ADVERTISEMENT

ಶಾಸಕರ ವಿರುದ್ಧ ಬಿಜೆಪಿ ಟೀಕೆ ಸರಿಯಲ್ಲ; ಕೊಲ್ಯದ ಗಿರೀಶ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 4:46 IST
Last Updated 25 ಜೂನ್ 2024, 4:46 IST
ಕೊಲ್ಯದ ಗಿರೀಶ್
ಕೊಲ್ಯದ ಗಿರೀಶ್   

ಮಡಿಕೇರಿ: ಜಿಲ್ಲೆಯ ಇಬ್ಬರು ಶಾಸಕರ ವಿರುದ್ಧ ಬಿಜೆಪಿ ಟೀಕಿಸಿರುವುದು ಸರಿ ಇಲ್ಲ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದರು.

‘ಇಬ್ಬರೂ ಶಾಸಕರು ಸುಮಾರು ₹ 200 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಪರ್ವವನ್ನೇ ಜಿಲ್ಲೆಯಲ್ಲಿ ಶುರು ಮಾಡಿದ್ದಾರೆ. ಇಂತಹ ಶಾಸಕರ ವಿರುದ್ಧ ಟೀಕಿಸುವುದು ನಿಜಕ್ಕೂ ಅರ್ಥಹೀನ’ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

‘ಈ ಹಿಂದೆ ಬಿಜೆಪಿಯು ಇಂಧನ ಬೆಲೆಯಲ್ಲಿ ಲೀಟರ್‌ಗೆ ₹ 100ರ ಗಡಿ ದಾಟಿಸಿತು. ಆಗ ನಾವು ಯಾರ ಪ್ರತಿಕೃತಿಯನ್ನು ಸುಡಲಿಲ್ಲ. ಸಾತ್ವಿಕವಾದ ವಿರೋಧವನ್ನಷ್ಟೇ ವ್ಯಕ್ತಪಡಿಸಿದೆವು. ಆದರೆ, ಈಗ ಇಂಧನ ಬೆಲೆ ಏರಿಕೆಯಾಯಿತು ಎಂದು ಸ್ಥಳೀಯ ಶಾಸಕರ ಪ್ರತಿಕೃತಿಯನ್ನು ದಹಿಸಿದ್ದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿಯನ್ನು ದಹಿಸಿದ್ದು ನೋವು ತರಿಸಿದೆ. ಇನ್ನು ಮುಂದಾದರೂ ಅವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಮುಖಂಡ ಸುರೇಶ್‌ ಸಂಪಾಜೆ ಮಾತನಾಡಿ, ‘ಇಬ್ಬರೂ ಶಾಸಕರ ಅಭಿವೃದ್ಧಿ ಕಾರ್ಯಗಳು ಹಾಗೂ ಅವರ ಜನಪ್ರಿಯತೆಯನ್ನು ಸಹಿಸದೇ ಅವರ ಪ್ರತಿಕೃತಿ ದಹಿಸಲಾಗಿದೆ’ ಎಂದು ದೂರಿದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂದ್ರಿರ ಮೋಹನ್‌ದಾಸ್, ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.