ADVERTISEMENT

ಕುಶಾಲನಗರ: ಹಾರಂಗಿ ಜಲಾಶಯಕ್ಕೆ ಶಾಸಕರಿಂದ ಬಾಗಿನ ಅರ್ಪಣೆ

ಕಾವೇರಿ ತುಲಾಸಂಕ್ರಮಣದ ಅಂಗವಾಗಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 6:31 IST
Last Updated 19 ಅಕ್ಟೋಬರ್ 2024, 6:31 IST
ಕುಶಾಲನಗರ ಸಮೀಪದ ಹಾರಂಗಿ‌ ಜಲಾಶಯಕ್ಕೆ ಶುಕ್ರವಾರ ಕಾಂಗ್ರೆಸ್ ಶಾಸಕ ಡಾ.ಮಂತರ್ ಗೌಡ, ಅವರ ತಂದೆ ಜೆಡಿಎಸ್‌ ಶಾಸಕ ಎ.ಮಂಜು ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ ಹಾಗೂ ರೈತರು ಬಾಗಿನ ಅರ್ಪಿಸಿದರು.
ಕುಶಾಲನಗರ ಸಮೀಪದ ಹಾರಂಗಿ‌ ಜಲಾಶಯಕ್ಕೆ ಶುಕ್ರವಾರ ಕಾಂಗ್ರೆಸ್ ಶಾಸಕ ಡಾ.ಮಂತರ್ ಗೌಡ, ಅವರ ತಂದೆ ಜೆಡಿಎಸ್‌ ಶಾಸಕ ಎ.ಮಂಜು ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ ಹಾಗೂ ರೈತರು ಬಾಗಿನ ಅರ್ಪಿಸಿದರು.   

ಕುಶಾಲನಗರ: ನಾಡಿನ ಜೀವನದಿ ಕೊಡಗಿನ ಕುಲದೈವ ಶ್ರೀ ಕಾವೇರಿ ತುಲಾಸಂಕ್ರಮಣದ ಅಂಗವಾಗಿ ಹಾರಂಗಿ ಜಲಾಶಯದ ಆವರಣದಲ್ಲಿರುವ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾವೇರಿ ನೀರಾವರಿ ನಿಗಮ ಹಾಗೂ ನೀರಾವರಿ ಇಲಾಖೆ ವತಿಯಿಂದ ಶುಕ್ರವಾರ ತಲಕಾವೇರಿಯ ಕುಂಡಿಕೆಯಿಂದ ತಂದ ಜಲದಿಂದ ಕಾವೇರಿ ಪ್ರತಿಮೆಗೆ ಅಭಿಷೇಕ ಮಾಡಿ ನಂತರ ನಡೆದ ವಿಶೇಷ ಪೂಜಾ ಕೈಂಕಾರ್ಯಗಳಲ್ಲಿ ಶಾಸಕ ಡಾ.ಮಂತರ್ ಗೌಡ ಮತ್ತು ಅರಕಲಗೂಡು ಶಾಸಕ ಎ.ಮಂಜು ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ ಸೇರಿದಂತೆ ಅಚ್ವುಕಟ್ಟು ವ್ಯಾಪ್ತಿಯ ರೈತರು ಹಾಗೂ ಮುಖಂಡರು ಪಾಲ್ಗೊಂಡು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

ನಂತರ ಮಂಗಳವಾದ್ಯಗಳೊಂದಿಗೆ ಮೆರವಣಿಯಲ್ಲಿ ತೆರಳಿ ಮೈದುಂಬಿ ನಿಂತಿರುವ‌ ಹಾರಂಗಿ ಅಣೆಕಟ್ಟೆಗೆ ಪೂಜೆ ಸಲ್ಲಿಸಿ ಶಾಸಕ ಮಂತರ್ ಗೌಡ ಬಾಗಿನ ಅರ್ಪಿಸಿದರು. ಈ ಸಂದರ್ಭ ಶಾಸಕ ಎ.ಮಂಜು ಹಾಗೂ ವಿಧಾನ ಪರಿಷತ್ತು ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಎಸ್.ಸಿ.ಚೌಡೇಗೌಡ, ಮಾಜಿ ಶಾಸಕಿ ವೀಣಾ ಅಚ್ಚಯ್ಯ ಹಾಗೂ ರೈತರು ಸಾಥ್ ನೀಡಿದರು.

ADVERTISEMENT

ಈ ವೇಳೆ ಮಾತನಾಡಿದ ಮಂತರ್ ಗೌಡ, ‘ಕಾವೇರಿ ಸಂಕ್ರಮಣದಂದು ತಲಕಾವೇರಿ ಪೂಜೆ ಸಲ್ಲಿಸಿ ನಂತರ ಇಂದು ಹಾರಂಗಿ ಜಲಾಶಯಕ್ಕೆ ಪೂಜೆ ಸಲ್ಲಿಸಿ ಜನಪ್ರತಿನಿಧಿಗಳು ಹಾಗೂ ರೈತರೊಂದಿಗೆ ಬಾಗಿನ ಅರ್ಪಿಸಲಾಗಿದೆ. ನಾಡಿನಾದ್ಯಂತ ಈ ಬಾರಿ ಅತ್ಯುತ್ತಮ ಮಳೆಯಾಗಿರುವುದರಿಂದ ರೈತರ ಬೆಳೆಯು ಉತ್ತಮ ಫಸಲು ಬಂದು ನಾಡು ಸಮೃದ್ಧವಾಗಲೆಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ. ಪ್ರತಿ ವರ್ಷದ ಸಂಪ್ರದಾಯದಂತೆ ಕಾವೇರಿ ತಾಯಿಗೆ ತಲಕಾವೇರಿಯ ಪವಿತ್ರ ತೀರ್ಥವನ್ನು ತಂದು ಅಭಿಷೇಕ ಮಾಡಿ ಪೂಜಿಸಿ ಪ್ರಾರ್ಥಿಸಲಾಗುತ್ತಿದೆ’ ಎಂದರು.

ರೈತಾಪಿ ಸಂಕುಲಕ್ಕೆ ಕೃಷಿಗೆ ನೀರು ಹರಿಸುವ ಜಲಾಶಯಕ್ಕೆ ರೈತರನ್ನೆಲ್ಲಾ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಅವರೊಟ್ಟಿಗೆ ಊಟ ಮಾಡುವ ಉದ್ದೇಶದಿಂದ ಪೂಜೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳಿಗೆ ಕೃಷಿಗೆ ನೀರೊದಗಿಸುವ ಹಾರಂಗಿಗೆ ಎಲ್ಲರೂ ಕೃತಜ್ಞರಾಗಬೇಕಿದೆ ಎಂದು ಹೇಳಿದರು.

ಈಗಲೂ ಮಳೆಯಾಗುತ್ತಿರುವ ಕಾರಣ ಹೂಳೆತ್ತುವ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಈಗಾಗಲೆ ಕೆಲವೆಡೆ ಗೇಬಿಯನ್ ವಾಲ್ ನಿರ್ಮಾಣ ‌ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಕೆ.ಕೆ. ರಘುಪತಿ, ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ,‌ ತೋಟಗಾರಿಕಾ ಇಲಾಖೆಯ ವರದರಾಜ್, ಮೀನುಗಾರಿಕೆ ಇಲಾಖೆಯ ಮಿಲನಾ ಭರತ್, ಸಚಿನ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ‘ಕುಡಾ’ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಪ್ರಮುಖರಾದ ಮಂಜುನಾಥ ಗುಂಡೂರಾವ್, ನಟೇಶ್ ಗೌಡ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ, ಕುಶಾಲನಗರ ಪುರಸಭೆ ಸದಸ್ಯ ಶಿವಶಂಕರ್, ದಿನೇಶ್ ಭಾಗವಹಿಸಿದ್ದರು.

ಇದೇ ವೇಳೆ ನೀರು ಬಳಕೆದಾರರ ಸಂಘಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಆವರಣದಲ್ಲಿ ಕಾವೇರಿ ಪೂಜೆ ಬಾಗಿನ ಅರ್ಪಣೆ ಸಂದರ್ಭ ನೀರು ಬಳಕೆದಾರರ ಸಂಘದ ನಿರ್ದೇಶಕರನ್ನು ಶಾಸಕ ಡಾ.ಮಂತರ್ ಗೌಡ ಗೌರವಿಸಿದರು
ಕೊಡ್ಲಿಪೇಟೆ ನಂದಿಪುರ ಕೆರೆಗೆ ಕಾವೇರಿ ತೀರ್ಥೋದ್ಬವ ಸಂದರ್ಭ ಬಾಗಿನ ಅರ್ಪಣೆ ನೆರವೇರಿಸಿದರು ಚಿತ್ರದಲ್ಲಿ ಹಿರಿಯ ವಕೀಲ ಚಂದ್ರಮೌಳಿ ಮಹಾಂತ ಸ್ವಾಮೀಜಿ ಮಹಾಂತ ಶಿವಲಿಂಗ ಸ್ವಾಮೀಜಿ ರುದ್ರಮುನಿ ಸ್ವಾಮೀಜಿ ಡಾ.ಅಶೋಕ ಆಲೂರ ಮುಂತಾದವರಿದ್ದಾರೆ

ಕೊಡ್ಲಿಪೇಟೆ ನಂದಿಪುರ ಕೆರೆಗೆ ಬಾಗಿನ ಅರ್ಪಣೆ

ಶನಿವಾರಸಂತೆ: ಕಾವೇರಿ ತೀಥೋದ್ಬವದ ಸಂದರ್ಭದಲ್ಲಿ ಸಮೀಪದ ಕೊಡ್ಲಿಪೇಟೆ ನಂದಿಪುರ ಕೆರೆಗೆ ಬಾಗಿನ ಅರ್ಪಣೆ ಮತ್ತು ಗಂಗಪೂಜೆಯನ್ನು ನೆರವೇರಿಸಲಾಯಿತು. ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನದ ಅರ್ಚಕರ ತಂಡ ಪೂಜಾ ವಿಧಿ ವಿಧಾನ ಮತ್ತು ಮಂತ್ರ ಘೋಷಣೆ ಪ್ರಕಾರದಂತೆ ಕೆರೆಗೆ ಬಾಗಿನ ಅರ್ಪಣೆ ಮಾಡಿದರು. ನಂತರ ಗಂಗಾಪೂಜೆ ಗಂಗಾರತಿ ನೆರವೇರಿಸಿದರು. ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಅವರ ನೇತೃತ್ವದಲ್ಲಿ ನಡೆದ ಬಾಗಿನ ಅರ್ಪಣೆ ಮತ್ತು ಗಂಗಾರತಿ ಪೂಜಾ ಕಾರ್ಯದಲ್ಲಿ ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಕೊಡಗು ವಿಶ್ವವಿದ್ಯಾನಿಲಯದ  ಕುಲಪತಿ ಡಾ.ಅಶೋಕ ಆಲೂರ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ತ್ಯಾಗರಾಜ್ ಉಪಾಧ್ಯಕ್ಷೆ ಅಪ್ಸರಿ ಬೇಗಂ ವೀರಶೈವ ಸಮಾಜದ ಅಧ್ಯಕ್ಷ ಸಿದ್ದೇಶ್ ಗಂಗಾ ವೀರಶೈವ ಸಮಿತಿ ಅಧ್ಯಕ್ಷೆ ಮಂಜುಳಾ ಸುರೇಶ್ ಭಾಗವಹಿಸಿದ್ದರು. ಈ ವೇಳೆ ಕೊಡ್ಲಿಪೇಟೆ ಕಡೆಪೇಟೆ ಗಣಪತಿ ದೇವಸ್ಥಾನದಿಂದ ನಂದಿಪುರ ಕೆರೆವರೆಗೆ ಗಂಗಾ ವೀರಶೈವ ಸಮಾಜ ಮತ್ತು ಧರ್ಮಸ್ಥಳ ಸಂಘದ ಮಹಿಳೆಯರು ಪೂರ್ಣಕಂಭ ಹೊತ್ತು ಹಾಗೂ ವೀರಶೈವ ಸಮಾಜದ ನಂದಿಧ್ವಜದೊಂದಿಗೆ ಕಾಲ್ನಡಿಗೆ ಮೂಲಕ ಮೆರವಣಿಗೆಯಲ್ಲಿ ಸಾಗಿದರು. ಮಹಿಳೆಯರು ಹಸಿರು ಬಣ್ಣದ ಸೀರೆ ಧರಿಸಿ ಮೆರವಣಿಗೆಯ ಸೊಬಗು ಹೆಚ್ಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.