ADVERTISEMENT

ರಾಹುಲ್ ಗಾಂಧಿ ಕ್ಷಮೆ ಯಾಚನೆಗೆ ಬೋಪಯ್ಯ ಆಗ್ರಹ

ಇಂತಹವರು ವಿರೋಧ ಪಕ್ಷದ ನಾಯಕರಾಗಿರುವುದು ನಮ್ಮ ದುರ್ದೈವ್ಯ ಎಂದ ರವಿ ಕಾಳಪ್ಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:18 IST
Last Updated 4 ಜುಲೈ 2024, 5:18 IST
ಕೆ.ಜಿ.ಬೋಪಯ್ಯ
ಕೆ.ಜಿ.ಬೋಪಯ್ಯ   

ಮಡಿಕೇರಿ: ಲೋಕಸಭೆಯಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ಒತ್ತಾಯಿಸಿದರು.

ಅವರು ನೀಡಿರುವ ಹೇಳಿಕೆಯಿಂದ ಲಕ್ಷಾಂತರ ಮಂದಿ ಹಿಂದೂ ಧರ್ಮಿಯರಿಗೆ ನೋವುಂಟಾಗಿದೆ. ಅವರು ನೀಡಿರುವ ಬಾಲಿಶ ಹೇಳಿಕೆ. ಯಾರೂ ಒಪ್ಪುವಂತದ್ದಲ್ಲ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ವಿರೋಧ ಪಕ್ಷದ ನಾಯಕನ ಸ್ಥಾನ ಎಂದರೆ ಅದು ಬಲು ಮಹತ್ವದ್ದು. ಅವರು ಸರ್ಕಾರವನ್ನು ಟೀಕಿಸಬೇಕು, ಸಲಹೆ ಕೊಡಬೇಕು. ಆದರೆ, ಅದನ್ನು ಮಾಡದ ರಾಹುಲ್ ಗಾಂಧಿ ತಮ್ಮ ಭಾಷಣದ ಬಹು ಭಾಗದಲ್ಲಿ ಹಿಂದೂ ಧರ್ಮದ ಬಗ್ಗೆ ಮಾತನಾಡಿದರು. ಅದು ಹಿಂಸೆಯನ್ನು ಪ್ರಚೋದನೆ ಮಾಡುವ ಧರ್ಮ ಎಂಬರ್ಥದಲ್ಲಿ ಅವಹೇಳನ ಮಾಡಿದರು. ಇದು ಸರಿಯಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ADVERTISEMENT

ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮಾತನಾಡಿದ ಮಾತುಗಳು ಮಾತ್ರವಲ್ಲ ಅವರ ಹಾವಭಾವ ಸಹ ಬಾಲಿಶವಾಗಿತ್ತು. ಇನ್ನಾದರೂ, ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಇಲ್ಲದೇ ಹೋದರೆ, ಮತ್ತೆ ಇದೇ ರೀತಿ ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡಿದರೆ ಬಿಜೆಪಿ ಸುಮ್ಮನಿರುವುದಿಲ್ಲ ಎಂದೂ ಎಚ್ಚರಿಸಿದರು.

ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಸದ್ಯದಲ್ಲೇ, ಸಂಬಳ ಕೊಡಲೂ ಆಗದಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ತಾವು ನಿಷ್ಕಳಂಕ ಎಂಬುದನ್ನು ಸಾಬೀತುಪಡಿಸಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಕುರಿತು ಮೊದಲು ಅಧಿಕಾರಿಗಳನ್ನು ಅಮಾನತುಪಡಿಸಿ ನಂತರ ತನಿಖೆ ಮಾಡಬೇಕಿತ್ತು. ಆದರೆ, ಅಧಿಕಾರಿಗಳನ್ನು ಅಮಾನತು ಮಾಡದೇ ವರ್ಗಾವಣೆಯಷ್ಟೇ ಮಾಡಲಾಗಿದೆ ಎಂದು ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಹಂಚಿಕೆಯಾಗಿರುವ ಕುರಿತು ವಿವಾದಗಳು ಎದ್ದಿವೆ. ಕೂಡಲೇ ಅವರು ಈ ಕುರಿತು ಸಿಬಿಐ ತನಿಖೆಗೆ ಒಪ್ಪಿಸಿ, ತಾವು ನಿಷ್ಕಳಂಕ ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಮಹೇಶ್ ಜೈನಿ, ಮನು ಮಂಜುನಾಥ್, ಅರುಣ್ ಕುಮಾರ್, ಸಜಿಲ್ ಕೃಷ್ಣ ಭಾಗವಹಿಸಿದ್ದರು.

ರವಿ ಕಾಳಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ ಬೋಪಯ್ಯ ‘ಮುಡಾ’ ನಿವೇಶನ ಹಂಚಿಕೆ ಸಂಬಂಧ ಸಿಬಿಐ ತನಿಖೆಗೆ ಆಗ್ರಹ

‘ಯಾವ ವಿಚಾರ ಎಲ್ಲಿ ಮಾತನಾಡಬೇಕು ಎಂಬ ಪರಿಜ್ಞಾನ ಇಲ್ಲದವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ ‘ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಯಾವ ವಿಚಾರವನ್ನು ಎಲ್ಲಿ ಮಾತನಾಡಬೇಕು ಎನ್ನುವ ಪರಿಜ್ಞಾನವೇ ಇಲ್ಲ’ ಎಂದು ಟೀಕಿಸಿದರು. ಸಂಸತ್ತಿನಲ್ಲಿ ಏನು ಬೇಕಾದರೂ ಮಾತನಾಡಬಹುದು ಎಂಬ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಿಂದೂ ಧರ್ಮವನ್ನು ಹಿಂಸೆ ಎಂಬಂತೆ ಬಿಂಬಿಸಿದ್ದಾರೆ ಎಂದು ಕಿಡಿಕಾರಿದರು. ಮಕ್ಕಳಾಟದಂತೆ ಶಿವನ ಚಿತ್ರವನ್ನು ಲೋಕಸಭೆಯಲ್ಲಿ ಪ್ರದರ್ಶಿಸಿ ಹಾವನ್ನು ದುಷ್ಟಶಕ್ತಿ ಎಂತಲೂ ತ್ರಿಶೂಲವನ್ನು ಹಿಂಸೆಗೆ ಬಳಸುವಂತದ್ದು ಎಂಬಂತೆ ಬಿಂಬಿಸಿ ಮಾತನಾಡಿದ್ದಾರೆ. ಇವರಿಗೆ ಹಿಂದೂಧರ್ಮದ ಬಗ್ಗೆ ಸ್ವಲ್ಪವೂ ಅಭಿಮಾನ ಇಲ್ಲ. ಅವರು ಬೇಕಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರಿಗಿಷ್ಟ ಬಂದ ದೇಶಕ್ಕೆ ಹೋಗಲಿ ಎಂದರು. ‘ಈ ಹಿಂದೆ ಅವರು ವಿದೇಶಗಳಲ್ಲಿ ಭಾರತದ ಆಡಳಿತವನ್ನು ತೆಗಳಿದ್ದರು. ಇಷ್ಟು ವರ್ಷಗಳಲ್ಲಿ ಭಾರತದ ಯಾವುದೇ ರಾಜಕೀಯ ಪಕ್ಷದ ಮುಖಂಡರು ಹೀಗೆ ಮಾಡಿರಲಿಲ್ಲ. ಇಂತಹವರು ವಿರೋಧ ಪಕ್ಷದ ನಾಯಕರಾಗಿರುವುದು ನಮ್ಮ ದುರ್ದೈವ್ಯ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.