ADVERTISEMENT

ಕೊಡಗು | ಕೇಂದ್ರ ಬಜೆಟ್; ಮಿಶ್ರ ಪ್ರತಿಕ್ರಿಯೆ

ಬಜೆಟ್‌ನಲ್ಲಿ ಈಡೇರದ ಕೊಡಗು ಜಿಲ್ಲೆಯ ಕನಸುಗಳು

ಕೆ.ಎಸ್.ಗಿರೀಶ್
Published 24 ಜುಲೈ 2024, 6:31 IST
Last Updated 24 ಜುಲೈ 2024, 6:31 IST
   

ಮಡಿಕೇರಿ: ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದ ಬಜೆಟ್‌ ಕುರಿತು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊಡಗಿಗೆಂದೇ ಯಾವುದೇ ನಿರ್ದಿಷ್ಟ ಯೋಜನೆಗಳಾಗಲಿ, ಕೊಡುಗೆಗಳಾಗಲಿ ಇದ್ದದ್ದು ಕಂಡು ಬರದೇ ನಿರಾಸೆ ಮೂಡಿಸಿದೆ ಎಂಬ ಮಾತಗಳು ಕೇಳಿಬರುತ್ತಿರುವ ಮಧ್ಯೆಯೇ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದಂತೆ ನೀಡುವ ಅನುದಾನವನ್ನು ಈ ಬಾರಿ ₹5 ಸಾವಿರ ಕೋಟಿಗೆ ಹೆಚ್ಚಿಸಿರುವುದು ಒಂದಿಷ್ಟು ಆಶಾಭಾವನೆಯನ್ನು ಗರಿಗೆದರಿಸಿದೆ.

ಕಳೆದ ವರ್ಷ ಕಾಫಿ ಬೆಳೆಗೆಂದೇ ₹230 ಕೋಟಿಯಷ್ಟು ಹಣ ಬಿಡುಗಡೆಯಾಗಿತ್ತು. ಇದರಲ್ಲಿ ₹62 ಕೋಟಿಯನ್ನು ಸಬ್ಸಿಡಿ ನೀಡಲೆಂದೇ ಬಳಕೆ ಮಾಡಲಾಗಿತ್ತು. ಈ ಬಾರಿ ಹೆಚ್ಚಿನ ಹಣ ಬಂದಿರುವುದರಿಂದ ಸಹಜವಾಗಿ ಕಾಫಿಗೂ ಹೆಚ್ಚಿನ ಪಾಲು ದೊರೆಯಲಿದೆ ಎಂಬ ನಿರೀಕ್ಷೆ ಇದೆ. ಇನ್ನು ಕಾಫಿ ಕುರಿತಂತೆ ಹೇಳಿಕೊಳ್ಳುಂತಹ ಕೊಡುಗೆಗಳು ಬಜೆಟ್‌ನಲ್ಲಿ ಕಾಣಲಿಲ್ಲ.

ADVERTISEMENT

ಕೊಡಗಿಗೆ ಒಂದು ವಿಮಾನ ನಿಲ್ದಾಣ ಬೇಕು ಎಂಬ ಬೇಡಿಕೆ ದಶಕಗಳಿಂದಲೂ ಇತ್ತು. ಆದರೆ, ಅದೂ ಈಡೇರಿಲ್ಲ. ರೈಲ್ವೆ ಸಂಪರ್ಕ ಬೆಸೆಯುವ ಯೋಜನೆಗೂ ಸಾಕಾಗುವಷ್ಟು ಅನುದಾನ ಲಭಿಸಿಲ್ಲ.

ಇನ್ನು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆಗಳಿರಲಿ, ಹಳೆಯ ಯೋಜನೆಗಳಾದ ‘ಚಾಲೆಂಜ್ ಮೋಡ್’ ಮತ್ತು ‘ಪರ್ವತಮಾಲಾ’ ಯೋಜನೆಗಳಿಗೆ ಕನಿಷ್ಠ ಮಂಜೂರಾತಿಯನ್ನೂ ನೀಡಿಲ್ಲ. ಜಿಲ್ಲೆಯನ್ನು ‍ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಪರಿಗಣಿಸುವ ಯಾವುದೇ ಅಂಶಗಳೂ ಬಜೆಟ್‌ನಲ್ಲಿ ಕಾಣಲಿಲ್ಲ.

ಹೊಸದಾಗಿ ಸಂಸದರಾಗಿ ಆಯ್ಕೆಯಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ ಕೊಡಗು ಜಿಲ್ಲೆಗೆ ವಿಶೇಷ ಎನ್ನುವಂತಹ ಏನಾದರೂ ಯೋಜನೆಗಳನ್ನು, ಅನುದಾನಗಳನ್ನು ತರಬಹುದು ಎಂಬ ನಿರೀಕ್ಷೆ ಜಿಲ್ಲೆಯ ಎಲ್ಲರಲ್ಲಿತ್ತು. ಆದರೆ, ಅವುಗಳೆಲ್ಲವೂ ಹುಸಿಯಾಗಿವೆ. ಸದ್ಯ ಸಲ್ಲಿಕೆಯಾಗಿಿರುವ ಪ್ರಸ್ತಾವಗಳಿಗಾದರೂ ಮಂಜೂರಾತಿ ದೊರೆತಿದ್ದರೆ ಅನುಕೂಲವಾಗುತ್ತಿತ್ತು.

ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು ಸಾಕಷ್ಟು ಜೀವಹಾನಿಗೆ ಕಾರಣವಾಯಿತು. ಅಂತಹುದೇ ಭೀತಿ ಹುಟ್ಟಿಸುವ ಗುಡ್ಡವೊಂದು ರಾಷ್ಟ್ರೀಯ ಹೆದ್ದಾರಿಯ ಕರ್ತೋಜಿ ಬಳಿ ಇದೆ. ಕುಸಿತ ತಡೆಯಲು ವಿಶೇಷ ಪ್ಯಾಕೇಜ್ ರೂಪದಲ್ಲಿ ಏನಾದರೂ ಪರಿಹಾರೋಪಾಯಗಳನ್ನು ತರಬಹುದಿತ್ತು ಎಂಬ ನಿರೀಕ್ಷೆಯೂ ಈಡೇರಲಿಲ್ಲ.

‘ಅಭಿವೃದ್ಧಿ ಪೂರಕ ಬಜೆಟ್’

ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮೂರನೇ ಅವಧಿಯ ಬಜೆಟ್  ಅಭಿವೃದ್ಧಿ ಪೂರಕವಾಗಿದೆ. ಕರ್ನಾಟಕ ರಾಜ್ಯಕ್ಕೆ ವಿಶೇಷ ಯೋಜನೆ ಹಾಗೂ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಇದು ಈಡೇರಿಲ್ಲ ಎಂಬ ಬೇಸರವಿದೆ. ಬಡವರಿಗೆ ಒಂದು ಕೋಟಿ ಮನೆ ಕಟ್ಟಿಕೊಡುವ ಉದ್ದೇಶ,ಯುವಜನರಿಗೆ ಉದ್ಯೋಗ ಕೌಶಲ್ಯ ತರಬೇತಿ ಯೋಜನೆಯನ್ನು ಹೊಂದಲಾಗಿದೆ ಇದು ಅತ್ಯಂತ ಸ್ವಾಗತಾರ್ಹ.

ಕೆ.ಎನ್.ದೇವರಾಜ್, ಉದ್ಯಮಿ, ಕುಶಾಲನಗರ.

‘ಕಾಫಿ ಬೆಳೆಗಾರರ ನಿರ್ಲಕ್ಷ್ಯ’

ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿರುವ ಬಜೆಟ್‌ನಲ್ಲಿ ಕಾಫಿ ಬೆಳೆಗಾರರನ್ನು ನಿರ್ಲಕ್ಷ್ಯ ಮಾಡಿದೆ

ಎಂದು ಹೇಳಬಹುದು. ಕಳೆದ 2018ರಿಂದಲೂ ಬೆಳೆಗಾರರು ಹವಾಮಾನ ವೈಪರೀತ್ಯದಿಂದ ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಎಲ್ಲದರ ಬೆಲೆ ಹೆಚ್ಚಳವಾಗಿದೆ. ಆದರೆ, ಬೆಲೆ ಮಾತ್ರ ಹೆಚ್ಚಳವಾಗಿಲ್ಲ. ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಸಾಲವನ್ನು ಮನ್ನಾ ಮಾಡುವುದು ಸೇರಿದಂತೆ, ರೈತರಿಗೆ ಅನುಕೂಲವಾಗುವ ಯೋಜನೆಗಳು ಬಜೆಟ್‌ನಲ್ಲಿ ಸಿಗುವ ಭರವಸೆಯಲ್ಲಿದ್ದೆವು. ಅದು ಈಡೇರದಿರುವುದು ಬೆಳೆಗಾರರನ್ನು ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ.

ಎಸ್.ಎಂ. ಡಿಸಿಲ್ಪ, ಪ್ರಗತಿಪರ ಕೃಷಿಕರು. ಅಬ್ಬೂರುಕಟ್ಟೆ ಗ್ರಾಮ.

‘ನಿರೀಕ್ಷೆಗೆ ಸ್ಪಂದಿಸಿದ ಬಜೆಟ್’

ಈ ಬಜೆಟ್ ಅಭಿವೃದ್ಧಿಗೆ ಪೂರಕವಾದ ಬಜೆಟ್‌ ಆಗಿದೆ. ಎಲ್ಲ ವರ್ಗದ ನಿರೀಕ್ಷೆಗೆ ಸ್ಪಂದಿಸಿದ್ದಾರೆ. ಮಹಿಳೆಯರಿಗೆ, ಯುವ ಸಮುದಾಯಕ್ಕೆ, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದಾರೆ. ಮುದ್ರಾ ಯೋಜನೆಯಡಿ ಸಾಲದ ಮಿತಿ ಏರಿಸಿದ್ದಾರೆ. ಆದಾಯ ತೆರಿಗೆದಾರರಿಗೂ ಅನುಕೂಲ ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಸುಸ್ಥಿರ ಅಭಿವೃದ್ಧಿಯ ಬಜೆಟ್‌. ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದೊಂದು ದೂರದೃಷ್ಟಿಯ ಬಜೆಟ್.

ಕೆ.ಜಿ.ಬೋಪಯ್ಯ, ಬಿಜೆಪಿಯ ಹಿರಿಯ ಮುಖಂಡ.

‘ಋಣ ಸಂದಾಯದ ಬಜೆಟ್ ’

ಕೇಂದ್ರ ಬಜೆಟ್ ದೇಶದ ಬಜೆಟ್ ಅಲ್ಲ. ಅದು ಎರಡು ರಾಜ್ಯಗಳನ್ನು ಕೇಂದ್ರೀಕರಿಸಿದ ಋಣ ಸಂದಾಯದ ಬಜೆಟ್. ಬಿಹಾರ ಮತ್ತು ಆಂದ್ರಪ್ರದೇಶದ ಜೆಡಿಯು ಹಾಗೂ ಟಿಡಿಪಿ ಎನ್.ಡಿ.ಎ ಸರ್ಕಾರಕ್ಕೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಋಣ ತೀರಿಸುವ ಬಜೆಟ್ ಇದಾಗಿದೆ. 26 ಸಾವಿರ ಕೋಟಿ ಬಿಹಾರ ರಾಜ್ಯಕ್ಕೆ ,15 ಸಾವಿರ ಕೋಟಿ ಆಂಧ್ರಪ್ರದೇಶದ ರಾಜ್ಯಕ್ಕೆ ನೀಡಿ ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಮಲತಾಯಿ ಧೋರಣೆ ಮಾಡಲಾಗಿದೆ. ಅತಿವೃಷ್ಠಿಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ವಿಶೇಷ ಪ್ಯಾಕೆಜ್ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ಈಡೇರಿಲ್ಲ

ತೀತಿರ ಧರ್ಮಜಾ ಉತ್ತಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.

‘ದೂರದೃಷ್ಟಿಯ ಬಜೆಟ್’

ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿರುವ ಬಜೆಟ್ ಇದು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೌಶಲಾಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ಮಹಿಳಾಭಿವೃದ್ಧಿಗೂ ‍ಪೂರಕ ಕಾರ್ಯಕ್ರಮಗಳಿವೆ. ಯಾವುದೇ ಕ್ಷೇತ್ರಗಳನ್ನೂ ಬಿಡದ ಬಜೆಟ್‌ ಇದು.  ಇದೊಂದು ಪ್ರಗತಿಪರ ಮಾತ್ರವಲ್ಲ ದೂರದೃಷ್ಟಿಯ ಬಜೆಟ್ ಸಹ ಹೌದು.

ರವಿ ಕಾಳಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.