ಮಡಿಕೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನ್ಮದಿನದ ಪ್ರಯುಕ್ತ ದಾವಣಗೆರೆಯಲ್ಲಿ ನಡೆದ ಬೃಹತ್ ಸಮಾವೇಶ ನಂತರ ರಾಜ್ಯ ರಾಜಕೀಯದಲ್ಲಿ ಕಂಪನ ಸೃಷ್ಟಿಯಾಗಿದೆ. ಈಗಾಗಲೇ ಬಿಜೆಪಿಯಿಂದ 9 ಮತ್ತು ಜೆಡಿಎಸ್‌ನಿಂದ 11 ಮಂದಿ ಶಾಸಕರು ಕಾಂಗ್ರೆಸ್ ಸೇರಲು ಅರ್ಜಿ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.
ಪಕ್ಷದ ಆಂತರಿಕ ಸಮಿತಿಯು ಅವರ ಅರ್ಜಿಯನ್ನು ಪರಿಶೀಲನೆ ನಡೆಸುತ್ತಿದೆ. ಅವರಲ್ಲಿ ಯೋಗ್ಯರಾದವರನ್ನು ಮಾತ್ರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಪಕ್ಷ ತ್ಯಜಿಸಿದವರಿಗೆ ಮತ್ತೆ ಅವಕಾಶ ನೀಡುವುದಿಲ್ಲ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಬಹತೇಕ ಖಚಿತವಾಗಿರುವುದರಿಂದಲೇ ಅವರು ನೀತಿ ಆಯೋಗದ ಸಭೆಯಿಂದ ಹಿಡಿದು ಯಾವುದೇ ಕಾರ್ಯಕ್ರಮಗಳಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ವೀರಶೈವ ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಅವರೇ ಬಿಜೆಪಿ ಕಟ್ಟಿ ಬೆಳೆಸಿದವರು. ಅವರನ್ನೇ ಮೂಲಗುಂಪು ಮಾಡಲಾಗಿದೆ. ಈಗ ಅದೇ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನೂ ಬದಲಾವಣೆ ಮಾಡಲಾಗುತ್ತಿದೆ. ಇನ್ನಾದರೂ ವೀರಶೈವ, ಲಿಂಗಾಯತ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೋವಿಡ್ ಹೆಚ್ಚಿದ್ದಾಗ ಲವಲವಿಕೆಯಿಂದ ಇರುತ್ತಿದ್ದ ಸಚಿವ ಡಾ.ಸುಧಾಕರ್ ಅವರು ಈಗ ಬೇಸರಗೊಂಡಿದ್ದಾರೆ. ವೈದ್ಯಕೀಯ ಕಾಲೇಜುಗಳು ವಿವಿಧ ಸೌಲಭ್ಯಗಳ ಮಂಜೂರಾತಿಗಾಗಿ ಸಲ್ಲಿಸಿರುವ ಕಡತಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಮಾಡಲೆಂದೇ ಅವುಗಳನ್ನು ಬೇಗ ವಿಲೇವಾರಿ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.