ADVERTISEMENT

ಸೋಮವಾರಪೇಟೆ: ಒಣಗುತ್ತಿರುವ ಕಾಳು ಮೆಣಸು, ಬಳ್ಳಿ

ಹವಾಮಾನ ವೈಪರೀತ್ಯ; ಬೆಳೆ ಇದ್ದರೂ ಬೆಳೆ ಇಲ್ಲದೆ ಕೃಷಿಕರಿಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 15:33 IST
Last Updated 1 ಫೆಬ್ರುವರಿ 2024, 15:33 IST
ಸೋಮವಾರಪೇಟೆ ಸಮೀಪದ ಹಿರಿಕರ ಗ್ರಾಮದ ತೋಟದಲ್ಲಿ ಕಾಳು ಮೆಣಸಿನಲ್ಲಿ ಫಸಲು ಹಿಡಿದಿರುವುದು.
ಸೋಮವಾರಪೇಟೆ ಸಮೀಪದ ಹಿರಿಕರ ಗ್ರಾಮದ ತೋಟದಲ್ಲಿ ಕಾಳು ಮೆಣಸಿನಲ್ಲಿ ಫಸಲು ಹಿಡಿದಿರುವುದು.   

ಸೋಮವಾರಪೇಟೆ: ಐದು ವರ್ಷಗಳಿಂದ ಜಿಲ್ಲೆಯಲ್ಲಿ  ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಮತ್ತು ಕಾಳು ಮೆಣಸಿನ ಫಸಲು ಕುಸಿದಿದೆ. ಜತೆಗೆ ಗಿಡಗಳೂ ನಾಶವಾಗುತ್ತಿವೆ.

ಪ್ರಸಕ್ತ ಸಾಲಿನಲ್ಲಿ ತೀವ್ರ ಬರಗಾಲ ಎದುರಿಸುತ್ತಿದ್ದು, ಸರಿಯಾಗಿ ಮಳೆಯಾಗದ ಕಾರಣ, ಕಾಫಿ ಫಸಲು ತೂಕವಿಲ್ಲದೆ, ಗುಣಮಟ್ಟ ಕಳೆದುಕೊಂಡಿದೆ. ಮೇಣಸು ಸರಿಯಾಗಿ ಕಾಳು ಕಟ್ಟದೆ, ನಷ್ಟವಾಗಿದೆ. ಕಳೆದ ಭಾರಿ ಬಳ್ಳಿಗೆ ವೈರಸ್ ತಗುಲಿ  ಹಲವು ತೋಟಗಳಲ್ಲಿ ಬಳ್ಳಿಗಳು ಒಣಗಿ ಹೋಗಿದ್ದವು. ಈ ಬಾರಿ ಮತ್ತೆ ಅಕಾಲಿಕ ಮಳೆಯಿಂದ  ವೈರಸ್ ಹಿಡಿದಿರುವ ಮೆಣಸಿನ ಬಳ್ಳಿ ಒಣಗುವುದು ಮತ್ತು ಕಾಯಿಲೆ ಪೀಡಿತ ಗಿಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಸಿಲಿನ ಬೇಗೆಯಿಂದ ಬಳ್ಳಿಗಳು ಒಣಗಿ, ಬಳ್ಳಿಗಳಲ್ಲಿರುವ ಮೆಣಸಿನ ಫಸಲು ಉದುರುತ್ತಿದೆ.

ಹೆಚ್ಚಿನ ಬೆಳೆಗಾರರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುವುದರಿಂದ, ಮಾರ್ಚ್‌ ಮತ್ತು ಏಪ್ರಿಲ್ ತಿಂಗಳಿನಲ್ಲಿ ಭಾರಿ ಮಳೆಯಾದರೆ, ಜೂನ್ ಮತ್ತು ಜುಲೈನಲ್ಲಿ ಫಸಲಿನ ಭಾರ ಬೆಳವಣಿಗೆಯಾಗುತ್ತದೆ. ಈ ಸಮಯದಲ್ಲಿ ಬಸಿಲಿರದೆ, ಹದವಾಗಿ ಮಳೆಯಾದರೆ ಮಾತ್ರ ದಾರ ಕಾಳು ಕಟ್ಟಲು ಸಹಾಯಕವಾಗುತ್ತದೆ. ಬಿಸಿಲು ಅಥವಾ ಗಾಳಿ ಮಳೆ ಹೆಚ್ಚಾದಲ್ಲಿ ಕಾಳು ಕಟ್ಟುವ ದಾರ ಕೆಳಗೆ ಬೀಳುತ್ತದೆ. ಮೆಣಸಿನ ಫಸಲು ಬಳ್ಳಿಯಲ್ಲಿ ನಿಲ್ಲುತ್ತಿಲ್ಲ. ಇದರೊಂದಿಗೆ ತೇವಾಂಶ ಹೆಚ್ಚಾಗಿ ಹಲವು ಕಾಯಿಲೆಗಳಿಂದ ಬಳ್ಳಿಯನ್ನೇ ಕಳೆದುಕೊಳ್ಳಬೇಕಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸು ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಫಿ ಬೆಲೆ ಏರಿಳಿತ, ಅರೇಬಿಕಾ ಕಾಫಿ ಬಿಳಿಕಾಂಡ ಕೊರಕದ ಹಾವಳಿಯಿಂದ ನಷ್ಟವನ್ನೇ ಅನುಭವಿಸುತಿದ್ದ ರೈತರು, ಕಾಳು ಮೆಣಸಿನ ಕೃಷಿಯತ್ತ ಆಸಕ್ತಿ ವಹಿಸುತ್ತಿದ್ದರು. ಕಾಫಿ ಬೆಳೆ ಕೈ ಕೊಟ್ಟರೂ ಕಾಳು ಮೆಣಸು ರೈತರ ಕೈ ಹಿಡಿಯುತ್ತಿತ್ತು. ಆದರೆ, ಕೆಲವು ವರ್ಷಗಳಿಂದ ಮೆಣಸಿನ ಬಳ್ಳಿ ಸೊರಗು ರೋಗಕ್ಕೆ ತುತ್ತಾಗಿನಾಶವಾಗುತ್ತಿರುವುದು ರೈತರನ್ನು ಕಂಗೆಣಿಸಿದೆ ಎಂದು ಹಾನಗಲ್ಲು ಗ್ರಾಮದ ಕೃಷಿಕ ಮೋಹನ್ ತಿಳಿಸಿದರು.

ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ತಾಲ್ಲೂಕಿನ 3,200 ಹೆಕ್ಟೇರ್ ಫಸಲು ಶೇ 33 ರಷ್ಟು ನಷ್ಟವಾಗಿತ್ತು.  ಕೆಲವೆಡೆ ಶೇ 90 ರಷ್ಟು ಹಾನಿಯಾಗಿತ್ತು.  ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ ಹಾಗೂ ಸೋಮವಾರಪೇಟೆ ಕಸಬಾ ಹೋಬಳಿಗಳಲ್ಲಿ ಕಾಳು ಮೆಣಸಿನ ಬೆಳೆ ನಷ್ಟವಾಗಿದೆ. ಪ್ರಸಕ್ತ ವರ್ಷ ಕೆ.ಜಿ.ಗೆ ₹ 500ಕ್ಕಿಂತಲೂ ಹೆಚ್ಚಾಗಿದ್ದರೂ, ಫಸಲು ಇಲ್ಲದಾಗಿದೆ. ಕಾಳು ಮೆಣಸು ಕೃಷಿಗೆ ವೈಜ್ಞಾನಿಕ ವಿಧಾನದಿಂದ ವೆಚ್ಚವೂ ಹೆಚ್ಚಿದೆ. ರೈತರ ಬದುಕು ಅತಂತ್ರವಾಗಿದೆ ಎಂದು ಕಾಳು ಮೆಣಸಿನ ಬೆಳೆಗಾರರಾದ ಕಿರಣ್ ಹೇಳಿದರು.
 ಈ ಬಾರಿ,  ಕಾಳು ಕಟ್ಟುವ ಸಂದರ್ಭ ಸರಿಯಾಗಿ ಮಳೆಯಾಗದ್ದರಿಂದ ಕಾಳು ಕಟ್ಟಲಿಲ್ಲ. ಮೆಣಸಿನ ಬಳ್ಳಿಗಳು ನಾಶವಾಗುತ್ತಿವೆ ಎಂದು ಹೆಗ್ಗುಳ ಗ್ರಾಮದ ಸತೀಶ್ ಹೇಳಿದರು.

ಸೋಮವಾರಪೇಟೆ ಸಮೀಪದ ಕಿತ್ತೂರು ಗ್ರಾಮದಲ್ಲಿ ಕಾಳುಮೆಣಸು ಬಳ್ಳಿಗಳು ಒಣಗುತ್ತಿರುವುದು.
ಸೋಮವಾರಪೇಟೆ ಸಮೀಪದ ಹೆಗ್ಗುಳ ಗ್ರಾಮದಲ್ಲಿ ಮೆಣಸಿನ ಬಳ್ಳಿ ಒಣಗುತಿದ್ದು ಫಸಲು ಉದರುತ್ತಿರುವುದು. 

‘ಸಿಂಪಡಣೆ ಮಾಡಿ’

‘ತೇವ ಹವೆ ಮುಂದುವರಿದರತೆ ಕಾಳು ಮೆಣಸಿನ ಬಳ್ಳಿಗೆ ಕೊಳೆರೋಗ ಹರಡಲು ಕಾರಣವಾಗಬಹುದು. ದಾರ ಬಿಡುವ ಕಾಳು ಕಟ್ಟುವ ಮತ್ತು ಕಾಳು ಬಲಿಯುವ ಮೂರೂ ಹಂತದಲ್ಲಿ ಪೆಪ್ಪರ್ ಸ್ಪೆಷಲ್ ಸಿಂಪಡಣೆ ಮಾಡಿದ್ದಲ್ಲಿ ಫಸಲು ಮತ್ತು ಬಳ್ಳಿಗಳಿಗೆ ಹಾನಿಯಾಗುವುದಿಲ್ಲ’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.