ವರದಿ : ಶರಣ್ ಎಚ್.ಎಸ್.
ಶನಿವಾರಸಂತೆ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಭತ್ತದ ನಾಟಿ ಕಾರ್ಯ ವಿಳಂಬವಾಗಿತ್ತು. ಈಗ ಭತ್ತದ ಗದ್ದೆಗೆ ಮಳೆ ಬಾರದೆ ಕೀಟಗಳು ಬಾಧೆ ಆವರಿಸಿದೆ. ರೋಗ ನಿವಾರಣೆ ಮಾಡಲು ರೈತರು ಔಷಧಿ ಸಿಂಪಡನೆ ಕಾರ್ಯದಲ್ಲಿ ತೊಡಗಿದ್ದಾರೆ.
ಶನಿವಾರಸಂತೆ ಹೋಬಳಿಗೆ ಸೇರಿದ ಗೌಡಳ್ಳಿ, ಆಲೂರು ಸಿದ್ದಾಪುರ, ನಿಡ್ತಾ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಭತ್ತದ ಗದ್ದೆಯಲ್ಲಿ ಕೀಟಗಳು ಕಂಡು ಬರುತ್ತಿದ್ದು, ಮಳೆ ಬಾರದೆ ಹೋದರೆ ಇವುಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಪ್ರತಿ ವರ್ಷದಂತೆ ಮುಂಗಾರುಪೂರ್ವದಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಭತ್ತ ನಾಟಿ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಮುಂಗಾರು ಮಳೆ ವಿಳಂಬವಾದ ಕಾರಣ ಬಿತ್ತನೆ ಕೆಲಸವನ್ನು ತಡವಾಗಿ ಮಾಡಿದರು. ಬಿತ್ತನೆ ಮಾಡಿದ ಭತ್ತದ ಸಸಿಗಳು ಮೊಳಕೆ ಬರಲು ನೀರಿನ ಅಭಾವ ಎದುರಾಯಿತು. ರೈತರು ಕೊಳವೆಬಾವಿಯ ನೀರಿನ ವ್ಯವಸ್ಥೆ ಮಾಡಿ ನಾಟಿ ಕಾರ್ಯಕ್ಕೆ ಮುಂದಾದರು. ನಾಟಿ ಕಾರ್ಯ ಪೂರ್ಣಗೊಳಿಸಿದ ನಂತರವೂ ಮಳೆ ಬಾರದೆ ಪಂಪ್‌ಸೆಟ್ ನೀರಿನ ಮೊರೆ ಹೋಗಿದ್ದಾರೆ.
ಮಹಾರಾಜ ತಳಿಯ ಭತ್ತವನ್ನು ಒಂದೂವರೆ ಎಕರೆಯಲ್ಲಿ ಬಿತ್ತನೆ ಮಾಡಿದ್ದೇವೆ. ನಾಟಿ ಕೆಲಸಗಳು ಸೇರಿ ಒಟ್ಟು 40 ಸಾವಿರ ಖರ್ಚು ತಗಲಿದ್ದು ಕಟಾವಿನ ಹಂತಕ್ಕೆ 60 ಸಾವಿರ ವೆಚ್ಚ ತಲುಪುವ ಸಾಧ್ಯತೆ ಇದೆ. ಮಳೆ ಇಲ್ಲದೆ ಪಂಪ್‌ಸೆಟ್ ಮೂಲಕ ನೀರು ನೀಡಿ ಭತ್ತ ಬೆಳೆಯುತ್ತಿದ್ದೇವೆ.ಡಿ.ಪಿ.ಮಾದಪ್ಪ, ರೈತ, ಹೆಗ್ಗಳ ಗ್ರಾಮ
ಕೆಲವು ರೈತರು ಮಳೆಯನ್ನೇ ನಂಬಿ ನಾಟಿ ಕಾರ್ಯವನ್ನು ಪೂರ್ಣಗೊಳಿಸಿದರು. ಇನ್ನು ಕೆಲವು ರೈತರು ಸಸಿಮಡಿಯಲ್ಲಿ ಸಸಿಗಳನ್ನು ಬಿಟ್ಟು ನಾಟಿ ಕಾರ್ಯದಿಂದ ಹಿಂಜರಿದರು. ಆದರೆ, ನಾಟಿ ಕಾರ್ಯ ಪೂರ್ಣಗೊಳಿಸಿರುವ ಗದ್ದೆಗಳಲ್ಲಿ ಈಗ ಮಳೆಯ ಕೊರತೆಯಿಂದ ಕೀಟಗಳ ಹಾವಳಿ ಹೆಚ್ಚಾಗಿದೆ.
ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಭಾಗದಲ್ಲಿ ಹೆಚ್ಚಿನ ರೈತರು ಭತ್ತ ಬೇಸಾಯದಲ್ಲಿ ತೊಡಗಿದ್ದಾರೆ. ಈಗ ಆವರಿಸಿರುವ ಕೀಟಗಳನ್ನು ನಿವಾರಣೆ ಮಾಡಲು ರೈತರು ಹರಸಾಹಸಪಡುತ್ತಿದ್ದಾರೆ. ಈ ಕೀಟಗಳನ್ನು ತಡೆಗಟ್ಟಲು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿ, ಮಾರ್ಗದರ್ಶನ ಮಾಡಬೇಕಾದ ಅವಶ್ಯಕತೆ ಇದೆ.
ಮಳೆ ಬಾರದೆ ರೈತರ ಭತ್ತದ ಪೈರುಗಳಿಗೆ ಕೀಟಗಳು ಆವರಿಸಿವೆ ಎನ್ನುವ ಮಾಹಿತಿ ದೊರೆತಿದೆ. ರೈತ ಸಂಪರ್ಕ ಕೇಂದ್ರದಿಂದ ಕೀಟಗಳ ಬಾಧೆಯನ್ನು ನಿವಾರಣೆ ಮಾಡಲು ಸರ್ಕಾರದ ಸಹಾಯಧನದೊಂದಿಗೆ ಕೀಟನಾಶಕವನ್ನು ವಿತರಣೆ ಮಾಡಲಾಗುತ್ತಿದೆ.ಯಾದವ್ ಬಾಬು, ಸಹಾಯಕ ಕೃಷಿ ನಿರ್ದೇಶಕ
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು, ‘ರೈತರು ಈ ವರ್ಷ ಸುಮಾರು 2,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೇಸಾಯ ಮಾಡಿದ್ದಾರೆ. ಪ್ರತಿ ಹೆಕ್ಟೇರ್‌ಗೆ 20ರಿಂದ 24 ಕ್ವಿಂಟಲ್ ಭತ್ತದ ಇಳುವರಿ ಕಳೆದ ವರ್ಷ ಭತ್ತದ ಬೇಸಾಯದಲ್ಲಿ ರೈತರು ಪಡೆದಿದ್ದರು. ಮುಂಗಾರು ಮಳೆ ವಿಳಂಬ ಹಾಗೂ ಮಳೆ ಇಲ್ಲದ ಕಾರಣ ಈ ವರ್ಷ ಪ್ರತಿ ಹೆಕ್ಟೇರ್‌ಗೆ 14ರಿಂದ 15 ಕ್ವಿಂಟಲ್ ಭತ್ತ ಇಳುವರಿ ಪಡೆಯುವ ನಿರೀಕ್ಷೆ ಇದೆ’ ಎಂದರು.
ಭತ್ತದ ತಳಿಗಳಾದ ಮಹರಾಜ, ತುಂಗಾ ಇಂಟನ್, ಆಯಾ 64 ತಳಿಗಳನ್ನು ನಾಟಿ ಮಾಡಿದ್ದಾರೆ. ಚಳಿಗಾಲ ಆರಂಭಕ್ಕೆ ಮುನ್ನ ಭತ್ತದ ಪೈರಿನಲ್ಲಿ ಹೂವು ಬಿಡಲು ಆರಂಭವಾದರೆ ಇಳುವರಿ ಹೆಚ್ಚು ಪಡೆಯಬಹುದು. ಪ್ರತಿ ದಿನ ಅಲ್ಪ ಪ್ರಮಾಣದ ಮಳೆಯಾದರೆ ಕೀಟದಿಂದ ಭತ್ತದ ಪೈರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.