ಸೋಮವಾರಪೇಟೆ: ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಇರುವ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ಪ್ರಯೋಜನವನ್ನು ಎಲ್ಲ ರೈತ ಮಿತ್ರರು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಡಿಸಿಲ್ವ ಹೇಳಿದರು.
ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಸೋಮವಾರ ನಡೆದ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಲಾಗಿದೆ. ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸಿ, ಉತ್ತಮ ಬೆಳೆ ದೊರಕಿಸುವ ಕೆಲಸ ಮಾಡುತ್ತಿದೆ. ಸಂಸ್ಥೆಯ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳದ ಹೊರತು ಯಾವುದೇ ಸಂಸ್ಥೆ ಆರ್ಥಿಕವಾಗಿ ಸಬಲವಾಗುವುದಿಲ್ಲ ಎಂದರು.
ಎಲ್ಲ ಸದಸ್ಯರು ನಮ್ಮ ತಮ್ಮ ಕೃಷಿಚಟುವಟಿಕೆ ಸೇರಿದಂತೆ ಬೇಕಾದ ಎಲ್ಲ ವಸ್ತುಗಳನ್ನು ನಮ್ಮಲ್ಲಿಯೇ ತೆಗೆದುಕೊಳ್ಳಬೇಕು. ತಾವು ಬೆಳೆದ ಕಾಫಿಯನ್ನು ನಮ್ಮ ಸಂಸ್ಥೆಯ ಮೂಲಕವೇ ವ್ಯಾಪಾರ ಮಾಡಿದಲ್ಲಿ, ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ತಿಳಿಸಿದರು.
ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಲಕ್ಷ್ಮೀಕಾಂತ ಮಾತನಾಡಿ, ಸರ್ಕಾರ ಎಫ್‌ಪಿಒಗಳನ್ನು ರೈತರ ಅನುಕೂಲಕ್ಕಾಗಿ ಪ್ರಾರಂಭಮಾಡಿದೆ. ಆದರೆ, ಹೆಚ್ಚಿನ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಸ್ಥೆಯ ಸದಸ್ಯರು ತಮ್ಮ ಸಂಸ್ಥೆಯಲ್ಲಿಯೇ ವ್ಯವಹಾರವನ್ನು ಹೆಚ್ಚು ಮಾಡುವ ಮೂಲಕ ಲಾಭದಾಯಿಕವಾಗಿ ಬೆಳೆಸುವಂತಹ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಈ ಭಾರಿ ಕಾಫಿ ಮಂಡಳಿ ಬೆಳೆಗಾರರಿಗೆ ಅತಿ ಹೆಚ್ಚು ಸಹಾಯಧನದ ಯೋಜನೆಯನ್ನು ಬಿಡುಗಡೆ ಮಾಡಿದೆ. ತಾಲ್ಲೂಕಿಗೆ ₹4.5 ಕೋಟಿ ಸಹಾಯಧನ ಯೋಜನೆ ಬಂದಿದ್ದು, ಅದಕ್ಕೆ ಸುಮಾರು 800 ರೈತರಿಂದ ₹12 ಕೋಟಿ ವೆಚ್ಚದ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ಯತೆಯ ಮೇರೆಗೆ ರೈತರಿಗೆ ಯೋಜನೆ ನೀಡಲಾಗುವುದು. ಉಳಿದ ಅರ್ಜಿಗಳನ್ನು ಮುಂದಿನ ಏಪ್ರಿಲ್ ತಿಂಗಳ ನಂತರ ನೀಡಲಾಗುವುದು ಎಂದು ತಿಳಿಸಿದರು.
ಜಿಲಾಹಿ ಕಾಫಿ ಕ್ಯೂರಿಂಗ್ ವರ್ಕ್ಸ್ ಮಹಮ್ಮದ್ ಸಾದಿಕ್ ಮಾತನಾಡಿ, ಗುಣಮಟ್ಟದ ಕಾಫಿ ಉತ್ಪಾದನೆ ಮತ್ತು ಸಾವಯವ ಕೃಷಿಯಲ್ಲಿ ಕಾಫಿ ಬೆಳೆದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು ಸಾಧ್ಯ. ಸಾವಯವ ಕೃಷಿಯಲ್ಲಿ ಬೆಳೆದ ಕಾಫಿಗೆ ವಿದೇಶದಲ್ಲಿಯೂ ಉತ್ತಮ ಬೇಡಿಕೆ ಇದೆ. ಆದ್ದರಿಂದ ಎಲ್ಲರೂ ಉತ್ತಮ ಗುಣಮಟ್ಟದ ಸಾವಯವ ಕೃಷಿಯ ಕಾಫಿ ಬೆಳೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ನಿದೇಶಕರಾದ ಕಾಲಿಸ್ತ ಡಿಸಿಲ್ವ, ಪಿ.ಡಿ.ಮೋಹನ್ ದಾಸ್, ಮಸಗೋಡು ಲೋಕೇಶ್, ಕವಿತಾ ವಿರೂಪಾಕ್ಷ, ಎಂ.ಬಿ.ಮಂದಣ್ಣ, ಕೆ.ಟಿ.ರಾಜಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.