ADVERTISEMENT

ಸುಂಟಿಕೊಪ್ಪ ವ್ಯಾಪ್ತಿ: ಕಂಬಳಿ ಹುಳುಗಳ ಕಾಟ; ಸಾರ್ವಜನಿಕರಿಗೆ ತೊಂದರೆ

ಸುನಿಲ್ ಎಂ.ಎಸ್.
Published 13 ಜುಲೈ 2019, 19:30 IST
Last Updated 13 ಜುಲೈ 2019, 19:30 IST
ಸುಂಟಿಕೊಪ್ಪ ಸಮೀಪದ ಕೆದಕಲ್ ತೋಟವೊಂದರಲ್ಲಿ ಕಂಡುಬಂದ  ಕಂಬಳಿ ಹುಳುಗಳು
ಸುಂಟಿಕೊಪ್ಪ ಸಮೀಪದ ಕೆದಕಲ್ ತೋಟವೊಂದರಲ್ಲಿ ಕಂಡುಬಂದ  ಕಂಬಳಿ ಹುಳುಗಳು   

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಂಬಳಿ ಹುಳುಗಳ ಹಾವಳಿ ಮಿತಿಮೀರಿದ್ದು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ತೊಂದರೆಗೆ ಒಳಗಾಗಿದ್ದಾರೆ.

ಈ ವ್ಯಾಪ್ತಿಯ ತೋಟಗಳಲ್ಲಿ ದೊಡ್ಡದಾದ ಕಪ್ಪು-ಬಿಳಿ ಮಿಶ್ರಿತವಾದ ಕಂಬಳಿ ಹುಳುಗಳು ಇದ್ದು, ಇವುಗಳು ಬಿದಿರು, ಕಾಫಿ ಗಿಡ, ಮರಗಳಲ್ಲಿ ಗುಂಪುಗುಂಪಾಗಿ ಕಾಣಸಿಗುತ್ತವೆ.

ಬೃಹದಾಕಾರದ ಕಂಬಳಿ ಹುಳುಗಳಿಂದ ಕಾಫಿ, ಕರಿಮೆಣಸು ಗಿಡಗಳಿಗೆ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ. ಆದರೆ ಗಿಡಗಳ ಮೇಲೆ ಕೂರುವ ಹುಳಗಳನ್ನು ಕಾರ್ಮಿಕರು ಮುಟ್ಟುವುದರಿಂದ ತುರಿಕೆ ಉಂಟಾಗಿ ಆ ಭಾಗ ಸಂಪೂರ್ಣವಾಗಿ ಊತು ಕಾಣಿಕೊಂಡು ನೋವು ಅನುಭವಿಸುವ ಸ್ಥಿತಿ ಎದುರಿಸುವಂತಾಗಿದೆ.

ADVERTISEMENT

ಆರೋಗ್ಯಕ್ಕೂ ಸಮಸ್ಯೆ:ಈ ಭಾಗದ ತೋಟಗಳಿಗೆ ತೋಟದ ರೈಟರ್‌ಗಳು, ವ್ಯವಸ್ಥಾಪಕರು ಬೈಕಿನಲ್ಲಿ ಹೋಗುವುದು ಪರಿಪಾಠ. ಈ ವೇಳೆ, ಮರ, ಮೆಣಸು ಗಿಡದಲ್ಲಿ ಇರುವ ಈ ಕಂಬಳಿ ಹುಳುಗಳು ಮೈ ಮೇಲೆ ಬಿದ್ದು ತುರಿಕೆ ಉಂಟಾಗಿ ಸಂಕಷ್ಟ ಅನುಭವಿಸುಂತಾಗಿದೆ.
ಹೋಬಳಿ ವ್ಯಾಪ್ತಿಯ ಕೆದಕಲ್, ಹಾಲೇರಿ, ಬೋಯಿಕೇರಿ, ಬಾಳೆಕಡು, ಕೊಡಗರಹಳ್ಳಿ, ಶ್ರೀದೇವಿ ಇತರ ತೋಟಗಳಲ್ಲಿ ಭಾರಿ ಗಾತ್ರದ ಕಂಬಳಿ ಹುಳುಗಳಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ.

ಕಳೆದ ವರ್ಷ ಸಮೀಪದ ಪನ್ಯ ತೋಟದಲ್ಲಿ ಸಣ್ಣ ಗಾತ್ರದ ಕಂಬಳಿ ಹುಳುಗಳು ಹೆಚ್ಚಾಗಿದ್ದು, ಗಿಡಗಳನ್ನು ತಿಂದು ಹಾಳು ಮಾಡುತ್ತಿದ್ದವು. ಆದರೆ ಈ ಬಾರಿ ಈ ಭಾಗದ ತೋಟದಲ್ಲಿ ಈ ಅಂತಹ ಸಮಸ್ಯೆಗಳು ಕಂಡುಬಂದಿಲ್ಲ ಎನ್ನುತ್ತಾರೆ ಪನ್ಯ ತೋಟದ ವ್ಯವಸ್ಥಾಪಕ ಪೊನ್ನಪ್ಪ.
ಕಂಬಳಿ ಹುಳುಗಳು ಗಿಡ, ಮರಗಳ ಮೇಲೆ ಇರುವ ಶಿಲಿಂದ್ರಗಳನ್ನು ಮಾತ್ರ ತಿನ್ನುತ್ತವೆ. ಗಿಡಗಳಿಗೆ ಯಾವುದೇ ರೀತಿಯ ಹಾನಿ ಮಾಡಿಲ್ಲ. ಈ ವರ್ಷ ಬೃಹತ್ ಗಾತ್ರದ ಕಂಬಳಿ ಹುಳುಗಳು ಗೋಚರಿಸಿದ್ದು, ವೇಗವಾಗಿ ಓಡಾಡುತ್ತವೆ.

ಬಿದಿರಿನ ಮೇಲೆ ಹೆಚ್ಚಾಗಿ ಕಂಡುಬಂದಿದ್ದು, ಇವುಗಳ ಕಾಟವನ್ನು ತಡೆಯಲು ಸಾದ್ಯವಾಗದೆ ಬಿದಿರನ್ನು ಸಂಪೂರ್ಣವಾಗಿ ಕಡಿದು ಹಾಕಲಾಗಿದೆ, ಆದರೆ ಕಾಫಿ ಗಿಡಗಳ ಮೇಲೆ ಇರುವುದರಿಂದ ಕಾರ್ಮಿಕರಿಗೆ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯ ವೆಂಕಪ್ಪ ಕೋಟ್ಯಾನ್ ಹೇಳುತ್ತಾರೆ.

ಹೆಚ್ಚಿನ ತೋಟಗಳಲ್ಲಿ ಔಷಧಿಗಳನ್ನು ಸಿಂಪಡಿಸಿದರೂ ಕಂಬಳಿ ಹುಳುಗಳು ತೋಟದಲ್ಲಿಯೇ ನೆಲೆವೂರಿರುವುದು ಸಮಸ್ಯೆ ಇನ್ನಷ್ಟು ಉಲ್ಭಣಗೊಂಡಿದೆ.

ಈ ಕಂಬಳಿ ಹುಳುಗಳ ಸಮಸ್ಯೆಗೆ ವಿಜ್ಞಾನಿಗಳೇ ಪರಿಹಾರ ನೀಡಬೇಕಾಗಿದೆ. ಕೂಡಲೇ ತೋಟದ ಮಾಲೀಕರು ಸಮರ್ಪಕವಾದ ಔಷಧಿಗಳನ್ನು ಸಿಂಪಡಿಸಿ ನಮಗೆ ತೊಂದರೆಯಾಗದ ರೀತಿಯಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.