ADVERTISEMENT

ಮಡಿಕೇರಿ: ‘ಮಕ್ಕಳಿಗಾಗಿ ಜಿಲ್ಲಾ ತರಬೇತಿ ಕೇಂದ್ರ ಸ್ಥಾಪಿಸಿ’

ಮಡಿಕೇರಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ವಿಶ್ವ ಸಂಸ್ಥಾಪಕರ ದಿನಾಚರಣೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 5:43 IST
Last Updated 23 ಫೆಬ್ರುವರಿ 2024, 5:43 IST
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ವಿದ್ಯಾರ್ಥಿಗಳ ಜಾಥಾಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಗುರುವಾರ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಸಿರು ನಿಶಾನೆ ತೋರಿದರು
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ವಿದ್ಯಾರ್ಥಿಗಳ ಜಾಥಾಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಗುರುವಾರ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಸಿರು ನಿಶಾನೆ ತೋರಿದರು   

ಮಡಿಕೇರಿ: ‌ಬ್ಯಾಂಡ್‌ಸೆಟ್ ವಾದನದೊಂದಿಗೆ 400ಕ್ಕೂ ಅಧಿಕ ಮಕ್ಕಳು ಬೂಟುಗಾಲಿನ ಸಪ್ಪಳ ಹೊಮ್ಮಿಸುತ್ತಾ, ನೆಲದಿಂದ ದೂಳೆಬ್ಬಿಸುತ್ತಾ ನಡೆಯುತ್ತಿದ್ದರೆ ರಸ್ತೆ ಇಕ್ಕೆಲಗಳಲ್ಲಿ ಸೇರಿದ್ದ ಜನರು ವೀಕ್ಷಿಸಿದರು.

ಕೊಡಗು ಜಿಲ್ಲೆಯ ಅಮ್ಮತ್ತಿ, ವಿರಾಜಪೇಟೆ, ಸುಂಟಿಕೊಪ್ಪ, ನಾಪೋಕ್ಲು ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸುಮಾರು 2 ಕಿ.ಮೀ ದೂರ ಬಿರುಬಿಸಿಲಿನಲ್ಲಿ ಜಾಥಾ ನಡೆಸಿ, ಗಮನ ಸೆಳೆದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿಶ್ವ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ವಿವಿಧ ಬಗೆಯ ಜಾಗೃತಿ ಫಲಕಗಳನ್ನು ಹಿಡಿದು ಅರಿವು ಮೂಡಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಮೆರವಣಿಗೆ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ತಲುಪಿತು. ಇದಕ್ಕೂ ಮುನ್ನ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಹಸಿರು ನಿಶಾನೆ ತೋರಿದರು.

ADVERTISEMENT

ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ‌ಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ‘ಜಿಲ್ಲಾ ತರಬೇತಿ ಕೇಂದ್ರವನ್ನು ನಿರ್ಮಿಸಲು ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಈಗ ನೂರಾರು ಸಂಖ್ಯೆಯಲ್ಲಿರುವ ಮಕ್ಕಳಿಗೆ ತರಬೇತಿ ನೀಡಲು ಜಿಲ್ಲೆಯಲ್ಲಿ ಸಾಧ್ಯವಾಗದೇ ಹೊರ ಜಿಲ್ಲೆಗೆ ತೆರಳಬೇಕಿದೆ. ಇಲ್ಲಿಯೇ ನಮ್ಮದೇ ಜಾಗವೂ ಇದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಇತರರು ಸಹಕಾರ ನೀಡಿದರೆ ಜಿಲ್ಲಾ ತರಬೇತಿ ಕೇಂದ್ರ ನಿರ್ಮಿಸಬಹುದು. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ‘ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಬೇರೆಯವರಿಗೆ ಉಪದ್ರವ ಕೊಡದಿದ್ದರೆ ಸಾಕು ಎಂಬಂತಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಮಕ್ಕಳಿಗೆ ಶಿಸ್ತು ಕಲಿಸಿ, ಅವರನ್ನು ಸಮಾಜಕ್ಕೆ ಉಪಕಾರಿಗಳನ್ನಾಗಿ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಕೆಲಸ’ ಎಂದು ಶ್ಲಾಘಿಸಿದರು.

ನೂರಾರು ಸಂಖ್ಯೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗುರುವಾರ ಮಡಿಕೇರಿ ನಗರದಲ್ಲಿ ಜಾಥಾ ನಡೆಸಿದರು

ಕೊಡಗಿನಲ್ಲೂ ಏರ್‌ಕೂಲರ್‌ ಖರೀದಿಸುವ ಹಾಗೂ ಫ್ಯಾನ್‌ ಹಾಕಿಕೊಂಡೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರ ಅಸಮತೋಲನದ ಬಗ್ಗೆಯೂ ಮಕ್ಕಳಲ್ಲಿ ಸಂಸ್ಥೆ ಅರಿವು ಮೂಡಿಸುತ್ತಿದೆ. ಸಂಸ್ಥೆ ನೀಡುವ ತರಬೇತಿಗಳು ಮಕ್ಕಳನ್ನು ಬದಲಾಯಿಸುತ್ತವೆ. ಅವರಲ್ಲಿ ಧೈರ್ಯ, ಸ್ಥೈರ್ಯಗಳನ್ನು ಮೂಡಿಸುತ್ತವೆ ಎಂದರು.

ನೂರಾರು ಸಂಖ್ಯೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬ್ಯಾಂಡ್‌ ಸೆಟ್‌ ವಾದನದೊಂದಿಗೆ ಗುರುವಾರ ಮಡಿಕೇರಿ ನಗರದಲ್ಲಿ ಜಾಥಾ ನಡೆಸಿದರು

ಸ್ಕೌಟ್ಸ್‌ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೆರಾ ಮಾತನಾಡಿ, ‘ಸಂಸ್ಥೆಯು ದಿನಕ್ಕೊಂದು ಒಳ್ಳೆಯ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಶಿಸ್ತು, ಸಂಯಮ ಕಲಿಸುತ್ತದೆ. ತಂದೆ, ತಾಯಿ ದುಃಖಿಸದಂತೆ ಮಾಡುವುದು ಹಾಗೂ ಅಡ್ಡದಾರಿ ತುಳಿಯದಂತೆ ಮಾಡುವ ಕೆಲಸವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ’ ಎಂದು ವಿವರಿಸಿದರು.

ರಾಜ್ಯಪುರಸ್ಕಾರ ಮತ್ತು ಜಿಲ್ಲಾ ಪುರಸ್ಕಾರ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೊವೆಲ್, ಒಲೆವ್ ಸೇಂಟ್ ಕ್ಲೇರ್ ಸೋಮ್ಸ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಮಡಿಕೇರಿಯ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ‌ಲ್ಲಿ ಗುರುವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿಶ್ವ ಸಂಸ್ಥಾಪಕರ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಅವರು ರಾಜ್ಯ ಮತ್ತು ಜಿಲ್ಲಾ ಪುರಸ್ಕಾರ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಸಂಸ್ಥೆಯ ಮೈಥಿಲಿರಾವ್ ಪುಷ್ಪವೇಣಿ ಹರಿಣಿ ವಿಜಯ್ ಜಿಮ್ಮಿ ಸಿಕ್ವೆರಾ ಕೆ.ಟಿ.ಬೇಬಿ ಮ್ಯಾಥ್ಯೂ ಬೊಳ್ಳಜಿರ ಅಯ್ಯಪ್ಪ ಉಷಾರಾಣಿ ಭಾಗವಹಿಸಿದ್ದರು.

ಸಂಸ್ಥೆಯ ಮುಖಂಡರಾದ ಪುಷ್ಪವೇಣಿ, ಹರಿಣಿ ವಿಜಯ್, ಮೈಥಿಲಿರಾವ್, ದಮಯಂತಿ, ಬೊಳ್ಳಜಿರ ಅಯ್ಯಪ್ಪ, ಉಷಾರಾಣಿ, ಸುಲೋಚನಾ, ಶ್ರೀಧರ, ಭೀಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.