ADVERTISEMENT

ಅರಮಣಮಾಡ ಟೂರ್ನಿ: ಬ್ಯಾಟಿಂಗ್ ವೈಭವ

100ರ ಗಡಿ ದಾಟಿದ 4 ತಂಡಗಳು, ಬೌಂಡರಿಗಳ ಸುರಿಮಳೆ, ಪ್ರೇಕ್ಷಕರಿಗೆ ಭರಪೂರ ರಂಜನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 5:09 IST
Last Updated 30 ಏಪ್ರಿಲ್ 2024, 5:09 IST
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದ ಪಂದ್ಯದಲ್ಲಿ ಬಾದುಮಂಡ ತಂಡದ ಆಟಗಾರ್ತಿ ಒಬ್ಬರು ಉತ್ತಮ ಬೌಲಿಂಗ್ ಪ್ರದರ್ಶಿಸಿದರು
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದ ಪಂದ್ಯದಲ್ಲಿ ಬಾದುಮಂಡ ತಂಡದ ಆಟಗಾರ್ತಿ ಒಬ್ಬರು ಉತ್ತಮ ಬೌಲಿಂಗ್ ಪ್ರದರ್ಶಿಸಿದರು   

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ವಿವಿಧ ತಂಡಗಳು ತೋರಿದ ಅದ್ಭುತ ಬ್ಯಾಟಿಂಗ್‌ ಪ್ರದರ್ಶನಕ್ಕೆ ಪ್ರೇಕ್ಷಕರು ರೋಮಾಂಚಿತರಾದರು. ನೋಡನೋಡುತ್ತಿದ್ದಂತೆ ಬ್ಯಾಟ್ಸ್‌ಮನ್‌ಗಳಿಂದ ಚಿಮ್ಮುತ್ತಿದ್ದ ಬೌಂಡರಿಗಳು ಹಾಗೂ ಸಿಕ್ಸರ್‌ಗಳನ್ನು ನೋಡಿ ಬೌಲರ್‌ಗಳು ಬಸವಳಿದರು. ಒಟ್ಟು 4 ತಂಡಗಳು ನಿಗದಿತ 8 ಓವರ್‌ಗಳಲ್ಲಿ ನೂರರ ಗಡಿ ದಾಟಿದ್ದು ವಿಶೇಷ ಎನಿಸಿತು.

ನಂದೀರ ತಂಡವು ಬಟ್ಟಿಯಂಡ ವಿರುದ್ಧ 77 ರನ್‌ಗಳ ಭರ್ಜರಿ ಜಯ ಸಾಧಿಸಿತು. ನಂದೀರ ತಂಡ ನೀಡಿದ 134 ರನ್‌ಗಳ ಗುರಿಗೆ ಉತ್ತರವಾಗಿ ಬಟ್ಟಿಯಂಡ ಗಳಿಸಿದ್ದು 57 ರನ್‌ಗಳು ಮಾತ್ರ.

ಚೋಡುಮಾಡ ತಂಡವು ಅಜ್ಜಿನಿಕಂಡ ವಿರುದ್ಧ 56 ರನ್‌ಗಳ ಜಯ ಗಳಿಸಿತು. ಚೋಡುಮಾಡ ನೀಡಿದ 110 ರನ್‌ಗಳ ಗುರಿಗೆ ಉತ್ತರವಾಗಿ 54 ರನ್‌ ಗಳಿಸುವಷ್ಟರಲ್ಲಿ ಅಜ್ಜಿನಿಕಂಡ 4.1 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಪೆಬ್ಬಟ್ಟೀರ ತಂಡವು ಕೊಳುವಂಡ ವಿರುದ್ಧ 22 ರನ್‌ಗಳ ಜಯ ಗಳಿಸಿತು. ‌ಪೆಬ್ಬಟ್ಟೀರ ನೀಡಿದ 92 ರನ್‌ಗಳ ಗುರಿಗೆ ಉತ್ತರವಾಗಿ ಕೊಳುವಂಡ 70 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಚನ್ನಪಂಡ ತಂಡಕ್ಕೆ ಬೇರೇರ ವಿರುದ್ಧ 9 ವಿಕೆಟ್‌ಗಳ ಜಯ ದೊರೆಯಿತು. ಬೇರೇರ ನೀಡಿದ 41 ರನ್‌ಗಳ ಗುರಿಯನ್ನು ಚನ್ನಪಂಡ ತಂಡವು ಕೇವಲ 2.4 ಓವರ್‌ಗಳಲ್ಲಿಯೇ ತಲುಪಿದ್ದು ವಿಶೇಷ ಎನಿಸಿತು. ಕೈಪತ್ತೀರ ತಂಡಕ್ಕೆ ಕಲ್ಲುಮಾಡಂಡ ತಂಡಕ್ಕೆ 9 ವಿಕೆಟ್‌ಗಳ ಗೆಲುವು ಸಿಕ್ಕಿತು. ಕಲ್ಲುಮಾಡಂಡ ನೀಡಿದ 62 ರನ್‌ಗಳ ಗುರಿಯನ್ನು ಕೈಪತ್ತೀರ ಕೇವಲ 3.2 ಓವರ್‌ಗಳಲ್ಲಿಯೇ ತಲುಪಿತು.

ಚಿರಿಯಪಂಡ ತಂಡವು ಬೊಜ್ಜಂಗಡ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿತು. ಬೊಜ್ಜಂಗಡ ನೀಡಿದ 74 ರನ್‌ಗಳ ಗುರಿಯನ್ನು ಚಿರಿಯಪಂಡ 4 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ಕೋದೇಂಗಡ ತಂಡವು ಪಾರುವಂಗಡ ವಿರುದ್ಧ 9 ವಿಕೆಟ್‌ಗಳ ಜಯ ಪಡೆಯಿತು. ಪಾರುವಂಗಡ ನೀಡಿ 41 ರನ್‌ಗಳ ಗುರಿಯನ್ನು ಕೋದೇಂಗಡ ತಂಡವು 1 ವಿಕೆಟ್‌ ಕಳೆದುಕೊಂಡು ತಲುಪಿ, ಜಯ ಸಾಧಿಸಿತು.

ನಾಗ ಚೆಟ್ಟೀರ ತಂಡವು ಅಜ್ಜಿಕುಟ್ಟೀರ ವಿರುದ್ಧ 9 ವಿಕೆಟ್‌ಗಳ ಜಯ ಪಡೆಯಿತು. ಅಜ್ಜಿಕುಟ್ಟೀರ ನೀಡಿದ 74 ರನ್‌ಗಳ ಗುರಿಯನ್ನು ನಾಗ ಚೆಟ್ಟೀರ ಕೇವಲ 1 ವಿಕೆಟ್ ಕಳೆದುಕೊಂಡು ಜಯ ಗಳಿಸಿತು. ಮುಕ್ಕಾಟೀರ (ಮಾದಾಪುರ) ತಂಡವು ಬೈರೆಟ್ಟೀರ ವಿರುದ್ಧ 37 ರನ್‌ಗಳ ಜಯ ಗಳಿಸಿತು. ಮುಕ್ಕಾಟೀರ ನೀಡಿದ 129 ರನ್‌ಗಳ ಗುರಿಗೆ ಉತ್ತರವಾಗಿ ಬೈರೆಟ್ಟೀರ ತಂಡಕ್ಕೆ ಕೇವಲ 92 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಚಿಮ್ಮಣಮಾಡ ತಂಡಕ್ಕೆ ಸಣ್ಣುವಂಡ ವಿರುದ್ಧ 35 ರನ್‌ಗಳ ಜಯ ಪಡೆಯಿತು. ಚಿಮ್ಮಣಮಾಡ ನೀಡಿದ 108 ರನ್‌ಗಳ ಗುರಿಗೆ ಉತ್ತರವಾಗಿ ಸಣ್ಣುವಂಡ 73 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ನಾಯಕಂಡ (ಬೇಟೋಳಿ) ತಂಡಕ್ಕೆ ಅಜ್ಜಮಕ್ಕಡ ವಿರುದ್ಧ 8 ವಿಕೆಟ್‌ಗಳ ಜಯ ದೊರೆಯಿತು. ಅಜ್ಜಮಕ್ಕಡ ನೀಡಿದ 44 ರನ್‌ಗಳ ಗುರಿಯನ್ನು ನಾಯಕಂ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು.

- ಮಹಿಳಾ ವಿಭಾಗದ ಪಂದ್ಯಗಳು

ನಾಗಂಡ ತಂಡವು ಚೇಂದೀರ ವಿರುದ್ಧ 8 ರನ್‌ಗಳ ರೋಚಕ ಜಯ ಪಡೆಯಿತು. ನಾಗಂಡ ನೀಡಿದ 43 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೇಂದೀರ 35 ರನ್‌ಗಳನ್ನು ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಬಾದುಮಂಡ ತಂಡವು ಅಜ್ಜಿನಿಕಂಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಅಜ್ಜಿನಿಕಂಡ ನೀಡಿದ 40 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ಬಾದುಮಂಡ ತಂಡವು ಕೇವಲ 3 ಓವರ್‌ಗಳಲ್ಲಿಯೇ ತಲುಪಿದ್ದು ವಿಶೇಷ ಎನಿಸಿತು. ಪೆಬ್ಬಟ್ಟೀರ ತಂಡಕ್ಕೆ ಮಾಚಂಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಿಕ್ಕಿತು. ಮಾಚಂಡ ನೀಡಿದ 57 ರನ್‌ಗಳ ಗುರಿಯನ್ನು ಪೆಬ್ಬಟ್ಟೀರ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೇ ತಲುಪಿತು. ಕಂಬೀರಂಡ ತಂಡಕ್ಕೆ ಪಾರುವಂಗಡ ವಿರುದ್ಧ 28 ರನ್‌ಗಳ ಗೆಲುವು ಒಲಿಯಿತು. ಕಂಬೀರಂಡ ನೀಡಿದ 46 ರನ್‌ಗಳ ಗುರಿಗೆ ಉತ್ತರವಾಗಿ ಪಾರುವಂಗಡ ತಂಡವು ಕೇವಲ 18 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮೇರಿಯಂಡ ತಂಡದ ವಿರುದ್ಧ ಕಾಳಿಮಾಡ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ ಒಲಿಯಿತು. ಮೇರಿಯಂಡ ನೀಡಿದ 16 ರನ್‌ಗಳ ಗುರಿಯನ್ನು ಕಾಳಿಮಾಡ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೇ ತಲುಪಿದ್ದು ವಿಶೇಷ ಎನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.