ಸೋಮವಾರಪೇಟೆ: ತಾಲ್ಲೂಕಿನಲ್ಲಿ ಸಿ ಮತ್ತು ಡಿ ಭೂಮಿ ಒತ್ತುವರಿ ತೆರವು ಹಾಗು ಸೆಕ್ಷನ್-4 ಸರ್ವೆಗಾಗಿ, ರಾಜ್ಯ ಸರ್ಕಾರ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಮುಂದಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗ ಭಾನುವಾರ ಮೈಸೂರಿನ ಕಚೇರಿಯಲ್ಲಿ ವ್ಯವಸ್ಥಾಪನಾ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಹಲವಾರು ದಶಕಗಳಿಂದ ಸಿ ಮತ್ತು ಡಿ ಭೂಮಿ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಅನೇಕ ವರ್ಷಗಳಿಂದ ಕೃಷಿಕರು ಕಂದಾಯ ಇಲಾಖೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸಿ ಮತ್ತು ಡಿ ಸರ್ಕಾರದ ಭೂಮಿ, ಅರಣ್ಯ ಇಲಾಖೆಗೆ ಸೇರಿದ್ದು ಎಂಬ ನೆಪವೊಡ್ಡಿ ಹಕ್ಕುಪತ್ರ ನೀಡುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರು ಅಧಿಕಾರಿ ರೇಣುಕಾಂಬ ಅವರಿಗೆ ಮನವರಿಕೆ ಮಾಡಿಕೊಟ್ಟರು.
ತಾಲ್ಲೂಕಿನ ನೂರಾರು ಕುಟುಂಬಗಳಿಗೆ ಸಿ ಮತ್ತು ಡಿ ಭೂಮಿ ಬಿಟ್ಟರೆ ಬೇರೆ ಯಾವುದೇ ಆಸ್ತಿ ಇಲ್ಲ. ಈ ಸಂದರ್ಭದಲ್ಲಿ ಒತ್ತುವರಿ ತೆರವಿಗೆ ಕ್ರಮ ಜರುಗಿಸಿದರೆ ಕೃಷಿಕರು ಬೀದಿಪಾಲಾಗುತ್ತಾರೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಬೇಜವಾಬ್ದಾರಿತನದಿಂದ ಇಂದು ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸಿ, ಭೂಮಿ ಗುರುತಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ವ್ಯವಸ್ಥಾಪನಾ ಅಧಿಕಾರಿ, ಕೆಲವೇ ದಿನಗಳಲ್ಲಿ ಸೋಮವಾರಪೇಟೆಗೆ ಆಗಮಿಸಿ ಪ್ರತ್ಯಕ್ಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಜಂಟಿ ಸರ್ವೆ ನಡೆಯುವ ತನಕ ಅರಣ್ಯ ಇಲಾಖೆ ಒತ್ತುವರಿ ತೆರವಿಗೆ ಪ್ರಯತ್ನ ಮಾಡದಂತೆ ಸೂಚಿಸಬೇಕು ಎಂಬ ಸಮಿತಿಯ ಮನವಿಗೆ ಸ್ಪಂಧಿಸಿದ ಅಧಿಕಾರಿ, ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ನಿಯೋಗದಲ್ಲಿ ಹಿರಿಯ ವಕೀಲ ಅಮೃತೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.