ADVERTISEMENT

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ: 9 ಮಂದಿ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 20:08 IST
Last Updated 19 ಆಗಸ್ಟ್ 2022, 20:08 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮಡಿಕೇರಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರಿಗೂ ಜಾಮೀನು ದೊರೆತಿದೆ. ಮಡಿಕೇರಿ ಠಾಣೆಯಲ್ಲಿ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ‘ಯಾರ ಒತ್ತಡಕ್ಕೂ ತಲೆ ಬಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.

ಶುಕ್ರವಾರ ತಮ್ಮ ಕಚೇರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ. ನಾನೂ ಖಂಡಿಸುವೆ. ಈಗಾಗಲೇ ಕುಶಾಲನಗರದಲ್ಲಿ ಮೊಟ್ಟೆ ಎಸೆದವರನ್ನು ದೂರು ದಾಖಲಾಗುವ ಮುಂಚೆಯೇ ಬಂಧಿಸಲಾಗಿದೆ. ಮಾಜಿ ಮುಖ್ಯಮಂತ್ರಿಗೆ ನೀಡಬೇಕಾದ ಎಲ್ಲ ಭದ್ರತೆಯನ್ನೂ ಕಲ್ಪಿಸಲಾಗಿತ್ತು. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು’ ಎಂದರು.

ADVERTISEMENT

ಇದಕ್ಕೂ ಮುಂಚೆ ಇಲ್ಲಿನ ವಿಜಯ ವಿನಾಯಕ ದೇಗುಲದಿಂದ ಮೆರವಣಿಗೆಯಲ್ಲಿ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ‘ಪೊಲೀಸರು ಬಿಜೆಪಿಯ ಕೈಗೊಂಬೆಗಳಾಗಿದ್ದಾರೆ’ ಎಂದು ಘೋಷಣೆಗಳನ್ನು ಕೂಗಿದರು.

‘ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 307 ಅಡಿ ಪ್ರಕರಣ ದಾಖಲಿಸಬೇಕು. ಇಲ್ಲಿನ ಶಾಸಕರ ಒತ್ತಡಕ್ಕೆ ಮಣಿದು, ಸುಲಭವಾಗಿ ಜಾಮೀನು ಸಿಗುವಂತಹ ಪ್ರಕರಣ ದಾಖಲಿಸಲಾಗಿದೆ’ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಆರೋಪಿಸಿದರು.

‘ಸಿದ್ದರಾಮಯ್ಯ ಹೊಡೆಯಲು ಕತ್ತಿ ತೆಗೆದುಕೊಂಡು ಬಂದಿದ್ದರು. ಅದಕ್ಕೆ ನಾನೇ ಸಾಕ್ಷಿ. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.

‘ಬಿಜೆಪಿಗೆ ಸಂಬಂಧ ಇಲ್ಲ’
ಮಡಿಕೇರಿ: ‘
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧ ಇಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಯುವ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜೆ.ದರ್ಶನ್‌ ಜೋಯಪ್ಪ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಧೋರಣೆ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಲು ಮಾತ್ರವೇ ‍ಪಕ್ಷದ ಕೆಲ ಕಾರ್ಯಕರ್ತರು ಸೇರಿದ್ದರು. ಆದರೆ, ಕಿಡಿಗೇಡಿಯೊಬ್ಬರು ಕೋಳಿ ಮೊಟ್ಟೆ ಎಸೆದಿದ್ದಾರೆ. ಅದನ್ನು ಬಹುಶಃ ಕಾಂಗ್ರೆಸ್‌ನವರೇ ಮಾಡಿಸಿರಬಹುದು’ ಎಂದು ರಾಬಿನ್ ದೇವಯ್ಯ ಹೇಳಿದ್ದಾರೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.