ಗೋಣಿಕೊಪ್ಪಲು: ಅನನ್ಯವಾದ ಕೊಡವ ಸಂಸ್ಕೃತಿಯ ಮಹತ್ವದ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಪ್ಪ ಸಲಹೆ ನೀಡಿದರು.
ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರವು ಶನಿವಾರ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ಕೊಡವಾಮೆ ಸಹಯೋಗದಲ್ಲಿ ‘ಕೊಡವ ಸಂಸ್ಕೃತಿ, ಚರಿತ್ರೆ, ಭಾಷೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೊಡವ ಸಂಸ್ಕೃತಿಯಲ್ಲಿರುವ ಪದ್ಧತಿ, ಪರಂಪರೆ, ಮೌಲ್ಯಗಳು ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಿರಿಯರ ಮೇಲಿದೆ. ಯುವ ಜನಾಂಗವು ಕೂಡ ಇದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಕೊಡವ ಜನಾಂಗದ ವಿವಾಹ ಪದ್ಧತಿ ಶ್ರೇಷ್ಠಮಟ್ಟದ್ದಾಗಿದೆ. ಇದರಲ್ಲಿ ಹಲವು ಪದ್ಧತಿ ಪರಂಪರೆಗಳಿವೆ. ನಡಿಕೇರಿಯಂಡ ಚಿಣ್ಣಪ್ಪನವರ ಪಟ್ಟೋಲೆ ಪಳಮೆ ಕೃತಿಯಲ್ಲಿ ಕೊಡವ ವಿಭಿನ್ನ ಮತ್ತು ವಿಶೇಷ ವಿವಾಹ ಪದ್ಧತಿಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ಇದೆಲ್ಲವೂ ಕೊಡವ ಸಂಸ್ಕೃತಿಯ ಒಂದು ಭಾಗ. ಸಂಸ್ಕೃತಿ ಉಳಿದರೆ ಜನಾಂಗ ಉಳಿದೀತು. ಈ ಬಗ್ಗೆ ಯುವ ಜನಾಂಗ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಕೊಡವಾಮೆ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಮಾತನಾಡಿ ‘ಕೊಡವ ಜನಾಂಗದ ವಿವಾಹ ಪದ್ಧತಿ ಮುಂದುವರಿಯಬೇಕು. ಉಡುಗೆ, ತೊಡುಗೆ ಆಹಾರ ಪದ್ಧತಿ ಜನಾಂಗ ಅಸ್ತಿತ್ವದ ಸಂಕೇತವಾಗಿದೆ’ ಎಂದು ನುಡಿದರು. ಜೊತೆಗೆ, ಕೊಡವ ಜಾನಪದ ಕುರಿತು ಮಾತನಾಡಿದರು.
ಉಪನ್ಯಾಸಕಿ ರೇವತಿ ಪೂವಯ್ಯ ಮಾತನಾಡಿ, ‘ಜಾನಪದ ಜನಾಂಗದ ಜೀವಾಳವಾಗಿದೆ. ಜಾನಪದ ಅಧ್ಯಯನ ಮಾಡುವ ಮೂಲಕ ಜನಾಂಗದ ಸಂಸ್ಕೃತಿಯನ್ನು ಉಳಿಸಬೇಕು’ ಎಂದರು.
ಈ ನೆಲದ ಸಂಸ್ಕೃತಿ ಉಳಿಯಬೇಕಾದರೆ ಕೊಡವ ಸಂಸ್ಕೃತಿಯನ್ನು ಉಳಿಸಬೇಕು. ಯುವ ಜನಾಂಗ ವಿದೇಶಿ ಸಂಸ್ಕೃತಿಗೆ ಮಾರುಹೋಗದೆ ತಮ್ಮ ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಮಾಜಸೇವಕ ಡಾ.ಕಾಳಿಮಾಡ ಶಿವಪ್ಪ ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಚೋನೀರ ಭೀಮಯ್ಯ, ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದ ಮಾಳೇಟಿರ ಸೀತಮ್ಮ, ಮಚ್ಚಮಾಡ ಲಾಲಾ ಕುಟ್ಟಪ್ಪ, ಗಾಯಕಿ ಕಬ್ಬಚ್ಚೀರ ರಶ್ಮಿ, ಕೊಡವಾಮೆ ಕೊಂಡಾಟ ಸಂಘಟನೆಯ ಚೇತನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.