ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯಲ್ಲಿ ಕಾವೇರಿ ಸಂಪೂರ್ಣ ಬರಿದಾಗಿದ್ದು, ಕಾಲ್ನಡಿಗೆಯಲ್ಲೇ ನದಿ ಮಾರ್ಗವನ್ನು ದಾಟಬಹುದಾಗಿದೆ. ಬಂಡೆಗಳು ಗೋಚರಿಸುತ್ತಿವೆ.
ಮಳೆಗಾಲದಲ್ಲಿ ರ‍್ಯಾಫ್ಟಿಂಗ್‌ಗೆ ಪ್ರಸಿದ್ಧವಾಗಿರುವ ಈ ನದಿ ಈಗ ನಿಶ್ಚಲವಾಗಿದೆ. ಪ್ರವಾಸಿಗರಿಗೆ ಕನಿಷ್ಠ ದೋಣಿವಿಹಾರದ ಖುಷಿಯೂ ಸಿಗದೇ ನಿರಾಶರಾಗಿ ವಾಪಸಾಗುತ್ತಿದ್ದಾರೆ. ಬಿರುಬಿಸಿಲಿನಲ್ಲಿ ಕಾವಲಿಯಂತೆ ಆಗಿರುವ ಬಂಡೆಗಳ ಮೇಲೆ ನಡೆಯುತ್ತಾ, ಸಾಕಾನೆ ಶಿಬಿರ ತಲುಪುವಷ್ಟರಲ್ಲಿ ಬಸವಳಿಯುತ್ತಿದ್ದಾರೆ.
ಪ್ರತಿ ಬೇಸಿಗೆಯಲ್ಲೂ ಇಲ್ಲಿ ನೀರು ಕಡಿಮೆಯಾಗುತ್ತಿತ್ತು. ಹಿಂದೆಂದೂ ಈಗಿನಂತೆ ಬರಿದಾಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಮರಳಿನ ಮೂಟೆ ಇರಿಸಿ ನದಿಯ ಆಚೆಗಿನ ದಡಕ್ಕೆ ಸಾಗಲು ಅನುವು ಮಾಡಿ ಕೊಡಲಾಗುತ್ತಿತ್ತು. ಕೆಲವೆಡೆ ದೋಣಿವಿಹಾರ ಇರುತ್ತಿತ್ತು. ಈ ಬಾರಿ ಅಂತಹ ಚಿತ್ರಣವಿಲ್ಲ.
‘ಇಲ್ಲಿ ಆಳವಾದ ಸುಳಿ ಇದೆ’ ಎಂಬ ಫಲಕಗಳು ನದಿಯನ್ನೇ ನಾಚಿಸುತ್ತಿವೆ. ಗುಂಡಿಗಳಲ್ಲಿ ಕೆಲವೆಡೆ ಮಾತ್ರ ನೀರು ನಿಂತು ಪಾಚಿಗಟ್ಟಿದೆ. ಇಂತಹ ಗುಂಡಿಗಳಲ್ಲಿ ಒದ್ದಾಡುತ್ತಿರುವ ಮೀನುಗಳನ್ನು ಹಕ್ಕಿಗಳು ಹಿಡಿದು ತಿನ್ನುತ್ತಿವೆ. ಕೆಲವೆಡೆ ನೀರು, ಆಮ್ಲಜನಕ ಇಲ್ಲದೇ ಮೀನುಗಳು ಸತ್ತು ಕೊಳೆತು ದುರ್ನಾತ ಬೀರುತ್ತಿದೆ.
ಸಾಕಾನೆ ಶಿಬಿರದಲ್ಲಿ ಆನೆಗಳಿಗೂ ಸ್ನಾನ ಮಾಡಿಸಲು ಆಗದ ಸ್ಥಿತಿ ಇದೆ. ಗುಂಡಿಗಳಲ್ಲಿ ನಿಂತಿರುವ ಪಾಚಿಗಟ್ಟಿದ ನೀರೇ ಇವುಗಳಿಗೆ ಆಧಾರವಾಗಿದೆ. ತಂಪಾಗಿರುತ್ತಿದ್ದ ಈ ಸ್ಥಳದಲ್ಲಿ ಈಗಿನ ಬೇಸಿಗೆಯಲ್ಲಿ ಬೆವರಿಳಿಯುವ ಸ್ಥಿತಿ ನಿರ್ಮಿಸಿದೆ. ವ್ಯಾಪಾರಿಗಳ ಸಂಖ್ಯೆಯೂ ಕುಗ್ಗಿದೆ. ಎಲ್ಲರಿಗೂ ಮಳೆ ನಿರೀಕ್ಷೆಯಿದೆ.
ಕೊಳವೆಬಾವಿ ನೀರೇ ಆನೆಗಳಿಗೆ ಆಧಾರ!
ಸಾಕಾನೆಗಳು ಈಗ ಕೊಳವೆಬಾವಿಯ ನೀರಿಗೆ ಮೊರೆ ಹೋಗಿವೆ. ನದಿಯಲ್ಲಿ ನೀರು ಬತ್ತಿರುವುದರಿಂದ ಅರಣ್ಯ ಇಲಾಖೆ ಶಿಬಿರದಲ್ಲಿ ಕೊಳವೆಬಾವಿ ಕೊರೆಸಿದೆ. ಸದ್ಯ, ಈ ನೀರನ್ನೇ ಸಾಕಾನೆಗಳಿಗೆ ಕುಡಿಯುವುದಕ್ಕೆ ಹಾಗೂ ಸ್ನಾನಕ್ಕೆ ಬಳಸಲಾಗುತ್ತಿದೆ.
‘ಹೊಸದಾಗಿ ಕೊರೆಸಿರುವ ಕೊಳವೆಬಾವಿಯಲ್ಲಿ ನೀರಿದ್ದು, ಸದ್ಯಕ್ಕೆ ಸಮಸ್ಯೆ ಉಂಟಾಗಿಲ್ಲ’ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕಾವೇರಿ ನದಿ ಇಷ್ಟು ಬರಿದಾಗಿರುವುದನ್ನು ನಾನು ನೋಡಿದ್ದು ಇದೇ ಮೊದಲು. ಮಳೆ ಇಲ್ಲದೇ ಪ್ರಾಣಿ, ಪಕ್ಷಿಗಳಿಗೆ ತುಂಬಾ ಕಷ್ಟವಾಗಿದೆ.ಕೆ.ರವಿ ಮುತ್ತಪ್ಪ, ಕೊಡಗು ಜಿಲ್ಲೆಯ ಮುಳುಗುತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.