ನಾಪೋಕ್ಲು: ಅತ್ತ ನಾಡಿನ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದಲ್ಲಿ ಗುರುವಾರ ಸಾವಿರಾರು ಭಕ್ತರು ಭಾಗಿಯಾಗಿ ಸಂಭ್ರಮಿಸಿದರು. ಇತ್ತ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲೂ ವಿವಿಧ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಭಕ್ತರು ತ್ರಿವೇಣಿ ಸಂಗಮದಲ್ಲಿ ಕೇಶವಮುಂಡನ, ಪಿಂಡಪ್ರದಾನ ಮಾಡಿದರು. ಬಳಿಕ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ತ್ರಿಮೂರ್ತಿಗಳಿಗೆ ಪೂಜೆ ಸಲ್ಲಿಸಿ ತಲಕಾವೇರಿಗೆ ತೆರಳಿದರು. ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನ ಮಾಡಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ತಲಕಾವೇರಿ ಕ್ಷೇತ್ರಗಳಿಗೆ ಭಕ್ತರ ಸಂಖ್ಯೆ ಹರಿದು ಬಂತು. ಭಕ್ತರಿಗೆ ಸಾರಿಗೆ ಸಂಸ್ಥೆ ವತಿಯಿಂದ ತಲಕಾವೇರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭಾಗಮಂಡಲದ ಮಾರುಕಟ್ಟೆ ಬಳಿ ಗಜಾನನ ಯುವಕ ಸಂಘದ ವತಿಯಿಂದ ಭಕ್ತರಿಗೆ ತೀರ್ಥ ವಿತರಣೆ ಮಾಡಲಾಯಿತು. ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಭಕ್ತರಿಗೆ ಪಡಿಯಕ್ಕಿ ವಿತರಿಸಲಾಯಿತು. ಕಿರು ಸಂಕ್ರಮಣ ಹಿನ್ನೆಲೆ ಮುಂದಿನ ಒಂದು ತಿಂಗಳ ಕಾಲ ಭಾಗಮಂಡಲ-ತಲಕಾವೇರಿ ಕ್ಷೇತ್ರಗಳಿಗೆ ಭಕ್ತರು ಭೇಟಿ ನೀಡಿ ತೀರ್ಥ ಪಡೆಯುವುದು ವಿಶೇಷವಾಗಿದೆ.
ಭಾಗಮಂಡಲದಿಂದ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 28 ನೇ ವರ್ಷದ ಕಾವೇರಿ ರಥಯಾತ್ರೆ ಗುರುವಾರ ಮಧ್ಯಾಹ್ನ ಆರಂಭಗೊಂಡು ಭಕ್ತರಿಗೆ ತೀರ್ಥ ವಿತರಣೆಯನ್ನು ಚೇರಂಗಾಲ, ಅಯ್ಯಂಗೇರಿ ಪುಲಿಕೋಟು, ಪೇರೂರು ಬಲ್ಲಮಾವಟಿ, ಚೋನಕೆರೆ, ನಾಪೋಕ್ಲು ಗ್ರಾಮಗಳಲ್ಲಿ ಪೂರೈಸಿ ಸಮೀಪದ ಪಾಲೂರಿನ ಹರಿಶ್ಚಂದ್ರ ದೇವಾಲಯದಲ್ಲಿ ಸಮಾಪ್ತಿಗೊಂಡಿತು. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಢ ರೋಜಿ ಚಿಣ್ಣಪ್ಪ, ಪದಾಧಿಕಾರಿ ಬಿದ್ದಾಟಂಡ ಮಮತಾ ಚಿಣ್ಣಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.