುದು ಎಂದು ಅನ್ನಿಸುತ್ತಿದೆ. ಕಳೆದ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಸಾಕಷ್ಟು ರೈತರಿಗೆ ನಷ್ಟವಾಯಿತು. ಕೂಡಲೇ ಸರ್ಕಾರ ರೈತರ ನೆರವಿಗೆ ಬಂದು ರೈತರ ಸಾಲದ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡಬೇಕು.

- ಎಸ್.ಎಂ.ಡಿಸಿಲ್ವ ಸೋಮವಾರಪೇಟೆಯ ಭುವನ ಮಂದಾರ ರೈತ ಉತ್ಪನ್ನ ಸಂಘದ ಅಧ್ಯಕ್ಷ

ಕೊಡಗು ಜಿಲ್ಲೆಯಲ್ಲಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಶೇ 64ಕ್ಕೂ ಅಧಿಕ ಮಳೆ ಬಂದಿದೆ. ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಬಿತ್ತನೆ ಬೀಜಗಳಿಗಾಗಲಿ ರಸಗೊಬ್ಬರಗಳಿಗಾಗಲಿ ಕೊರತೆ ಇಲ್ಲ. ಭತ್ತಕ್ಕೆ ಭೂಮಿಯನ್ನು ಹಸನು ಮಾಡುವ ಕಾರ್ಯ ನಡೆದಿದೆ. ಮುಸುಕಿನಜೋಳದ ಬಿತ್ತನೆಗೆ ಸಿದ್ಧತೆಗಳು ನಡೆದಿವೆ.

- ಕೆ.ಎಂ.ಸೋಮಸುಂದರ್ ಕೃಷಿ ಇಲಾಖೆಯ ಕೊಡಗು ಜಿಲ್ಲೆಯ ಜಂಟಿನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.