ಗೋಣಿಕೊಪ್ಪಲು: ಶ್ರೀಮಂಗಲ ವ್ಯಾಪ್ತಿಯಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ಏಳು ಜಾನುವಾರು ಮಾಲೀಕರಿಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಪರಿಹಾರ ಧನದ ಚೆಕ್ ವಿತರಿಸಿದರು.
ಶ್ರೀಮಂಗಲದ ಪ್ರವಾಸಿ ಮಂದಿರದಲ್ಲಿ ನಡದ ಸಭೆಯಲ್ಲಿ ಜಾನುವಾರು ಮಾಲೀಕರಿಗೆ ತಲಾ ₹30 ಸಾವಿರದಂತೆ ಒಟ್ಟು ₹ 2.10 ಲಕ್ಷ ಪರಿಹಾರ ವಿತರಿಸಿದರು.
‘ಶ್ರೀಮಂಗಲ ಭಾಗದಲ್ಲಿ 7 ಕಡೆಗಳಲ್ಲಿ ಹುಲಿ ದಾಳಿಯಾಗಿ ಜಾನುವಾರುಗಳನ್ನು ರೈತರು ಕಳೆದುಕೊಂಡಿದ್ದರು. ಇದರಲ್ಲಿ ನಾಲ್ಕು ಪ್ರಕರಣದಲ್ಲಿ ನೇರವಾಗಿ ಅವರ ಖಾತೆಗೆ ಪರಿಹಾರ ಧನ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಮೂರು ಪ್ರಕರಣದ ಪರಿಹಾರವನ್ನು ಕೂರ್ಗ್ ಫೌಂಡೇಶನ್ ಅನುದಾನದ ಮೂಲಕ ಚೆಕ್ ನೀಡಲಾಗಿದೆ ಎಂದರು.
‘ಶಾಸಕ ಎ.ಎಸ್. ಪೊನ್ನಣ್ಣ ಅವರು ವನ್ಯಪ್ರಾಣಿ- ಮಾನವ ಸಂಘರ್ಷದಿಂದ ಬೆಳೆ ಹಾನಿ, ಜಾನುವಾರು ಸಾವು, ಮಾನವ ಪ್ರಾಣಹಾನಿಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 25 ವರ್ಷಗಳಿಂದ ವನ್ಯಪ್ರಾಣಿಗಳ ಹಾವಳಿ, ಮಾನವ ಪ್ರಾಣ ಹಾನಿ, ಬೆಳೆ ನಷ್ಟ ಪ್ರಕರಣಗಳು ಹೆಚ್ಚಾಗಿವೆ. ಒಂದುವರೆ ವರ್ಷಗಳಿಂದ ಶಾಸಕ ಪೊನ್ನಣ್ಣನವರು ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನವನ್ನು ನಿರಂತರವಾಗಿ ಸೆಳೆಯುತ್ತಾ ಬಂದಿದ್ದಾರೆ. ಹಾಗೆಯೇ ಈ ಸಮಸ್ಯೆಗೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ’ ಎಂದರು.
‘ಕಾಡಾನೆ ಹಾವಳಿ ತಡೆಗಟ್ಟುವ ಬಗೆಗೂ ಕಾರ್ಯಾಚರಣ ವೈಜ್ಞಾನಿಕವಾಗಿ ನಡೆಯುತ್ತಿದೆ. ಮುಂದಿನ ಎರಡು- ಮೂರು ವರ್ಷಗಳಲ್ಲಿ ಶಾಸಕ ಮಾನವ ಹಾಗೂ ವನ್ಯಪ್ರಾಣಿ ಸಂಘರ್ಷಕ್ಕೆ ಶಾಶ್ವತವಾದ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ’ ಹೇಳಿದರು.
ಪರಿಹಾರ ಪಡೆದವರು: ಶ್ರೀಮಂಗಲದ ಬಿ.ಎಂ. ಗಣಪತಿ, ನೆಮ್ಮಲೆಯ ಎಂ.ಜಿ. ಕಿಶೋರ್, ತೆರಾಲುವಿನ ಬಿ.ಸಿ. ಬೋಪಯ್ಯ ಅವರಿಗೆ ಪರಿಹಾರದ ಧನದ ಚೆಕ್ ಪಡೆದುಕೊಂಡರು. ಬೀರುಗದ ರುಕ್ಮಿಣಿ, ಬಿ.ಟಿ.ಮೋಹನ್, ಕುಟ್ಟದ ಪ್ರವರ್ಧನ್, ತೆರಾಲುವಿನ ಬಿ.ಎಸ್.ಉತ್ತಪ್ಪ ಅವರ ಖಾತೆಗೆ ಪರಿಹಾರ ನೇರ ವರ್ಗಾವಣೆಯಾಗಿದೆ ಎಂದು ಹೇಳಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮುಖಂಡರಾದ ಪಲ್ವಿನ್ ಪೂಣಚ್ಚ, ಅಜ್ಜಮಾಡ ಜಯ, ಕೊಡಗು ಬೆಳೆಗಾರ ಒಕ್ಕೂಟದ ಮಾಣೀರ ವಿಜಯ್ ನಂಜಪ್ಪ ಹಾಜರಿದ್ದರು. ಪರಿಸರವಾದಿ ಕುಂಞಂಗಡ ಬೋಸ್ ಮಾದಪ್ಪ, ಶ್ರೀಮಂಗಲ ವನ್ಯ ಜೀವಿ ವಿಭಾಗದ ಆರ್ ಎಫ್ ಓ ಅರವಿಂದ್, ಡಿ.ಆರ್.ಎಫ್ ಓ ಗಳಾದ ನವೀನ್, ಶ್ರೀಶೈಲಾ ಮಾಲಿಗೌಡ್ರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.