ADVERTISEMENT

ಕೊಡಗಿನಲ್ಲಿ ಶ್ರದ್ಧಾ, ಭಕ್ತಿಯಿಂದ ಬಕ್ರೀದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:25 IST
Last Updated 17 ಜೂನ್ 2024, 16:25 IST
ಸೋಮವಾರಪೇಟೆಯ ಚೌಡ್ಲು ಗ್ರಾಮದ ನಿವಾಸಿ ರಫೀಕ್ ಎಂಬುವವರ ಪುತ್ರರಾದ ಶಹಲ್, ಶಾಹಿದ್ ಮತ್ತು ಸಾನಿಫ್ ಈದ್ ಪ್ರಯುಕ್ತ ಕಾಣಿಸಿಕೊಂಡಿದ್ದು ಹೀಗೆ
ಸೋಮವಾರಪೇಟೆಯ ಚೌಡ್ಲು ಗ್ರಾಮದ ನಿವಾಸಿ ರಫೀಕ್ ಎಂಬುವವರ ಪುತ್ರರಾದ ಶಹಲ್, ಶಾಹಿದ್ ಮತ್ತು ಸಾನಿಫ್ ಈದ್ ಪ್ರಯುಕ್ತ ಕಾಣಿಸಿಕೊಂಡಿದ್ದು ಹೀಗೆ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಈದ್‌ ಉಲ್ ಅದಾ (ಬಕ್ರೀದ್) ಹಬ್ಬವನ್ನು ಮುಸ್ಲಿಮರು ಆಚರಿಸಿದರು.

ನಗರದ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆಯೇ ವಿಶೇಷ ಪ್ರಾರ್ಥನೆಗಳು ನಡೆದವು. ಹೊಸಬಟ್ಟೆ ಧರಿಸಿ ಮನೆಯಲ್ಲಿ ವಿಶೇಷ ತಿನಿಸುಗಳನ್ನು ತಯಾರಿಸಿ ಬಂಧು, ಬಳಗ ಹಾಗೂ ಸ್ನೇಹಿತರನ್ನು ಭೋಜನಕ್ಕೆ ಆಹ್ವಾನಿಸಿದರು.

ಅಂಗಡಿ ಮುಂಗಟ್ಟುಗಳಿಗೆ ಹಬ್ಬದ ಪ್ರಯುಕ್ತ ರಜೆ ಘೋಷಿಸಲಾಗಿತ್ತು. ಇಂದಿರಾಗಾಂಧಿ ವೃತ್ತ (ಚೌಕಿ), ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ದಿನವಿಡೀ ನಿಯೋಜಿಸುವ ಮೂಲಕ ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ADVERTISEMENT

ಕೊಡಗಿನ ಪೇರಡ್ಕ ಗೂನಡ್ಕದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಪೇರಡ್ಕದ ಮೋಹಿದ್ದಿನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಮಹತ್ವ ಬಗ್ಗೆ ಸಮಾಜದಲ್ಲಿ ಮತ್ತು ಊರಿನಲ್ಲಿ ಸಹಬಾಳ್ವೆ ಅಗತ್ಯದ ಬಗ್ಗೆ ಖತೀಬ್ ನಹೀಮ್ ಫೈಜಿ ಮಾತನಾಡಿದರು.

ದೇಶದ ಜನರ ಒಳಿತಿಗೆ, ಅಭಿವೃದ್ಫಿ, ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತ. ಎಲ್ಲರೂ ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಖಬರಸ್ತಾನದಲ್ಲಿ ಮತ್ತು ಪೇರಡ್ಕ ಗೂನಡ್ಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಿತು.

ಪೇರಡ್ಕ ಗೂನಡ್ಕ ಸಂಪಾಜೆಯ ಜುಮಾ ಮಸೀದಿಯ ಅಧ್ಯಕ್ಷ ಮೋಹಿದ್ದಿನ್, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಎಂಆರ್‌ಡಿಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಟಿ.ಬಿ. ಹನೀಫ್ ತೆಕ್ಕಿಲ್, ಪಿ.ಕೆ.ಉಮ್ಮರ್ ಗೂನಡ್ಕ, ಮೊಹಮ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ ಸೇರಿದಂತೆ ಜಮಾತಿನ, ಊರಿನ ಹಲವರು ಭಾಗವಹಿಸಿದ್ದರು.

ಸೋಮವಾರಪೇಟೆಯಲ್ಲಿ ಆಚರಣೆ

ಸೋಮವಾರಪೇಟೆ: ತ್ಯಾಗ, ಬಲಿದಾನದ ಸಂಕೇತವಾದ ಈದ್ ಹಬ್ಬವನ್ನು ಸೋಮವಾರ ಮುಸ್ಲಿಮರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಪಟ್ಟಣದ ಜಲಾಲಿಯ ಮಸೀದಿ, ಹನಫಿ ಜಾಮಿಯಾ ಮಸೀದಿ, ಸೇರಿದಂತೆ ತಣ್ಣೀರುಹಳ್ಳ, ಕಲ್ಕಂದೂರು, ಹೊಸತೋಟ, ಮಾದಾಪುರ, ಕಾಗಡಿಕಟ್ಟೆ ಸೇರಿದಂತೆ ಎಲ್ಲ ಮಸೀದಿಗಳಲ್ಲಿ ಬೆಳಿಗ್ಗೆ ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸಿದರು. ಹೊಸ ಧಿರಿಸು ತೊಟ್ಟ ಚಿಣ್ಣರು, ಹಿರಿಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಇಸ್ಲಾಂ ಘೋಷವಾಕ್ಯ ಪಠಿಸಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು.

ಮುಸ್ಲಿಂ ಧರ್ಮ ಗುರುಗಳು ಪ್ರವಚನ ನೀಡಿ, ಹಬ್ಬದ ಶುಭ ಸಂದೇಶಗಳನ್ನು ನೀಡಿದರು. ಚೌಡ್ಲು ಗ್ರಾಮದ ನಿವಾಸಿ ರಫೀಕ್ ಎಂಬುವವರ ಪುತ್ರರಾದ ಶಹಲ್, ಶಾಹಿದ್ ಮತ್ತು ಸಾನಿಫ್ ಹಬ್ಬದ ಪ್ರಯುಕ್ತ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.