ಮಡಿಕೇರಿ: ಈಗಲಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಕೊಡಗಿನ ಇಬ್ಬರು ಬಿಜೆಪಿ ಶಾಸಕರು ಮತ್ತೆ ನಿರಾಸೆ ಅನುಭವಿಸುವಂತಾಗಿದೆ.
‘ಮೈತ್ರಿ’ ಸರ್ಕಾರದ ಆಡಳಿತವು ಕೊನೆಯಾಗಿ, ಬಿಜೆಪಿ ನೇತೃತ್ವದ ಸರ್ಕಾರವು ಅಸ್ತಿತ್ವಕ್ಕೆ ಬಂದ ಮೇಲೆ, ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರಲ್ಲಿ ಒಬ್ಬರು ಮಂತ್ರಿಯಾಗುವ ನಿರೀಕ್ಷೆಯಿತ್ತು. ಈ ಹಿಂದೆ ನಡೆದ ಮೂರು ಸಂಪುಟ ವಿಸ್ತರಣೆಯಲ್ಲೂ ಇಬ್ಬರಿಗೂ ಸ್ಥಾನ ಸಿಕ್ಕಿರಲಿಲ್ಲ.
ಬುಧವಾರ ನಡೆದ ಸಂಪುಟ ವಿಸ್ತರಣೆಯಲ್ಲಾದರೂ ಸಂಪುಟ ಸೇರುವ ಕನಸು ಕಂಡಿದ್ದರು. ಈಗಲೂ ನಿರಾಸೆ ಅನುಭವಿಸುವಂತಾಗಿದೆ. ಇದು ಶಾಸಕರು, ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ರಂಜನ್ ಈ ಬಾರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದಿದ್ದರೂ ಬೇಸರದಲ್ಲಿದ್ದಾರೆ ಎಂಬುದು ಅವರ ಆಪ್ತರು ಮಾತು.
ರಂಜನ್ ಅವರು ಬಹಿರಂಗವಾಗಿಯೇ ನಾನು ಸಚಿವ ಸ್ಥಾನದ ಆಕಾಂಕ್ಷಿಯೆಂದು ಹೇಳಿಕೊಂಡಿದ್ದರು. ಮೂಲ ಬಿಜೆಪಿಯ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮೊದಲಿಂದಲೂ ಪಟ್ಟು ಹಿಡಿದಿದ್ದರು.
ನಾನೂ ಹಿರಿಯ ಶಾಸಕನಿದ್ದೆನೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಹೈಕಮಾಂಡ್ ಮೇಲೆ ವಿಶ್ವಾಸವಿದೆ ಎಂದು ರಂಜನ್ ಪದೇ ಪದೇ ಹೇಳುತ್ತಿದ್ದರು. ಅವರ ಮನವಿಗೆ ಮನ್ನಣೆ ಸಿಕ್ಕಿಲ್ಲ.
ಇನ್ನು ಕೆ.ಜಿ.ಬೋಪಯ್ಯ ಅವರು ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರೂ ಅವರಿಗೆ ಈ ಹಿಂದೆ ‘ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ’ ಅಧ್ಯಕ್ಷರಾಗಿ ನೇಮಕ ಮಾಡಿ ಅಸಮಾಧಾನವನ್ನು ತಕ್ಕಮಟ್ಟಿಗೆ ತಣ್ಣಗಾಗಿಸುವ ಕೆಲಸವನ್ನು ಬಿ.ಎಸ್.ಯಡಿಯೂರಪ್ಪ ಮಾಡಿದ್ದರು.
ಈಡೇರದ ಮಂತ್ರಿಗಳ ಭರವಸೆ:ಜಿಲ್ಲಾ ಪ್ರವಾಸದ ವೇಳೆ ಸಾಕಷ್ಟು ಮಂತ್ರಿಗಳು, ಕೊಡಗಿನ ಒಬ್ಬರು ಶಾಸಕರು ಈ ಬಾರಿ ಮಂತ್ರಿಯಾಗಲಿದ್ದಾರೆ ಎಂಬ ಭರವಸೆ ನೀಡಿದ್ದರು. ಅದು ಈ ಬಾರಿಯೂ ಈಡೇರಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮುಂದೆ ಕೊಡಗಿನ ಶಾಸಕರೇ ಸಂಪುಟ ಸೇರಲಿದ್ದು, ಅವರೇ ಉಸ್ತುವಾರಿ ಆಗಲಿದ್ದಾರೆ ಎಂದಿದ್ದರು. ಇನ್ನೂ ಸೋಮವಾರ ಮಡಿಕೇರಿಗೆ ಬಂದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಅದೇ ಮಾತನ್ನಾಡಿದ್ದರು.
ಕಳೆದ ಮೂರು ವರ್ಷಗಳಿಂದ ಕೊಡಗು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದ್ದು, ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಆದ್ದರಿಂದ, ಜಿಲ್ಲೆಯವರೇ ಮಂತ್ರಿಯಾದರೆ ಸ್ವಲ್ಪಮಟ್ಟಿಗೆ ಅನುಕೂಲ. ಸಮಸ್ಯೆಗಳು ಪರಿಹಾರ ಆಗಲಿವೆ ಎಂಬುದು ಕ್ಷೇತ್ರದ ಜನರ ನಿರೀಕ್ಷೆಯಾಗಿತ್ತು.
2004ರಲ್ಲಿ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದಿಂದ ಬೋಪಯ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ ಮಡಿಕೇರಿಯಿಂದ ವಿರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿದ್ದ ಬೋಪಯ್ಯ, ಅಲ್ಲಿ 2008, 2013 ಹಾಗೂ 2018ರ ಚುನಾವಣೆಯಲ್ಲಿ ಗೆದ್ದಿದ್ದರು. 2008ರಲ್ಲಿ ಬೋಪಯ್ಯ ವಿಧಾನಸಭೆ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
1994, 1999, 2008, 2013 ಹಾಗೂ 2018ರ ಚುನಾವಣೆ ಗೆದ್ದಿದ್ದ ಅಪ್ಪಚ್ಚು ರಂಜನ್, ಒಟ್ಟು ಐದು ಬಾರಿ ಶಾಸಕರಾಗಿದ್ದಾರೆ. ಒಮ್ಮೆ ಕ್ರೀಡಾ ಸಚಿವರಾಗಿಯೂ ಕೆಲಸ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.