ADVERTISEMENT

ಸೋಮವಾರಪೇಟೆ: ಹೊನ್ನಮ್ಮನ ಕೆರೆಗೆ ಬಾಗಿನ ಇಂದು

ಕೆರೆಗೆ ಹಾರವಾದ ತಾಯಿ ಹೊನ್ನಮ್ಮ ಅವರ ಸ್ಮರಣೆ, ಗೌರಿ ಹಬ್ಬದಂದು ಬಾಗಿನ ಅರ್ಪಣೆ

ಲೋಕೇಶ್ ಡಿ.ಪಿ
Published 6 ಸೆಪ್ಟೆಂಬರ್ 2024, 7:20 IST
Last Updated 6 ಸೆಪ್ಟೆಂಬರ್ 2024, 7:20 IST
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮ್ಮನ ದೇವಸ್ಥಾನ
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮ್ಮನ ದೇವಸ್ಥಾನ   

ಸೋಮವಾರಪೇಟೆ: ತಾಲ್ಲೂಕಿನ ಧಾರ್ಮಿಕ ತಾಣ ಹೊನ್ನಮ್ಮ ಪುಣ್ಯ ಕ್ಷೇತ್ರದಲ್ಲಿ ಗೌರಿ ಹಬ್ಬದಂದು (ಶುಕ್ರವಾರ) ಹೊನ್ನಮ್ಮನಿಗೆ ಬಾಗಿನ ಸಲ್ಲಿಸುವ ಕಾರ್ಯ ನಡೆಯಲಿದೆ.

ಈ ಕಾರ್ಯ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಇದು ಇಂದಿಗೂ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಜನರ ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿ ಉಳಿದಿದೆ.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಸ್ಥಳವೂ ಪುಣ್ಯಕ್ಷೇತ್ರವೆಂದು, ತೀರ್ಥಸ್ಥಳವೆಂದು ಪ್ರಸಿದ್ಧಿಯಾಗಿದೆ. ಅಲ್ಲದೆ, ಸುಂದರ ಪರಿಸರದ ಮಧ್ಯವಿರುವ ಬೆಟ್ಟಗುಹೆಗಳ ಇತಿಹಾಸ, ಪುರಾಣಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ADVERTISEMENT

ಹೊನ್ನಮ್ಮನ ಕೆರೆಯು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ತಾಯಿ ಹೊನ್ನಮ್ಮ ಕೆರೆಗೆ ಹಾರವಾದ ಘಟನೆ ಶಾಲಾ ಪಠ್ಯ ಪುಸ್ತಕಗಳಲ್ಲೂ ದಾಖಲಾಗಿದೆ. ಪ್ರತಿವರ್ಷ ಈ ಭಾಗದಲ್ಲಿ ವಿಶೇಷವಾಗಿ ಗೌರಿ ಹಬ್ಬದಂದು ಬಾಗಿನ ಸಮರ್ಪಣೆ ನಡೆದು ಎಲ್ಲರೂ ಸಂಭ್ರಮದಿಂದ ಹೊನ್ನಮ್ಮನಿಗೆ ಪೂಜೆ ಸಲ್ಲಿಸುವ ಸಂಪ್ರದಾಯವೂ ವೈಭವ ಹಾಗೂ ವೈಶಿಷ್ಟ್ಯ ಪೂರ್ಣವಾಗಿರುತ್ತದೆ.

ಹೊನ್ನಮ್ಮನ ಕೆರೆಯ ಸುತ್ತಲೂ ಗದ್ದೆ, ತೋಟ, ಗವಿಬೆಟ್ಟವನ್ನು ನೋಡುವುದರೊಂದಿಗೆ ಬೆಟ್ಟದ ಮೇಲಿನ ರಮ್ಯ ನೋಟ, ಗುಹೆಯ ಒಳಗಿನ ಅದ್ಬುತ ಅನುಭವ, ದೋಣಿ ವಿಹಾರ, ಮನಸ್ಸನ್ನು ಪುಳಕಿತಗೊಳಿಸುತ್ತದೆ. ಗವಿಬೆಟ್ಟವೂ ಸುಮಾರು 900 ಅಡಿಗಳಷ್ಟು ಎತ್ತರವಿದ್ದು, ದೈತ್ಯಾಕಾರದ ಬಂಡೆ ಕಲ್ಲುಗಳಿಂದ ಸ್ಥಿರವಾಗಿ ನೆಲೆಯೂರಿ ನಿಂತಿದೆ. ಅಲ್ಲಲ್ಲಿ ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟದ ಮಧ್ಯಭಾಗಕ್ಕೆ ಸರಿಯಾಗಿ ಗುಹೆಯ ಬಾಗಿಲಿನಂತಿರುವ ದ್ವಾರವು ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಗವಿಯ ಒಳಗೆ ಮುಂದೆ ಸಾಗಿದರೆ ಚಿಕ್ಕದಾದ ಕೊಳವಿದ್ದು, ಅದರಲ್ಲಿ ಉದ್ಭವಿಸುವ ಶುದ್ಧ ಜಲವನ್ನು ಜನರು ತೀರ್ಥವೆಂದು ಸೇವಿಸುತ್ತಾರೆ.

ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮ್ಮನ ಕೆರೆಯಲ್ಲಿ ಬಾಗಿನ ಅರ್ಪಿಸುವ ಇತಿಹಾಸ ಪ್ರಸಿದ್ಧ ಕೆರೆ

ಮೊದಲ ಬಾಗಿನವನ್ನು ಹೊನ್ನಮ್ಮನ ಕುಟುಂಬಸ್ಥರೇ ನೀಡುವುದು ಇಂದಿಗೂ ಇಲ್ಲಿ ಕಾಣಬಹುದು. ಬೆಳಿಗ್ಗೆ ಅವರ ತವರು ಮನೆಯಿಂದ ವಾದ್ಯಗೋಷ್ಠಿಯೊಂದಿಗೆ ಆಗಮಿಸುವ ಕುಟುಂಬಸ್ಥರು, ಪೂಜಾ ಕಲ್ಲಿನ ಮೇಲೆ ಬಾಗಿನವನ್ನು ಇಟ್ಟು ಪೂಜೆ ಸಲ್ಲಿಸಿದ ನಂತರ ಕೆರೆಗೆ ಅರ್ಪಿಸುತ್ತಾರೆ. ನಂತರ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಹೊಸದಾಗಿ ಮದುವೆಯಾದ ಜೋಡಿಗಳು ಶ್ರದ್ಧಾ ಭಕ್ತಿಯಿಂದ ಬಾಗಿನ ಅರ್ಪಿಸುತ್ತಾರೆ.

ಇಂದಿನ ಕಾರ್ಯಕ್ರಮ: ಹೊನ್ನಮ್ಮನ ಕೆರೆಗೆ ಬೆಳಿಗ್ಗೆ 9-30ಕ್ಕೆ ಹೊನ್ನಮ್ಮನ ಕುಟುಂಬ್ಥರಿಂದ ಬಾಗಿನ ಅರ್ಪಣೆ. ಈ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹಾಗೂ ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಸಿದ್ಧೇಶ್ವರ ಮತ್ತು ಶ್ರೀ ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ಟ್ರಸ್ಟ್ ಅಧ್ಯಕ್ಷ ಉದಯ ತಿಳಿಸಿದರು.

ಕನ್ನಡ ಸಿರಿ ಸ್ನೇಹ ಬಳಗದಿಂದ ಬಾಗಿನ: ಇಲ್ಲಿನ ಕೊಡಗು ಜಿಲ್ಲಾ ಕನ್ನಡಸಿರಿ ಸ್ನೇಹ ಬಳಗದಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಬೆಳಿಗ್ಗೆ 10ಕ್ಕೆ  ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮ್ಮನ ಕೆರೆ ಪಕ್ಕದ ಬೆಟ್ಟದ ಮೇಲಿನಿಂದ ಕಾಣುವ ಹೊನ್ನಮ್ಮನ ಕೆರೆ ಮತ್ತು ದೇವಸ್ಥಾನದ ವಿಹಂಗಮ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.