ADVERTISEMENT

ಅ. 17ರಂದು ಕಾವೇರಿ ತೀರ್ಥೋದ್ಭವ: ಅಗತ್ಯ ಸಿದ್ಧತೆಗೆ ಸಚಿವ ಭೋಸರಾಜು ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 3:12 IST
Last Updated 15 ಸೆಪ್ಟೆಂಬರ್ 2024, 3:12 IST
   

ಮಡಿಕೇರಿ: ತಲಕಾವೇರಿಯಲ್ಲಿ ಅ. 17ರಂದು ಬೆಳಿಗ್ಗೆ 7.40ಕ್ಕೆ ನಡೆಯುವ ಪವಿತ್ರ ತೀರ್ಥೋದ್ಭವ ಸಂಬಂಧ ಭಾಗಮಂಡಲದಲ್ಲಿ ಶನಿವಾರ ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಹಲವು ಸಮಸ್ಯೆಗಳು ಪ್ರತಿಧ್ವನಿಸಿದರೆ, ಕೆಲವು ಸಲಹೆಗಳು, ಒತ್ತಾಯಗಳು ಸ್ಥಳೀಯರಿಂದ ಕೇಳಿ ಬಂದವು.

ಕರಿಕೆ ಗ್ರಾಮದ ಕೋಡಿ ಪೊನ್ನಪ್ಪ ಅವರು ‘ಕರಿಕೆ-ಭಾಗಮಂಡಲ ಹಾಗೂ ಅರಂತೋಡು-ಭಾಗಮಂಡಲ ರಸ್ತೆಗಳ ದುಸ್ಥಿತಿಯನ್ನು ಪ್ರಸ್ತಾಪಿಸಿ, ಕೂಡಲೇ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಎಂ.ಬಿ.ದೇವಯ್ಯ, ‘ಮಡಿಕೇರಿ-ತಲಕಾವೇರಿ ಮಾರ್ಗ ಸಿಮೆಂಟ್ ರಸ್ತೆ ನಿರ್ಮಿಸಿದಲ್ಲಿ ಶಾಶ್ವತವಾದ ರಸ್ತೆ ಇರುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

ಸ್ಥಳೀಯರೊಬ್ಬರು ಮೀನು, ಮಾಂಸ ಮಾರಾಟವನ್ನು ಜಿಲ್ಲೆಯಾದ್ಯಂತ ನಿಷೇಧಿ ಸಬೇಕು ಎಂದು ಮನವಿ ಮಾಡಿದರು.

ಪುಲಿಯಂಡ ಜಗದೀಶ್ ಮಾತನಾಡಿ, ‘ಯಾವುದೇ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಶಾಸಕರು ಆಗಾಗ್ಗೆ ಪರಿಶೀಲಿಸಬೇಕು’ ಎಂದು ಕಿವಿಮಾತು ಹೇಳಿದರು.

ಬಿ.ಎಸ್.ತಮ್ಮಯ್ಯ ಮಾತನಾಡಿ, ‘ಕೊಡಗು ಏಕೀಕರಣ ರಂಗದ ವತಿಯಿಂದ ಅನ್ನ ಸಂತರ್ಪಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು’ ಎಂದರು.

ಹೊಸೂರು ಸತೀಶ್ ಕುಮಾರ್ ಅವರು ಮೇಲ್ಸುತುವೆಯ ಅಲ್ಲಲ್ಲಿ ನೀರು ನಿಲ್ಲುತ್ತಿರುವ ವಿಷಯ ಪ್ರಸ್ತಾಪಿಸಿದರು.

ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಪ್ರತಿಕ್ರಿಯಿಸಿ, ‘ಮೇಲ್ಸುತುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತಾಗಲು ಕಾಮಗಾರಿ ಕೈಗೊಳ್ಳಲಾಗುವುದು. ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗಿದ್ದು, ಕೂಡಲೇ ಇನ್ನೊಂದು ವಾರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಮಡಿಕೇರಿ ನಗರಸಭೆ ಪೌರಾಯುಕ್ತ ವಿಜಯ್ ಅವರು ನಗರಸಭೆಯಿಂದ ಸಿಬ್ಬಂದಿ ನಿಯೋಜಿಸಿ ಸ್ವಚ್ಛತೆಗೆ ಒತ್ತು ನೀಡಲಾಗುವುದು ಎಂದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ‘ವೈದ್ಯರನ್ನು ನಿಯೋಜಿಸಲಾಗುವುದು’ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಾತ್ರಾ ಪ್ರಯುಕ್ತ ಸ್ಥಳೀಯ ಸಾಂಸ್ಕೃತಿಕ ಹಾಡುಗಾರಿಕೆಯನ್ನು ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರತಿಧ್ವನಿಸಿದ ವಿದ್ಯುತ್ ಸಮಸ್ಯೆ:

ಬಿ.ಎಸ್.ತಮ್ಮಯ್ಯ ಹಾಗೂ ಸುನಿಲ್ ಪತ್ರಾವೋ ಅವರು ಭಾಗಮಂಡಲ, ತಲಕಾವೇರಿ ಭಾಗದಲ್ಲಿನ ವಿದ್ಯುತ್ ಸಮಸ್ಯೆಯನ್ನು ಪ್ರಸ್ತಾಪಿಸಿದರು.

ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಪ್ರತಿಕ್ರಿಯಿಸಿ, ‘ಅಗತ್ಯ ವಿದ್ಯುತ್ ಪೂರೈಸಲಾಗುವುದು. ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಲಾಗುವುದು. ಭಾಗಮಂಡಲ ತಲಕಾವೇರಿ ಮಾರ್ಗದಲ್ಲಿ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಸ್ಥಳಾಂತರಿಸಿ ಸರಿಪಡಿಸಲಾಗುವುದು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಪ್ರತೀ ಬಾರಿಯೂ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗುತ್ತದೆ. ಇದನ್ನು ನಿಯಂತ್ರಿಸಲು ಭಕ್ತಾದಿಗಳು ಸಹಕರಿಸಬೇಕು’ ಎಂದು ಕೋರಿದರು.

ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನಿರಾ ಮೈನಾ, ಸ್ಥಳೀಯರಾದ ಪ್ರಮೋದ್, ಕೆ.ಜೆ.ಭರತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಬಲ್ಲಡ್ಕ ಅಪ್ಪಾಜಿ, ಕಾಳನ ರವಿ ಭಾಗವಹಿಸಿದ್ದರು.

‘ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಿ’

ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ‘ಅ. 17ರಂದು ಬೆಳಿಗ್ಗೆ 7.40 ಗಂಟೆಗೆ ಪವಿತ್ರ ತೀರ್ಥೋದ್ಭವ ಸಂಭವಿಸುವುದರಿಂದ ರಾತ್ರಿ ವೇಳೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ವಿಶೇಷವಾಗಿ ಭಕ್ತಾದಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.

ಈಗ ಮಳೆ ಕಡಿಮೆಯಾಗಿದ್ದು, ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ರಸ್ತೆ ಬದಿಯ ಗಿಡಗಳನ್ನು ಕಡಿಯಬೇಕು. ಈ ಸಂಬಂಧ ಅರಣ್ಯ ಅಧಿಕಾರಿಗಳು ತಗಾದೆ ತೆಗೆಯಬಾರದು ಎಂದೂ ಸೂಚಿಸಿದರು.

ಪೊಲೀಸ್ ಇಲಾಖೆ ಅಧಿಕಾರಿಗಳು ‌ಅಗತ್ಯ ಬಂದೋಬಸ್ತ್ ಮಾಡಬೇಕು, ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಸೌಲಭ್ಯ ಒದಗಿಸಬೇಕು,  ಕಾವೇರಿ ನೀರಾವರಿ ನಿಗಮ, ಸೆಸ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಹಂತದಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಭಕ್ತಾದಿಗಳಿಗೆ ತೊಂದರೆಯಾಗದಿರಲಿ’

ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಧಾರ್ಮಿಕ ಆಚರಣೆ ಮತ್ತು ವಿಚಾರಗಳಿಗೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ದೇವಾಲಯ ಸಮಿತಿಯವರು ಕುಳಿತು ನಿರ್ಧಾರ ತೆಗೆದುಕೊಳ್ಳಬೇಕು. ಈ ಬಗ್ಗೆ ಹಿರಿಯರ ಜೊತೆ ಚರ್ಚಿಸಬೇಕು. ಯಾರಿಗೂ ನೋವು ಉಂಟಾಗದಂತೆ ಗಮನಹರಿಸುವುದು ಅತ್ಯವಶ್ಯಕ ಎಂದು ಹೇಳಿದರು.

ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ನಿರ್ಲಕ್ಷ್ಯ ಕಂಡುಬಂದಲ್ಲಿ ಕೂಡಲೇ ಗಮನಕ್ಕೆ ತರಬೇಕು ಎಂದೂ ಕೋರಿದರು.

ಪವಿತ್ರ ತೀರ್ಥೋದ್ಭವ ಉಂಟಾಗುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಬೇಕು. ಮಡಿಕೇರಿ-ಭಾಗಮಂಡಲ, ಕರಿಕೆ-ಭಾಗಮಂಡಲ, ವಿರಾಜಪೇಟೆ-ಭಾಗಮಂಡಲ ರಸ್ತೆಗುಂಡಿ ಮುಚ್ಚಬೇಕು. ಭಾಗಮಂಡಲ-ತಲಕಾವೇರಿ ರಸ್ತೆ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಶುಚಿತ್ವಕ್ಕೆ ಒತ್ತು ನೀಡಬೇಕು. ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.