ನಾಪೋಕ್ಲು: ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಗುರುವಾರ ಬೆಳಿಗ್ಗೆ 8.31ಕ್ಕೆ ತುಲಾ ಲಗ್ನದಲ್ಲಿ ಆಜ್ಞಾಮುಹೂರ್ತ ನೆರವೇರಿಸಲಾಯಿತು.
ಕಾವೇರಿ ತೀಥೋದ್ಭವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ತುಲಾಸಂಕ್ರಮಣದ ಪ್ರಯುಕ್ತ ಕಟ್ಟು ವಿಧಿಸುವ ಕಾರ್ಯ ಜರುಗಿತು. ಗ್ರಾಮದ ದೇವಾಲಯಗಳು ತಕ್ಕಮುಖ್ಯಸ್ಥರು, ಅರ್ಚಕರು ಸೇರಿ ಸ್ಥಳೀಯ ರವಿ ಹೆಬ್ಬಾರ್ ಮನೆಗೆ ತೆರಳಿ ಬಾಳೆಗೊನೆ ಕಡಿದು ಮೆರವಣಿಗೆ ಮೂಲಕ ದೇವಾಲಯದ ಸನ್ನಿಧಿಗೆ ಬಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ (ಕಟ್ಟುಬೀಳುವುದು) ವಿಧಿಸಲಾಯಿತು. ಇಂದಿನಿಂದ ಜಾತ್ರೆ ಮುಗಿಯುವವರೆಗೆ ನಾಡಿನಲ್ಲಿ ಮದು ಮಾಂಸ ಸೇವನೆ ಮರಕಡಿಯುವುದು, ಬಲಿ, ಹಿಂಸಾಕೃತ್ಯಗಳನ್ನು ನಡೆಸುವುದು ಮುಂತಾದ ಕಾರ್ಯಗಳಿಗೆ ನಿರ್ಬಂಧ ಹೇರಲಾಗಿದೆ.
ಭಗಂಡೇಶ್ವರ ದೇವಾಲಯದಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ಭಾನುವಾರ 11.45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸಲಾಗುವುದು. ಅದೇ ದಿನ ಸಂಜೆ 4.5ಕ್ಕೆ ಕುಂಭಲಗ್ನದಲ್ಲಿ ಕಾಣಿಕೆ ಡಬ್ಬಿ ಇಡುವ ಕಾರ್ಯಕ್ರಮ ನೆರವೇರಲಿದೆ.
ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ಆಡಳಿತಾಧಿಕಾರಿ ಚಂದ್ರಶೇಖರ್, ಪಾರುಪತ್ತೆಗಾರ ಪೊನ್ನಣ್ಣ, ಹರೀಶ್ ಭಟ್ ನಿಡ್ಯ ಮಲೆ ರವಿ, ಕುದುಕುಳಿ ಭರತ್, ಕುದುಪಜೆ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.