ADVERTISEMENT

ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಸಂತ ಅನ್ನಮ್ಮ ಪ್ರೌಢಶಾಲೆಯ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 3:02 IST
Last Updated 14 ಫೆಬ್ರುವರಿ 2024, 3:02 IST
ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಡಯಟ್ ಉಪ ಪ್ರಾಂಶುಪಾಲರಾದ ಕೆ.ಎಸ್.ಶಿವಕುಮಾರ್  ಉದ್ಘಾಟಿಸಿದರು.
ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಡಯಟ್ ಉಪ ಪ್ರಾಂಶುಪಾಲರಾದ ಕೆ.ಎಸ್.ಶಿವಕುಮಾರ್  ಉದ್ಘಾಟಿಸಿದರು.   

ಪ್ರಜಾವಾಣಿ ವಾರ್ತೆ

ನಾಪೋಕ್ಲು: ಶಾಲಾ ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಭಾಷಾ ಶಾಲೆಗಳ ನಿರ್ದೇಶನಾಲಯದ ವತಿಯಿಂದ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಎಂ.ಹರಿಕೃಷ್ಣನ್ ಹಾಗೂ ಸಾನ್ವಿ ದರ್ಶ ಬಿ.ವಿ ತಂಡ 93 ಅಂಕಗಳಿಸಿ ಪ್ರಶಸ್ತಿ ಗಳಿಸಿತು. ಕಳತ್ ಮಾಡಿನ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಬಾಷಿತ ಕೆ.ಡಿ ಹಾಗೂ ಜಶ್ ಕಾವೇರಿಯಪ್ಪ ವಿದ್ಯಾರ್ಥಿಗಳ ತಂಡ 44 ಅಂಕ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳಾದ ಆಯುಷ್‌ಗೌಡ ಹಾಗೂ ದಿಗಂತ್ ಡಿ.ಜಿ ತಂಡ 37 ಅಂಕ ಗಳಿಸಿ ತೃತೀಯ ಸ್ಥಾನ ಪಡೆದರೆ ಮಡಿಕೇರಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವೃಷ್ಟಿ ವಿ.ಜಿ ಹಾಗೂ ಪಿ.ಸಿ.ಅವನಿಕಾ ತಂಡ ಸಮಾಧಾನ ಗಳಿಸಿತು. ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ 3 ತಾಲ್ಲೂಕುಗಳ ತಲಾ 2 ತಂಡಗಳು ಪಾಲ್ಗೊಂಡಿದ್ದವು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ADVERTISEMENT

ವಿಜ್ಞಾನ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಡಯಟ್ ಉಪ ಪ್ರಾಂಶುಪಾಲರಾದ ಕೆ.ಎಸ್.ಶಿವಕುಮಾರ್ ಉದ್ಘಾಟಿಸಿ ಮಾತನಾಡಿ, ‘ಹಲವು ವೈಜ್ಞಾನಿಕ ಸಿದ್ಧಾಂತಗಳನ್ನು ಭಾರತೀಯರು ಪ್ರಾಚೀನ ಕಾಲದಲ್ಲಿಯೇ ನೀಡಿದ್ದಾರೆ. ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬ ಉದ್ದೇಶದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸಲಾಗುತ್ತಿದೆ’ ಎಂದರು .

ಡಯಟ್ ಹಿರಿಯ ಉಪನ್ಯಾಸಕ, ಕಾರ್ಯಕ್ರಮದ ನೋಡಲ್ ಅಧಿಕಾರಿ ವಿಜಯ್ ಎ. ಪ್ರಾಸ್ತಾವಿಕವಾಗಿ ಮಾತನಾಡಿ, ‘ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸಲು ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ, ನಾಟಕ ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳನ್ನು ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿದೆ. ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ವೈಜ್ಞಾನಿಕ ಅಂಶಗಳನ್ನು ಅರಿತುಕೊಳ್ಳಲು ನೆರವಾಗುತ್ತದೆ’ ಎಂದರು.

ಕ್ವಿಜ್ ಮಾಸ್ಟರ್‌ಗಳಾಗಿ ಮಡಿಕೇರಿಯ ಬಿ ಆರ್ ಸಿ ಕೇಂದ್ರದ ಕಂಪ್ಯೂಟರ್ ಪ್ರೋಗ್ರಾಮರ್ ಡಿ.ಎಸ್ ಪ್ರಸಾದ್ ಹಾಗೂ ನೇತಾಜಿ ಪ್ರೌಢಶಾಲೆಯ ಗಣಿತ ಶಿಕ್ಷಕ ಸಿ.ಎಸ್ ಸುರೇಶ್ ಪಾಲ್ಗೊಂಡಿದ್ದರು. ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ 6 ಶಾಲೆಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಿ ನಾಲ್ಕು ತಂಡಗಳನ್ನು ಮೌಖಿಕ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿನಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು.
ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕಳತ್ ಮಾಡಿನ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಡಿಕೇರಿಯ ಬಿ ಆರ್ ಸಿ ಕೇಂದ್ರದ ಕಂಪ್ಯೂಟರ್ ಪ್ರೋಗ್ರಾಮರ್ ಡಿ.ಎಸ್ ಪ್ರಸಾದ್ ಪ್ರಶಸ್ತಿಪತ್ರ ವಿತರಿಸಿದರು.

Highlights - ರಸಪ್ರಶ್ನೆ ಸ್ಪರ್ಧೆಯಲ್ಲಿ 3 ತಾಲ್ಲೂಕುಗಳ ತಲಾ 2 ತಂಡಗಳು ಭಾಗಿ ಮೌಖಿಕ ರಸಪ್ರಶ್ನೆ ಮೂಲಕ 4 ತಂಡಗಳು ಸ್ಪರ್ಧೆಗೆ ಆಯ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.