ನಾಪೋಕ್ಲು: ತಲಕಾವೇರಿ ಜಾತ್ರೆ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರ ಭಾಗಮಂಡಲದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು. ಅ. 17ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪತ್ತಾಯಕ್ಕೆ ಅಕ್ಕಿ ಹಾಕುವ ಸಾಂಪ್ರದಾಯಿಕ ಆಚರಣೆ ಸಂಭ್ರಮದಿಂದ ಜರುಗಿತು. ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರು ತಮ್ಮ ಐನ್ ಮನೆಯಲ್ಲಿ ಒಟ್ಟು ಸೇರಿ ಮನೆಯಿಂದ ಅಕ್ಕಿಯನ್ನು ತಂದು ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ 8.35 ಕ್ಕೆ ತುಲಾ ಲಗ್ನದಲ್ಲಿ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಸಾಂಪ್ರದಾಯಿಕವಾಗಿ ಅಕ್ಕಿಯನ್ನು ಹಾಕಿದರು. ಅಪ್ಪಾಜಿ ಅವರ ಮನೆಯಿಂದ ಅಕ್ಕಿಯನ್ನು ವಾದ್ಯ ಸಹಿತವಾಗಿ ತಂದು ಭಾಗಮಂಡಲ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪತ್ತಾಯಕ್ಕೆ ಅಕ್ಕಿಯನ್ನು ಹಾಕಿ ಪೂಜೆ ನೆರವೇರಿಸಲಾಯಿತು.
ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ತಲಕಾವೇರಿ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಪ್ರಧಾನ ಅರ್ಚಕರಾದ ಹರೀಶ್ ಭಟ್ ಮತ್ತು ಅರ್ಚಕ ವೃಂದದವರು, ಕೆ.ಜಿ ಭರತ್ ಕುಮಾರ್, ಬಿ.ಎಸ್ ತಮ್ಮಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.