ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಬುಧವಾರ ತಡರಾತ್ರಿವರೆಗೂ ನಡೆದು 58 ಮಳಿಗೆಗಳಿಂದ ಪಂಚಾಯಿತಿಗೆ ತಿಂಗಳಿಗೆ ₹ 4,87,961 ಆದಾಯ ಬರುವಂತಾಗಿದೆ.
ಕಳೆದ ಒಂದು ವರ್ಷದಿಂದ ವಾಣಿಜ್ಯ ಮಳಿಗೆಗಳ ಹರಾಜಿಗೆ ಪಂಚಾಯಿತಿಯ ಕೆಲವು ಸದಸ್ಯರು ಹಾಗೂ ವಾಣಿಜ್ಯ ಮಳಿಗೆಯ ವರ್ತಕರು ತೊಡಕಾಗಿದ್ದರು. ಹಾಲಿ ವರ್ತಕರು ಮಳಿಗೆಗಳನ್ನು ಶೇ 10ರಷ್ಟು ಬಾಡಿಗೆ ಹೆಚ್ಚಿಸಿ ನೀಡುವಂತೆ ಒತ್ತಾಯಿಸಿ, ಹೈಕೋರ್ಟ್‌ನಲ್ಲಿ ಟೆಂಡರ್ ವಿರುದ್ಧ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ನಂತರ ಪಂಚಾಯಿತಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಟೆಂಡರ್ ಪ್ರಕ್ರಿಯೆಯನ್ನು ನಡೆಸಿತ್ತು.
ಮಳಿಗೆಯೊಂದಕ್ಕೆ ಕನಿಷ್ಠ ₹ 3,141ನ್ನು ನಿಗದಿಗೊಳಿಸಿ ಟೆಂಡರ್ ನಡೆಸಲಾಯಿತು. ಅದರಲ್ಲಿ ಒಂದು ಮಳಿಗೆ ₹ 55ಸಾವಿರಕ್ಕೆ ಬಿಡ್ಡಾಗುವ ಮೂಲಕ ನೆರೆದವರ ಹುಬ್ಬೇರಿಸುವಂತೆ ಮಾಡಿತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಒಂದೊಂದು ಮಳಿಗೆಗಳಿಗೆ ಯಾರೂ ಟೆಂಡರ್‌ನಲ್ಲಿ ಭಾಗವಹಿಸದ ಕಾರಣ ಎರಡು ಮಳಿಗೆಗಳ ಟೆಂಡರ್ ಮುಂದೂಡಲಾಯಿತು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟೆಂಡರ್ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ ಹಾಗೂ ಸದಸ್ಯರು, ಮುಖ್ಯಾಧಿಕಾರಿ ನಾಚಪ್ಪ ಇದ್ದರು.
ಟೆಂಡರ್‌ದಾರರೊಂದಿಗೆ ಮಳಿಗೆ ವರ್ತಕರ ಒಳ ಒಪ್ಪಂದ: ವಾಣಿಜ್ಯ ಮಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಜನರು ಠೇವಣಿ ಇರಿಸಿ ನೋಂದಾಯಿಸಿದ್ದರೂ, ವರ್ತಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಪಂಚಾಯಿತಿ ಮಳಿಗೆಯೊಂದಕ್ಕೆ ನಿಗದಿಗೊಳಿಸಿದ್ದ ₹ 3,141ಗೆ ಕೇವಲ ₹ 200, 300 ಹೆಚ್ಚಳದೊಂದಿಗೆ ಮಳಿಗೆಗಳನ್ನುಮರಳಿ ಐ ಪಡೆದರು. ಮಳಿಗೆಗಳಿಗೆ ನಾಲ್ಕಾರು ಜನರು ₹ 1 ಲಕ್ಷ ಠೇವಣಿ ಕಟ್ಟಿ ಭಾಗವಹಿಸಿದ್ದರೂ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ಒಳ ಒಪ್ಪಂದದಿಂದ ಅಕ್ಕ ಪಕ್ಕದ ಮಳಿಗೆಗಳು ₹ 20ಸಾವಿರದಿಂದ 30 ಸಾವಿರಕ್ಕೆ ಹರಾಜಾದರೂ, ಕೆಲವು ಮಾತ್ರ ಪಂಚಾಯಿತಿ ನಿಗದಿಗೊಳಿದ್ದ ದರಕ್ಕೆ ಕೂಗಿದ್ದು, ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಮಳಿಗೆಗಳಿಂದ ಜೀವನ ಕಂಡುಕೊಂಡಿದ್ದ ಕೆಲವು ವರ್ತಕರು ಅಂಗಡಿ ಕೈತಪ್ಪಿದ ಬಗ್ಗೆ ಬೇಸರ ವ್ಯಕ್ತಪಡಿಸಿದರೆ, ಕೆಲವರು ಅಂಗಡಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವ್ಯಾಪಾರವಾಗದಿದ್ದರೂ, ಹೆಚ್ಚಿನ ಹಣಕ್ಕೆ ಮಳಿಗೆ ಪಡೆಯುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.