ADVERTISEMENT

ಕುಂದ ಮಹದೇವರ ದೇವಸ್ಥಾನದಲ್ಲಿಂದು ‘ಕಾವೇರಿ’ ಅಭಿಷೇಕ

ಜೆ.ಸೋಮಣ್ಣ
Published 18 ಅಕ್ಟೋಬರ್ 2024, 7:06 IST
Last Updated 18 ಅಕ್ಟೋಬರ್ 2024, 7:06 IST
ಗೋಣಿಕೊಪ್ಪಲು ಬಳಿಯ ಕುಂದ ಬೆಟ್ಟದ ಮೇಲಿನ ದೇವಸ್ಥಾನ
ಗೋಣಿಕೊಪ್ಪಲು ಬಳಿಯ ಕುಂದ ಬೆಟ್ಟದ ಮೇಲಿನ ದೇವಸ್ಥಾನ   

ಗೋಣಿಕೊಪ್ಪಲು: ಪೊನ್ನಂಪೇಟೆ ಬಳಿಯ ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದಲ್ಲಿ ಅ.18ರಂದು ಅಲ್ಲಿನ ಮಹದೇವ ದೇವರಿಗೆ ಕಾವೇರಿ ತೀರ್ಥ ಅಭಿಷೇಕ ನಡೆಯಲಿದೆ.

ಇದೇ ಸಂದರ್ಭದಲ್ಲಿ ಕೊಡಗಿನ ಮೊದಲ ಬೋಡ್ ನಮ್ಮೆ ಎಂದು ಖ್ಯಾತಿ ಹೊಂದಿರುವ ‘ಕುಂದಾತ್ ಬೊಟ್ಟ್ ಬೋಡ್ ನಮ್ಮೆ’ಗೆ ಚಾಲನೆಯೂ ದೊರಕಲಿದೆ. ಸಾಂಪ್ರದಾಯಿಕ ದೋಳ್ ತೆಗೆಯುವ ಮೂಲಕ ಕುಂದ ಬೆಟ್ಟದಲ್ಲಿ ಚಾಲನೆ ಕೊಡಲಿದ್ದಾರೆ.

ಕುಂದ ಮುಗುಟಗೇರಿ ಸಮೀಪದ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಪ್ರತಿವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವದ ದಿನ ಹಾಗೂ ಮರುದಿನ ಹಬ್ಬ ನಡೆಯಲಿದೆ. ಕಾವೇರಿ ತೀರ್ಥವನ್ನು ತಂದು ಬೆಟ್ಟದ ಮೇಲಿನ ಮಹದೇವ ದೇವರಿಗೆ ಅಭಿಷೇಕ ಮಾಡುತ್ತಾರೆ. ಈ ವರ್ಷವೂ ಅ. 18ರಂದು ಈ ಅಭಿಷೇಕ ಜರುಗಲಿದೆ ಎಂದು ಭಂಡಾರ ತಕ್ಕರಾರ ಸಣ್ಣುವಂಡ ಅಪ್ಪಿ ಪೂಣಚ್ಚ ತಿಳಿಸಿದ್ದಾರೆ.

ADVERTISEMENT

ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಅಭಿಷೇಕ ನಡೆದ ಬಳಿಕ ಬೋಡ್ ನಮ್ಮೆ ಹಬ್ಬ ಜರುಗಲಿದೆ.

18ರಂದು ಮಧ್ಯಾಹ್ನ 12.30ಕ್ಕೆ ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ಬಲ್ಯ (ಐನ್ ಮನೆ) ಮನೆಯಿಂದ ಕೃತಕವಾಗಿ ತಯಾರಿಸಿ ಶೃಂಗರಿಸಲಾದ ತಲಾ ಒಂದೊಂದು ಕುದುರೆಯನ್ನು ಹೊತ್ತವರು ಬೆಟ್ಟದ ತಪ್ಪಲಿನಲ್ಲಿರುವ ನಾಡ್ ದೇವಸ್ಥಾನಕ್ಕೆ ತೆರಳಲಿದ್ದಾರೆ. ಸಮೀಪದ ಅಂಬಲದಲ್ಲಿ ವಿವಿಧ ವಿಧಿವಿಧಾನಗಳನ್ನು ಆಚರಿಸಿ ನಂತರ ಕಡಿದಾದ ಬೆಟ್ಟವನ್ನು ಏರಲಿದ್ದಾರೆ. ಕುದುರೆಯ ಜತೆಯಲ್ಲಿಯೇ ಭಕ್ತರು ಕೂಗಿ ಕೊಂಡು ಬೆಟ್ಟ ಏರುತ್ತಾರೆ.

ಕಡಿದಾದ ಬೆಟ್ಟವನ್ನು ಏರಿದ ಮೇಲೆ ಅಲ್ಲಿ ಪಾಂಡವರು ನಿರ್ಮಿಸಿದರು ಎನ್ನಲಾಗುವ ಬೊಟ್ಟ್'ಲಪ್ಪ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ. ಮತ್ತೊಂದು ಕಡೆ ಜನತೆ ಕುದುರೆ ಜತೆ ವಾದ್ಯಮೇಳದೊಂದಿಗೆ ಕುಣಿದು ಕುಪ್ಪಳಿಸುತ್ತಾರೆ. ಇಲ್ಲಿ ಜಾತ್ರೆ ನಡೆಯಲಿದ್ದು ತಿಂಡಿ ತಿನಿಸುಗಳು, ಮಕ್ಕಳ ಆಟಿಕೆ ವಸ್ತುಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಅಂಗಡಿಗಳೆಲ್ಲ ತೆರೆದಿರುತ್ತವೆ.

ಕುಂದ ಬೆಟ್ಟದ ಇತಿಹಾಸ: ಗೋಣಿಕೊಪ್ಪಲಿನಿಂದ 3 ಕಿ.ಮೀ, ಪೊನ್ನಂಪೇಟೆಯಿಂದ 5 ಕಿಮೀ ದೂರದ ಕುಂದದಲ್ಲಿ ಬೆಟ್ಟದ ಮೇಲೆ ಪಾಂಡವರು ನಿರ್ಮಿಸಿದ್ದರು ಎನ್ನಲಾದ ಕಲ್ಲಿನ ದೇವಾಲಯವಿದೆ.

ಇದು ಮಹದೇವರ ದೇವಾಲಯ. ಈ ದೇವಾಲಯಕ್ಕೆ ಬಾಗಿಲಿಲ್ಲ. ಪಾಂಡವರು ಒಂದೇ ರಾತ್ರಿಯಲ್ಲಿ ಬೆಳಗಾಗುವುದರ ಒಳಗೆ ದೇವಸ್ಥಾನ ನಿರ್ಮಿಸಿ ಅದಕ್ಕೆ ಬಾಗಿಲು ಅಳವಡಿಸಬೇಕು ಎಂದು ಪಣ ತೊಟ್ಟಿದ್ದರಂತೆ. ಆದರೆ, ಈ ವೇಳೆಗೆ ಬೆಳಕು ಹರಿದಿದ್ದರಿಂದ ಬಾಗಿಲು ಅಳವಡಿಸಲಾಗಲಿಲ್ಲ ಎಂದು ಅದರ ಹಿಂದಿನ ಪುರಾಣವನ್ನು ಹೇಳುತ್ತಾರೆ ಇಲ್ಲಿನ ಹಿರಿಯರು. ದೇವಸ್ಥಾನದ ಮೇಲಿನ ಗೋಪುರವನ್ನು ಸ್ಥಳೀಯರು ಈಚಿನ ವರ್ಷಗಳಲ್ಲಿ ಅಳವಡಿಸಿದ್ದಾರೆ.

ಹಾರುವ ಕುದುರೆ: ಅ.18ರಂದು ಬೆಟ್ಟದ ಮೇಲೆ ಬೋಡ್ ನಮ್ಮೆಗೆ ಚಾಲನೆ ದೊರಕಲಿದೆ. ಇದು ಕೊಡಗಿನ ಮೊದಲ ಬೋಡ್ ನಮ್ಮೆ. ಕೊನೆಯ ಬೋಡ್ ನಮ್ಮೆ ಜೂನ್ ಮೊದಲ ವಾರದಲ್ಲಿ ಪಾರಾಣೆಯಲ್ಲಿ ನಡೆಯಲಿದೆ. ಹೀಗಾಗಿ, ಕುಂದಾತ್ ಬೊಟ್ಟ್ ಲ್ ನೇಂದಾ ಕುದುರೆ ಪಾರಾಣ ಮಾನೀಲ್ ಅಳ್ಂಜ ಕುದುರೆ (ಕುಂದ ಬೆಟ್ಟದಲ್ಲಿ ನೆಗೆದ ಕುದುರೆ ಪಾರಾಣೆ ಮೈದಾನದಲ್ಲಿ ಇಳಿದ ಕುದುರೆ) ಎಂದು ಹಾಡುತ್ತಾರೆ ಎಂಬ ಅನಿಸಿಕೆ ಕುಂದ ಹಳ್ಳಿಗಟ್ಟು ನಿವಾಸಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.